ಗೂಡು ಬರಿದಾಗುವ ಆತಂಕಕ್ಕೆ ವಾಸ್ತವ ಅರಿಯುವುದೇ ಮದ್ದು

Hello Doctor
Published on

ಅದೊಂದು ಸುಂದರ ಕೂಡು ಕುಟುಂಬ. ಮನೆಯಲ್ಲಿ ಎಲ್ಲವೂ ಇತ್ತು. ಈ ಮನೆಯ ಯಜಮಾನರಿಗೆ ಒಬ್ಬನೇ ಮಗ. ತಂದೆ ತೀರಾ ಹೇಳಿಕೊಳ್ಳುವಂತಹ ಆರ್ಥಿಕ ಹಿನ್ನೆಲೆಯಿಂದ ಬಂದವರಲ್ಲ. ಮಿಡಲ್ ಕ್ಲಾಸ್ ಫ್ಯಾಮಿಲಿ. ಇದ್ದುದರಲ್ಲೇ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದ ನೆಮ್ಮದಿ ಆ ಪಾಲಕರದು. ಅದಕ್ಕೆ ಪೂರಕವಾಗಿ ಮಗನೂ ಉತ್ತಮವಾಗಿ ಓದಿದ. ಒಳ್ಳೆಯ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿ ಒಳ್ಳೆಯ ಕೆಲಸವನ್ನೂ ಪಡೆದ. ಹೆತ್ತವರ ಬದುಕಿಗೆ ಸಾರ್ಥಕತೆ ತಂದುಕೊಟ್ಟ. ಮನೆ ಮಂದಿ ಎಲ್ಲ ಸಂತಸ ಗೊಂಡರು. ಇದಾದ ಕೆಲ ದಿನಗಳ ನಂತರ ಒಳ್ಳೆಯ ಸಂಬಂಧ ಹುಡುಕಿ ಮಗನಿಗೆ ಮದುವೆಯನ್ನೂ ಮಾಡಿದರು. ಸೊಸೆಯೂ ಅಷ್ಟೇ ಉತ್ತಮ ಗುಣದವಳು ಸಿಕ್ಕಳು. ಇದೇ ಸಂತಸದಲ್ಲಿ ದಿನಗಳು ಸಾಗಹತ್ತಿದವು. ಆಗ ಎಲ್ಲವೂ ಸರಿ ಇತ್ತು. ಮುಂದೊಂದು ದಿನ ಮಗನಿಗೆ ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗುವ ಅನಿವಾರ್ಯತೆ ಎದುರಾಯಿತು. ಇದು ಒಂದೆಡೆ ಸಂತಸ, ಅಭಿಮಾನ ಮೂಡಿಸಿದರೆ ಇನ್ನೊಂದೆಡೆ ಮಗನನ್ನು ಬಿಟ್ಟು ಇರಬೇಕೆನ್ನುವ ವಿರಹ ವೇದನೆಯಿಂದ ಮಾನಸಿಕ ಖಿನ್ನತೆಗೆ ಕಾರಣವಾಯಿತು.

