ಸಾಕಷ್ಟು ನೀರು ಕುಡಿದರೂ ಕೆಲವು ಕಾರಣಗಳಿಂದ ದೇಹದಲ್ಲಿ ನಿರ್ಜಲೀಕರಣ ಕಾಡುತ್ತದೆ.
ತಲೆನೋವು, ಆಯಾಸ, ಮಾನಸಿಕ ಅಭದ್ರತೆ ಕಾಡುತ್ತಿದ್ದರೆ ಅದಕ್ಕೆ ನಿರ್ಜಲೀಕರಣ ಕಾರಣ.
ನಿತ್ಯ 8 ರಿಂದ 10 ಲೋಟ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಬೇಸಿಗೆ, ಚಳಿಗಾಲ ಅಥವಾ ಮಳೆಗಾಲವಾದರೂ ಸಹ ದೇಹಕ್ಕೆ 8 ರಿಂದ 10 ಲೋಟ ನೀರು ಕಡ್ಡಾಯವಾಗಿ ಕುಡಿಯುವುದನ್ನು ರೂಢಿಸಿಕೊಳ್ಳಲೇ ಬೇಕು. ದೈಹಿಕ ಶ್ರಮ, ಉಪ್ಪಿನಾಂಶವಿರುವ ಆಹಾರ ಸೇವನೆ, ಕಾಫಿ-ಟೀಯಂತಹ ಪೇಯಗಳನ್ನು ಕಾಫಿ ಮತ್ತು ಟೀಯಂತಹ ಪೇಯಗಳು ನಮ್ಮ ದೇಹದ ತೇವಾಂಶವನ್ನು ಹೀರುವದರೊಂದಿಗೆ ದೇಹದ ಒಳಗಿನಿಂದ ನಿರ್ಜಲೀಕರಣ ಉಂಟಾಗುವಂತೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು.
ನೀವು ನಿತ್ಯವು ಮೂರು ಲೀಟರ್ ನೀರು ಕುಡಿದರೂ ಸಹ ನಿಮ್ಮ ದೇಹ ನಿರ್ಜಲೀಕರಣದಿಂದ ಬಳಲುತ್ತಿದೆ ಎಂಬ ಭಾವನೆ ಮೂಡುತ್ತಿದ್ದರೆ. ಅಥವಾ ಈ ಐದು ಪ್ರಮುಖ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ಎಚ್ಚೆತ್ತುಕೊಳ್ಳಿ.
ಆಯಾಸ
ಎಷ್ಟೇ ವಿಶ್ರಾಂತಿ ಪಡೆದರು ಸಹ ದಣಿದ ಭಾವನೆ ಮೂಡುತ್ತಿದೆ ಎಂದರೆ ಅದಕ್ಕೆ ನೀರಿನ ಅಭಾವವೇ ಕಾರಣ. ದೇಹದಲ್ಲಿ ದ್ರವಗಳ ಕೊರತೆಯಿದ್ದಾಗ ರಕ್ತ ಪರಿಚಲನೆ ಕಡಿಮೆಯಾಗುತ್ತದೆ ಇದರಿಂದ ಆಮ್ಲಜನಕ ಪೋಷಕಾಂಶಗಳನ್ನು ತಲುಪಿಸುವುದು ಕಷ್ಟವಾಗುತ್ತದೆ. ಇದು ಆಯಾಸಕ್ಕೆ ಕಾರಣ ಎನ್ನಲಾಗಿದೆ.
