

ಇಂದಿನ ಜೀವನಶೈಲಿದೀರ್ಘಕಾಲ ಕುಳಿತಿರುವುದು, ನಿರಂತರ ಮೊಬೈಲ್ ಸ್ಕ್ರೀನ್ ಬಳಕೆ, ಸಮಯದ ಒತ್ತಡ ಇವೆಲ್ಲವೂ ದೇಹಕ್ಕಿಂತ ಹೆಚ್ಚು ಮನಸ್ಸಿನ ಮೇಲೆ ಒತ್ತಡ ಬೀರುತ್ತಿವೆ. ಕೆಲಸದ ಮಧ್ಯೆ ಮನಸ್ಸು ದಣಿದಾಗ, ಕೆಲವೇ ನಿಮಿಷಗಳಲ್ಲಿ ದೇಹ ಮನಸ್ಸನ್ನು ಮರುಹೊಂದಿಸುವ ಸರಳವಾದ ಯೋಗಾಸನವೇ ಬಾಲಾಸನ. ಹೆಸರಿನಂತೆ, ಈ ಆಸನ ಮಕ್ಕಳ ನಿಶ್ಚಲತೆ, ಸುರಕ್ಷತೆ ಮತ್ತು ಸಹಜ ವಿಶ್ರಾಂತಿಯನ್ನು ನೆನಪಿಸುತ್ತದೆ.
ಬಾಲಾಸನದಲ್ಲಿ ದೇಹವನ್ನು ಮುಂದಕ್ಕೆ ಬಾಗಿಸಿ, ಹೊಟ್ಟೆಯನ್ನು ಜಂಘಯ ಮೇಲೆ ಇಟ್ಟು, ಲಲಾಟವನ್ನು ನೆಲದ ಮೇಲೆ (ಅಥವಾ ಯೋಗ ಬಾಕ್ ಮೇಲೆ) ಇಡಲಾಗುತ್ತದೆ. ಕುತ್ತಿಗೆ ಸೌಮ್ಯವಾಗಿ ಒಳಗೆ ಸೇರಿ, ಉಸಿರಾಟ ಹಿಂಭಾಗದ ಪಕ್ಕಗಳಿಗೆ ಹರಿಯುತ್ತದೆ. ಹೊರಗೆ ನೋಡಲು ಅತಿ ಸರಳವಾಗಿ ಕಂಡರೂ, ಒಳಗಡೆ ಇದು ನರ ಮಂಡಲದಲ್ಲಿ ಆಳವಾದ ಶಾಂತಿ ಪ್ರಕ್ರಿಯೆಯನ್ನು ಆರಂಭಿಸುತ್ತದೆ.
ಅಧ್ಯಯನಗಳು ಸೂಚಿಸುವಂತೆ, ದೇಹವನ್ನು ಮಡಿದು ಕುತ್ತಿಗೆಯನ್ನು ಸ್ವಲ್ಪ ಒಳಗೆ ತರುವ ಸ್ಥಿತಿ ವಾಗಸ್ ನರವನ್ನು ಉತ್ತೇಜಿಸುತ್ತದೆ. ಇದರ ಪರಿಣಾಮವಾಗಿ ದೇಹ ರೆಸ್ಟ್ ಆಂಡ್ ಡೈಜೆಸ್ಟ್ (ವಿಶ್ರಾಂತಿ ಮತ್ತು ಜೀರ್ಣಕ್ರಿಯೆ) ಸ್ಥಿತಿಗೆ ಸರಿಯುತ್ತದೆ. ಇದರಿಂದ ಕೋರ್ಟ್ಸಾಲ್ (ಒತ್ತಡ ಹಾರ್ವೇನ್) ಮಟ್ಟ ಕಡಿಮೆಯಾಗುತ್ತದೆ. ಗಾಮಾ ಅಮಿನೊಬ್ಯೂಟರಿಕ್ ಆಮ್ಲ (ಜಿಎಬಿಎ) ಎಂಬ ನರಸಂದೇಶಕ ಹೆಚ್ಚುತ್ತದೆ ಇದು ಆತಂಕ ಕಡಿಮೆ ಮಾಡಿ ಮನಸ್ಸಿಗೆ ನಿಶ್ಶಬ್ದ ಸ್ಥಿತಿಯನ್ನು ತರುತ್ತದೆ.