ಇದು ಒಂದು ಉದಾಹರಣೆಯಷ್ಟೇ. ಇಂದು ನಮ್ಮ ಮಧ್ಯೆ ಅದೆಷ್ಟೋ ಇಂತಹ ಪ್ರಕರಣಗಳು ಇವೆ. ಇದನ್ನೇ ಮನೋವಿಜ್ಞಾನ ದಲ್ಲಿ ಎಂಪ್ಟಿ ನೆಸ್ಟ್ ಸಿಂಡ್ರೋಮ್ (Empty nest Syndrome) ಎಂದು ಕರೆಯಲಾಗುತ್ತದೆ. ಅಂದರೆ ಗೂಡು ಬರಿದಾಗುವ ಆತಂಕ. ಹೌದು ನಮ್ಮ ಹಿರಿಯರು ತುಂಬಾ ಕಷ್ಟ ಪಟ್ಟು ಮಕ್ಕಳನ್ನು ಓದಿಸಿರುತ್ತಾರೆ. ಬಲುಪ್ರೀತಿಯಿಂದ ಸಾಕಿರುತ್ತಾರೆ. ಪ್ರತಿದಿನ ಕಣ್ಣೆದುರು ನೋಡಲೇಬೇಕು ಎಂಬ ಪ್ರವೃತ್ತಿಯೂ ಅವರದ್ದಾಗಿರುತ್ತದೆ. ಅದರಲ್ಲಿ ಒಬ್ಬನೇ ಮಗನಿದ್ದ ಕುಟುಂಬದಲ್ಲಿ ಇಂತಹ ಒಲವು ಜಾಸ್ತಿ. ಏತನ್ಮಧ್ಯೆ ಮಗ ಉದ್ಯೋಗ ಅಥವಾ ವ್ಯವಹಾರ ನಿಮಿತ್ತ ತಮ್ಮಿಂದ ದೂರ ಹೊರಡುತ್ತಾನೆ ಎಂದರೆ ಅವರಿಗೆ ಅದನ್ನು ಊಹಿಸಿಕೊಳ್ಳಲೂ ಆಗದ ಪರಿಸ್ಥಿತಿ. ಇಂತಹ ಸ್ಥಿತಿಯಲ್ಲಿ ಪಾಲಕರಾದವರು ವಾಸ್ತವ ಸ್ಥಿತಿ ಅರಿಯಬೇಕು. ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಯೋಚಿಸಬೇಕು. ಅಗಲಿಕೆಯಲ್ಲೂ ಮಕ್ಕಳ ಉತ್ತಮ ಭವಿಷ್ಯದ ಸಂತಸ ಕಾಣಬೇಕು. ಇನ್ನೇನು ಮಗ ನಮ್ಮಿಂದ ದೂರ ಹೊರಟ. ನಮಗ್ಯಾರೂ ಇಲ್ಲ ಎನ್ನುವ ಆತಂಕದ ಮನೋಭಾವನೆ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಂಬಂಧಗಳು ಎಲ್ಲಿ ಶಿಥಿಲಗೊಳ್ಳುವುವೋ ಎಂಬ ಆತಂಕ ಕಾಡಲಾರಂಭಿಸುತ್ತದೆ. ಖಿನ್ನತೆ ಶುರುವಾಗುತ್ತದೆ. ರಕ್ತ ಹಂಚಿಕೊಂಡು ಹುಟ್ಟಿದ ಕರುಳಕಡಿಯೊಂದು ಕಳಚುವಾಗ ಆಗುವ ಸಂಕಟ ಮಾನಸಿಕವಾಗಿ ತರುವ ಸಂಕಷ್ಟವೂ ಅಪಾರ.