ತಲೆನೋವು
ಬಿಸ ವಾತಾವರಣದಲ್ಲಿ ಅಥವಾ ಇನ್ಯಾವುದೋ ಸಮಯದಲ್ಲಿ ತಲೆನೋವು ಕಾಣಿಸಿಕೊಳ್ಳುತ್ತದೆ. ಇದು ನಿರ್ಜಲೀಕರಣದ ಮುನ್ಸೂಚನೆಯಾಗಿದೆ. ದೇಹದಲ್ಲಿ ದ್ರವದ ಅಸಮತೋಲನ ಕಾಡುವುದರಿಂದ ಮೆದುಳಿನ ಅಂಗಾಂಶಗಳ ಮೇಲೆ ಒತ್ತಡ ಬೀಳುತ್ತದೆ. ಇದು ಸಣ್ಣ ಪ್ರಮಾಣದ ನಿರಂತರ ತಲೆನೋವು, ತಲೆಸುತ್ತು ಮತ್ತು ಯಾವುದೇ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗದಿರಲು ಪ್ರಮುಖ ಕಾರಣವಾಗಿದೆ.
ಮೂತ್ರದ ಬಣ್ಣ, ಕಡಿಮೆ ವಿಸರ್ಜನೆ
ನಮ್ಮಲ್ಲಿ ನಿರ್ಜಲೀಕರಣ ಕಾಡುತ್ತಿದೆ ಎಂದು ತಿಳಿದುಕೊಳ್ಳಲು ಸುಲಭವಾದ ವಿಧಾನ ಎಂದರೆ ಅದು ಮೂತ್ರ ವಿಸರ್ಜನೆ. ಗಾಢವಾಗಿ ಕಾಣುವ ಹಳದಿ ಬಣ್ಣ ಹಾಗೂ ಕಡಿಮೆ ವಿಸರ್ಜನೆಯು ದೇಹದಲ್ಲಿ ತೇವಾಂಶದ ಕೊರತೆ ಇದೆ ಎನ್ನುವುದನ್ನು ಸೂಚಿಸುತ್ತದೆ.
ಮಾನಸಿಕ ಅಭದ್ರತೆ, ಗಮನ ಹರಿಸಲಾಗದೆ ಇರುವುದು
ದೇಹದಲ್ಲಿ ತೇವಾಂಶ ಕಡಿಮೆಯಾದಾಗ ಅಭದ್ರತೆ ಕಾಡುವುದು ಮಾನಸಿಕವಾಗಿ ಆಲಸ್ಯ ಉಂಟಾಗುವುದು ಇದರ ಲಕ್ಷಣ ವಾಗಿರಬಹುದು. ನೀರಿನ ಸಮತೋಲನದಲ್ಲಿ ಸಣ್ಣ ಬದಲಾವಣೆಯಾದರೂ ಸಹ ಮೆದುಳಿನ ಕಾರ್ಯ ನಿರ್ವಹಣೆ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಾರೆ ತಜ್ಞರು. ಸ್ನಾಯುಗಳ ಸುಗಮ ಕಾರ್ಯನಿರ್ವಹಣೆಗೆ ನೀರು ಮತ್ತು ಎಲೆಕ್ಟ್ರೋಲೈಟ್‌ಗಳು (ಸೋಡಿಯಂ, ಪೊಟ್ಯಾಸಿಯಮ್) ಅತ್ಯಗತ್ಯ. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಎಲೆಕ್ಟ್ರೋಲೈಟ್‌ಗಳ ಸಮತೋಲನ ತಪ್ಪುತ್ತದೆ. ನೀರಿನ ಕೊರತೆ 2% ಆದರೂ ಫೋಕಸ್, ಮೆಮೊರಿ, ಮೂಡ್ ಮೇಲೆ ಪರಿಣಾಮ ಬೀರುತ್ತೆ. ಕಾರಣ ಇಲ್ಲದೆ ಸಿಟ್ಟು ಬಂರುತ್ತದೆ.
ಎಷ್ಟೇ ನೀರು ಕುಡಿದರೂ ಸಹ ಬಾಯಾರಿಕೆ ಕಡಿಮೆಯಾಗದೆ ಇರುವುದು ಅಥವಾ ಬಾಯಾರಿಕೆ ಆಗುವುದು ಎಲೆಕ್ಟ್ರೋಲೈಟ್ ಅಸಮತೋಲನದ ಮುನ್ಸೂಚನೆಯಾಗಿದೆ. ಬೇಸಿಗೆಯಲ್ಲಿ ಬೆವರುವುದು, ಸೋಡಿಯಂ ಸೇರಿದಂತೆ ದೇಹಕ್ಕೆ ಬೇಕಾದ ಇತರ ಖನಿಜ ನಷ್ಟಕ್ಕೆ ಕಾರಣ.