ಜಾನುಭ್ಯಾಂ ಧರಣೀಂ ಗತ್ವಾ ಪಾದೌ ಚಾಪಿ ಸುಸಂಸ್ಥಿತೌ| ಮಸ್ತಕಂ ಭೂತಲೇ ನ್ಯಸ್ಯ ಬಾಲವಚ್ಛಯನಂ ವಿದುಃ| ವಿಶ್ರಾಂತಿದಾಯಕಂ ಚೈತತ್ ಸರ್ವತಾಪ ನಿವಾರಕಮ್| ಅರ್ಥ: ಎರಡೂ ಮೊಣಕಾಲುಗಳನ್ನು ನೆಲದ ಮೇಲೆ ಇಟ್ಟು, ಪಾದಗಳನ್ನು ಸರಿಯಾಗಿ ನೆಲೆಗೊಳಿಸಿ, ಲಲಾಟವನ್ನು ಅಮದರೆ ಹಣೆಯನ್ನು ಭೂಮಿಯಲ್ಲಿ ಇಟ್ಟು, ಮಗುವಿನಂತೆ ಮಲಗುವ ಈ ಸ್ಥಿತಿಯನ್ನು ಬಾಲಾಸನವೆಂದು ಕರೆಯುತ್ತಾರೆ.
ಈ ಆಸನವು ದೇಹಮನಸ್ಸಿಗೆ ಆಳವಾದ ವಿಶ್ರಾಂತಿ ನೀಡುತ್ತದೆ. ಎಲ್ಲ ವಿಧದ ತಾಪ, ಒತ್ತಡ ಮತ್ತು ಅಶಾಂತಿಯನ್ನು ಶಮನಗೊಳಿಸುವ ಶಕ್ತಿ ಹೊಂದಿದೆ. (ಉಲ್ಲೇಖ: ಘೕರಂಡ ಸಂಹಿತೆ ಅಧ್ಯಾಯ 2 (ಆಸನ ಪ್ರಕರಣ), ಶ್ಲೋಕ 2.192.20)
ಆಧುನಿಕ ವಿಜ್ಞಾನ ಇಂದು ನರಮಂಡಲ ಶಮನ ಎಂದು ವಿವರಿಸುವುದನ್ನು, ಯೋಗಶಾಸ್ತ್ರ ಸಾವಿರಾರು ವರ್ಷಗಳ ಹಿಂದೆಯೇ ‘ವಿಶ್ರಾಂತಿದಾಯಕಂ ಸರ್ವತಾಪನಿವಾರಕಂ’ ಎಂದು ಸ್ಪಷ್ಟವಾಗಿ ಹೇಳಿದೆ. ನಮ್ಮ ದಿನನಿತ್ಯದಲ್ಲಿ ಒತ್ತಡ ಹೆಚ್ಚಾಗಿ ಜಮೆಯಾಗುವ ಭಾಗಗಳು ಮೂಳೆ, ಹಿಪ್ಸ್ ಮತ್ತು ಭುಜಗಳು. ಬಾಲಾಸನದಲ್ಲಿ ಇವುಗಳಿಗೆ ಬಲವಿಲ್ಲದ, ಮೃದುವಾದ ವಿಸ್ತರಣೆ ಸಿಗುತ್ತದೆ.
