

ಬದುಕಿನಲ್ಲಿ ಮಾನಾಪಮಾನಗಳು ಸಾಮಾನ್ಯ. ಅಪಮಾನಗಳು ಹತ್ತಿರದವರಿಂದ ಆಗಬಹುದು ಇಲ್ಲವೆ ಸಮಾಜಿಕರಿಂದ ಆಗಬಹುದು. ಅಪಮಾನ ಅಪಮಾನವೇ. ಅದರ ನೋವು ಅನುಭವಿಸಿದವರಿಗೇ ಗೊತ್ತು. ಅದೊಂದು ಯಾತನೆಯೇ ಸರಿ. ಆದರೆ ಧೃತಿಗೆಡಬಾರದಷ್ಟೆ! ಅಪಮಾನ ಮಾಡುವುದು ಆ ವ್ಯಕ್ತಿಯನ್ನು ನಿಯಂತ್ರಣದಲ್ಲಿ ಇಡುವ ವ್ಯರ್ಥಪ್ರಯತ್ನವಷ್ಟೇ. ಆದರೆ, ಆದ ಅಪಮಾನವನ್ನೇ ಅಭಿಮಾನ ವನ್ನಾಗಿಸಿಕೊಂಡ ಉದಾಹರಣೆ ಧ್ರುವನಿಂದ ದೊರೆಯುತ್ತದೆ. ಧ್ರುವನಿಗೆ ಅಪಮಾನವಾದ್ದರಿಂದಲೇ ಭಗವಾನ್ ನಾರಾಯಣನ ಕೃಪೆ ದೊರೆತದ್ದು. ನಕ್ಷತ್ರಲೋಕದಲ್ಲಿ ಶಾಶ್ವತವಾದ ಸ್ಥಾನ ಗಳಿಸಿಕೊಂಡಿದ್ದು. ಮುಕ್ತಿಯ ಮಂಟಪಕ್ಕೆ ಭಕ್ತಿಯೇ ಮೆಟ್ಟಿಲು. ಹಾಗಾಗಿ ಅಪಮಾನವಾದರೆ ಯಾರೂ ಮನಸ್ಸನ್ನು ಕುಗ್ಗಿಸಿಕೊಳ್ಳಬೇಕಿಲ್ಲ, ಬೇಸರಿಸಿಕೊಳ್ಳಬೇಕಿಲ್ಲ. ಅದರಿಂದ ಒಳಿತೇ ಆಗುತ್ತದೆ. ಆದರೆ ಅಪಮಾನವನ್ನು ದ್ವೇಷಸಾಧನೆಯ ಅಸ್ತ್ರವನ್ನಾಗಿಸದೆ ಪ್ರೇರಣೆಯ ಅಸ್ತ್ರವನ್ನಾಗಿಸಿಕೊಳ್ಳಬೇಕು.
ಅಂದಹಾಗೆ ಸಭಾಮಧ್ಯದಲ್ಲಿ ದ್ರೌಪದಿಗೆ ಅಪಮಾನ ಮಾಡಿದ ದುರ್ಯೋಧನನಿಗೆ ಹಾನಿಯೇನೂ ತಪ್ಪಲಿಲ್ಲವಲ್ಲ. ಆಗುವ ಅಪಮಾನಗಳು ನಮ್ಮ ಧೀಃಶಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇನ್ನು ಕನ್ನಡ ಸಾಹಿತ್ಯದ ಗಂಡುಕವಿ ಎಂದೇ ಕರೆಸಿಕೊಂಡಿರುವ ಕವಿರನ್ನ ವಿದ್ಯಾವಾಂಛೆಯಿಂದ ವಿದ್ಯಾಗುರುವನ್ನು ಅರಸುವಾಗಲೂ ‘ವಿದ್ಯೆಯೇನು ಕೊಂಡು ತಂದು ಹೊತ್ತು ಮಾರಲು ಬಳೆಯ ಮಲ್ಹಾರವೆ?’ ಎಂದು ಅವಮಾನಿಸಿದರೂ ಅವನು ಛಲ ಬಿಡಲಿಲ್ಲ. ರನ್ನನ ಕೃತಿ ‘ರತ್ನಮುಮಂ ಪೇಳ್ ಪರೀಕ್ಷಿಪರ್ಗೆಂಟೆರ್ದೆಯೇ’ ಎನ್ನುವಲ್ಲಿಯವರೆಗೆ ಬೆಳೆದು ನಿಂತ ಪರಿ ರೋಮಾಂಚನ ತರಿಸುವಂಥದ್ದು. ಹೀಗೆ ಅಪಮಾನ, ನಿಂದೆ, ಕುಹಕ, ವ್ಯಂಗ್ಯ, ಹುನ್ನಾರಗಳು ಇದ್ದೇ ಇರುತ್ತವೆ. ಇವೆಲ್ಲವೂ ಸಾಫಲ್ಯದ ಸೋಪಾನಗಳೇ. ಅಲ್ವೆ? ಅಪಮಾನವಾದರೆ ಒಳಿತೆಂದು ತಿಳಿಯಬೇಕು. ಅಪಮಾನದಿಂದ ಅಭಿಮಾನದೆಡೆಗೆ ಸಾಗಬೇಕು.
(ಲೇಖಕರು ವಿಮರ್ಶಕರು, ವ್ಯಾಖ್ಯಾನಕಾರರು)