ಏನಿದಕ್ಕೆ ಮದ್ದು?: ಬದಲಾದ ಸನ್ನಿವೇಶದಲ್ಲಿ ಇಂದು ಇದ್ದಲ್ಲಿಯೇ ಉದ್ಯೋಗ ಅಥವಾ ವ್ಯವಹಾರ ಅನೇಕರಿಗೆ ಮಾಡಲಿಕ್ಕಾಗಲಿಕ್ಕಿಲ್ಲ. ಆ ನಂತರ ಈಗಿನ ಜನಾಂಗದ ಮಕ್ಕಳ ಅಭಿರುಚಿ ಭಿನ್ನವಾಗಿರುತ್ತದೆ. ಮಹಾತ್ವಾಕಾಂಕ್ಷೆ ಉಳ್ಳವರಾಗಿರುತ್ತಾರೆ. ಏನೋ ಒಂದು ಮಹತ್ಸಾಧನೆಯ ಕನಸು ಕಂಡಿರುತ್ತಾರೆ. ಅದಕ್ಕೆಂದು ವಿದೇಶ, ಪರ ರಾಜ್ಯ ವಲಸೆ ಅನಿವಾರ್ಯವಾಗುತ್ತದೆ. ಈ ಅನಿವಾರ್ಯತೆ ಮತ್ತು ಅದರಲ್ಲಿ ಮಕ್ಕಳ ಕನಸು ನನಸಾಗುವುದನ್ನು ಪಾಲಕರು ಯೋಚಿಸಬೇಕು. ಇಂದಿನ ಯುವಕರು ಅಪ್ಪ ನೆಟ್ಟ ಆಲದಮರದ ಕೆಳಗೆ ಇರಲು ಆಗಲಿಕ್ಕಿಲ್ಲ. ಹೊಸತನ್ನು ಬಯಸುತ್ತಾರೆ. ತಮ್ಮ ಮಕ್ಕಳ ಈ ಹೊಸ ಯತ್ನಕ್ಕೆ ಪಾಲಕರಾದವರು ಪೋ›ತ್ಸಾಹಿಸಬೇಕು. ಆತ ಭೌತಿಕವಾಗಿ ದೂರವಾದರೂ ಒಂದು ಸಾಧನೆಯ ಕನಸು ಹೊತ್ತು ಹೋಗಿದ್ದಾನೆ ಎಂದು ಹೆಮ್ಮೆ ಪಡಬೇಕು. ನಕಾರಾತ್ಮಕ ಚಿಂತನೆಗೆ ಅವಕಾಶ ಕೊಡಬಾರದು. ಒಂದು ವೇಳೆ ಖಿನ್ನತೆ, ಬೇಸರ, ದುಃಖ ಎನಿಸಿದರೆ ಕೂಡಲೇ ಮನೋವೈದ್ಯರನ್ನು ಸಂರ್ಪಸಿ ಸಲಹೆ ಪಡೆಯಿರಿ.

ಮಕ್ಕಳು ದೂರವಾದಾಗ ಸಮಯ ಕಳೆಯಲು ನೂರೆಂಟು ದಾರಿಗಳಿವೆ. ಸ್ನೇಹಿತರೊಡನೆ ಪ್ರವಾಸ ಮಾಡಿ. ಸಮಾಜಮುಖಿ ವ್ಯಕ್ತಿತ್ವ ಬೆಳೆಸಿಕೊಳ್ಳಿ. ಸಂಘಜೀವಿಯಾಗಿ. ಕ್ರಿಯಾಶೀಲತೆ ತನ್ನಿಂದ ತಾನೇ ಬರುತ್ತದೆ. ಆಗ ಏಕಾಂಗಿತನದ ಸಮಸ್ಯೆ ಉದ್ಭವಿಸುವುದೇ ಇಲ್ಲ. ಓದಿನ ಹವ್ಯಾಸ ಇರಲಿ. ಹೊಸ ಸ್ಥಳ, ಹೊಸತನ್ನು ನೋಡುವ ತುಡಿತವಿರಲಿ. ನೆರೆ ಹೊರೆಯವರೊಡನೆ ಬೆರೆತು ಬಾಳಿ. ಬದುಕಿನ ವಾಸ್ತವ ಅರಿತು ಬಾಳಿ. ಹೇಗೆ ಪಕ್ಷಿಗಳಿಗೆ ರೆಕ್ಕೆ ಪುಕ್ಕಗಳು

ಬರುತ್ತಿದ್ದಂತೆ ಗೂಡು ತೊರೆದು ಹಾರಿಹೋಗುತ್ತವೆಯೋ ಹಾಗೇ ಮಕ್ಕಳು ಸಹ ಅನಿವಾರ್ಯ ಕಾರ್ಯಗಳಿಂದ ಮನೆ ತೊರೆಯುತ್ತಾರೆ. ಇದರಿಂದ ಪಾಲಕರಾದವರು ಬೇಸರ ಮಾಡಿಕೊಳ್ಳದೇ ಮನಸ್ಸಿನಲ್ಲೇ ತುಂಬಿದ ಗೂಡಿನ ಪರಿಕಲ್ಪನೆ ಮಾಡಿಕೊಂಡು ಜೀವನ ರಥ ಸಾಗಿಸಬೇಕು. ಇದುವೇ ನಿತ್ಯ ಸತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net