ಇದು ನೋವಿಲ್ಲದೆ ದೇಹದ ಕಠಿಣತೆ ಯನ್ನು ಕರಗಿಸಿ, ದೇಹಕ್ಕೆ ನೀನು ಸುರಕ್ಷಿತ ಎಂಬ ಸಂದೇಶವನ್ನು ನೀಡುತ್ತದೆ. ನಿದ್ರೆ, ಹೃದಯಬಡಿತ ಮತ್ತು ಭಾವನಾತ್ಮಕ ಸಮತೋಲನ. ನಿಯಮಿತ ವಾಗಿ ಬಾಲಾಸನ ಅಭ್ಯಾಸ ಮಾಡಿದರೆ ನಿದ್ರೆಯ ಗುಣಮಟ್ಟ ಉತ್ತಮ ವಾಗುತ್ತದೆ. ವಿಶ್ರಾಂತಿ ಸ್ಥಿತಿಯ ಹೃದಯಬಡಿತ ಕಡಿಮೆಯಾಗುತ್ತದೆ. ಭಾವನಾತ್ಮಕ ಸಮತೋಲನ ಹೆಚ್ಚುತ್ತದೆ. ಅಂದರೆ, ಬಾಲಾಸನ ಕೇವಲ ಒಂದು ಆಸನವಲ್ಲ. ಅದು ಮನಸ್ಸಿನ ಮರುಹೊಂದಿಕೆ.
ತಜ್ಞರ ಹೇಳುವ ಪ್ರಕಾರ ಬಾಲಾಸನ ಮಾಡುವ ವಿಧಾನ ಹೀಗಿದೆ: ಲಲಾಟವನ್ನು ನೆಲದ ಮೇಲೆ ಇಡಿ; ಅದಾಗದಿದ್ದರೆ ಯೋಗ ಬ್ಲಾಕ್ ಅಥವಾ ಮಡಚಿದ ಟವೆಲ್ ಬಳಸಿ. ಕೈಗಳನ್ನು ಮುಂದೆ ವಿಸ್ತರಿಸಬಹುದು ಅಥವಾ ದೇಹದ ಪಕ್ಕದಲ್ಲೇ ಇರಿಸಬಹುದು ಉಸಿರಾಟ: ಹಿಂಭಾಗದ ಪಕ್ಕೆಲುಬುಗಳಿಗೆ ನಿಧಾನವಾಗಿ ಉಸಿರು ತುಂಬಿ, ದೀರ್ಘವಾಗಿ ಹೊರಬಿಡಿ ಅವಧಿ: 25 ನಿಮಿಷಗಳು ಸಾಕು.
ದಿನದ ಮಧ್ಯೆ ಒಂದು ರಿಸೆಟ್: ಕಾರ್ಯಭಾರದ ಮಧ್ಯೆ, ಮನಸ್ಸು ಚದುರಿದಾಗ, ಅಥವಾ ನಿದ್ರೆಗೆ ಮುನ್ನ ಕೆಲವೇ ನಿಮಿಷಗಳ ಬಾಲಾಸನ ದೇಹಕ್ಕೂ ಮನಸ್ಸಿಗೂ ಹೊಸ ಆರಂಭ ನೀಡುತ್ತದೆ.ದೊಡ್ಡ ಬದಲಾವಣೆಗೆ ದೊಡ್ಡ ಪ್ರಯತ್ನ ಬೇಡ; ಕೆಲವೊಮ್ಮೆ ಮಡಿದ ದೇಹವೇ ನೇರವಾದ ಮನಸ್ಸನ್ನು ಕೊಡುತ್ತದೆ.
ಬಾಲಾಸನ ನಮ್ಮೊಳಗಿನ ಮಗುವನ್ನು ನೆನಪಿಸುತ್ತದೆ. ಭಯವಿಲ್ಲದ, ಸುರಕ್ಷಿತ, ವಿಶ್ರಾಂತ ಭಾವವನ್ನು ಜಾಗೃತಗೊಳಿಸುತ್ತದೆ, ದಿನಕ್ಕೆ ಕೆಲವು ನಿಮಿಷಗಳನ್ನಾದರೂ ಈ ಆಸನಕ್ಕೆ ಕೊಡಿ; ಹಾಗೆ ಮಾಡಿದರೆ ನಿಮ್ಮ ನರಮಂಡಲ ನಿಮಗೆ ಖಂಡಿತವಾಗಿ ಧನ್ಯವಾದ ಹೇಳುತ್ತದೆ.