ಇನ್ನು ಏನೆಲ್ಲ ಲಕ್ಷಣವಿದೆ?
ಇಷ್ಟೇ ಅಲ್ಲದೆ ದೇಹದಲ್ಲಿ ನೀರಿನ ಕೊರತೆಯಾದಾಗ ಬಾಯಿಯಲ್ಲಿ ಲಾಲಾರಸ ಉತ್ಪತ್ತಿಯಾಗುವುದು ಕಡಿಮೆಯಾಗಿ ಬಾಯಿ ಒಣಗಿ, ಬ್ಯಾಕ್ಟೀರಿಯಾಗಳು ವೇಗವಾಗಿ ವೃದ್ಧಿಯಾಗುತ್ತವೆ. ಇದು ತೀವ್ರ ಬಾಯಿ ದುರ್ವಾಸನೆಗೆ ಕಾರಣವಾಗುತ್ತದೆ. ದೇಹದಲ್ಲಿ ತೇವಾಂಶ ಕಡಿಮೆ ಇದ್ದಾಗ, ಲಿವರ್ ತನ್ನಲ್ಲಿ ಸಂಗ್ರಹವಾಗಿರುವ ಗ್ಲುಕೋಸ್ ಅನ್ನು ರಕ್ತಕ್ಕೆ ಬಿಡುಗಡೆ ಮಾಡಲು ಕಷ್ಟಪಡುತ್ತದೆ. ಇದರಿಂದ ದೇಹಕ್ಕೆ ಶಕ್ತಿಯ ಕೊರತೆಯಾದಂತೆ ಭಾಸವಾಗಿ, ಮೆದುಳು ತಕ್ಷಣಸಿಹಿ ಪದಾರ್ಥಗಳನ್ನು ಅಥವಾ ಚಾಕೊಲೇಟ್‌ಗಳನ್ನು ತಿನ್ನುವಂತೆ ಪ್ರಚೋದಿಸುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವವುದೇಹದ ಆಂತರಿಕ ನೀರಿನ ಮಟ್ಟವನ್ನು ಅವಲಂಬಿಸಿರುತ್ತದೆ. ನಿಮ್ಮ ಕೈ ಮೇಲಿನ ಚರ್ಮವನ್ನು ಮೇಲಕ್ಕೆ ಎಳೆದು ಬಿಟ್ಟಾಗ, ಅದು ತಕ್ಷಣ ಯಥಾಸ್ಥಿತಿಗೆ ಬರದಿದ್ದರೆ ಚರ್ಮದ ಕೋಶಗಳಲ್ಲಿ ನೀರಿನ ತೀವ್ರ ಕೊರತೆಯಿದೆ ಎಂದರ್ಥ.
ದೇಹ ತೇವಾಂಶದಿಂದ ಇಟ್ಟುಕೊಳ್ಳಲು ಏನು ಮಾಡಬೇಕು?
ಸೌತೆಕಾಯಿಯಲ್ಲಿ ನೀರಿನ ಅಂಶ ಯಥೇಚ್ಛವಾಗಿರುವ ಕಾರಣ ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ, 90% ನೀರಿನಾಂಶವಿರುವ ಟೊಮ್ಯಾಟೋ ಅಡುಗೆಯಲ್ಲಿ ಸೇರಿಸಿ, ಕಲ್ಲಂಗಡಿ, ಕಿತ್ತಳೆ, ದ್ರಾಕ್ಷಿ ಹಣ್ಣುಗಳು ನಿರ್ಜಲೀಕರಣದಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ, (ಏಜೆನ್ಸೀಸ್).