

ಮಹರ್ಷಿ ಅಗಸ್ತ್ಯ ಶ್ರೀರಾಮಚಂದ್ರನಿಗೆ ಬೋಧಿಸಿದ ಸೂರ್ಯೋಪಾಸನಾ ‘ಆದಿತ್ಯಹೃದಯ’ ಸ್ತೋತ್ರದಲ್ಲಿ ಸೂರ್ಯಮಂಡಲದ ಸ್ವರೂಪ ಮತ್ತು ಮಹಿಮೆಗಳು ಅತ್ಯಂತ ಸುಂದರವಾಗಿ ವರ್ಣಿತವಾಗಿವೆ.
ಯನ್ಮಂಡಲಂ ವ್ಯಾಧಿ ವಿನಾಶದಕ್ಷಂ ಯದೃಗ್ಯಜುಃ ಸಾಮಸು ಸಮ್ಪ್ರಗೀತಂ |
ಪ್ರಕಾಶಿತಂ ಯೇನ ಚ ಭೂರ್ಭವಃ ಸ್ವಃ ಪುನಾತು ಮಾಂ ತತ್ಸವಿತುವರೇಣ್ಯಮ್ ||
‘ಸೂರ್ಯಮಂಡಲವು ರೋಗಗಳನ್ನು ನಾಶ ಮಾಡುವುದರಲ್ಲಿ ಅತ್ಯಂತ ಸಮರ್ಥವಾಗಿದೆ. ಋಕ್, ಯಜುಸ್, ಸಾಮ ಎಂಬ ಮೂರು ವೇದಗಳಲ್ಲಿಯೂ ಸೂರ್ಯಮಂಡಲವು ಅತ್ಯಂತ ಶ್ರೇಷ್ಠವಾಗಿ ಗಾನ ಮಾಡಲ್ಪಟ್ಟಿದೆ. ಸೂರ್ಯಮಂಡಲವು ಭೂಃ, ಭುವಃ, ಸುವಃ ಎಂಬ ಮೂರು ಲೋಕಗಳನ್ನೂ ಬೆಳಗುತ್ತಿದೆ. ಅತ್ಯಂತ ಪವಿತ್ರವೂ ಪ್ರಾರ್ಥನೀಯವೂ ಆದ ಆ ಸೂರ್ಯಮಂಡಲವು ನನ್ನನ್ನು ಪವಿತ್ರಗೊಳಿಸಲಿ’ ಎಂಬುದು ಈ ಶ್ಲೋಕದ ಅರ್ಥವಾಗಿದೆ. ಪ್ರತಿದಿನದ ಸಂಧ್ಯೋಪಾಸನೆಯೂ ಸೂರ್ಯೋಪಾಸನೆಯೇ ಆಗಿದೆ. ಇದು ಗಾಯತ್ರಿಯ ಉಪಾಸನೆಯೂ ಆಗಿದೆ. ದೀರ್ಘಾಯುಸ್ಸು, ಶುದ್ಧವಾದ ಪ್ರಜ್ಞೆ, ಕೀರ್ತಿ, ಬ್ರಹ್ಮವರ್ಚಸ್ಸುಗಳನ್ನು ಪಡೆಯಲು ಗಾಯತ್ರಿಯ ಉಪಾಸನೆಯು ಏಕಮಾತ್ರ ಕಾರಣವಾಗಿದೆ. ಮೂರು ಸಂಧ್ಯಾಕಾಲಗಳಲ್ಲಿಯೂ ಪ್ರಾಣಾಯಾಮ ಮತ್ತು ಸಮಾಧಿಯ ಮೂಲಕವಾಗಿ ಸವಿತೃ ಭಗವಂತನ ವರೇಣ್ಯವಾದ ತೇಜಸ್ಸನ್ನು ಧ್ಯಾನ ಮಾಡುತ್ತ ಗಾಯತ್ರಿ ಮಂತ್ರಜಪವನ್ನು ಮಾಡಬೇಕು. ಹೀಗೆ ಗಾಯತ್ರಿ ಜಪದ ಮೂಲಕವಾಗಿ ಸೂರ್ಯ ಭಗವಂತನ ಉಪಾಸನೆ ನಡೆಯುತ್ತದೆ.
ಸೂರ್ಯೋಪಾಸಕರ ಮುಖ್ಯ ಗುಣ: ಸಾತ್ವಿಕ ಆಹಾರ, ಸತ್ಯಭಾಷಣ, ಸಂಯಮ, ಸತ್ಸಂಗ. ಈ 4 ಗುಣಗಳಿಂದ ಕೂಡಿದ ಉಪಾಸಕನು ಉಪಾಸನೆಯಲ್ಲಿ ಸಿದ್ಧಿ ಹೊಂದುತ್ತಾನೆ.
ಸಾತ್ವಿಕ ಆಹಾರದ ಮಹಿಮೆಯನ್ನಂತೂ ಯೋಗಶಾಸ್ತ್ರ, ಧರ್ಮಶಾಸ್ತ್ರ, ಆಯುರ್ವೆದ ಶಾಸ್ತ್ರಗಳಲ್ಲಿ ವಿಪುಲವಾಗಿ ವರ್ಣಿಸಲಾಗಿದೆ. ಆಹಾರ ಶುದ್ಧಿಯಿಂದ ಚಿತ್ತಶುದ್ಧಿ ಉಂಟಾಗುತ್ತದೆ. ಚಿತ್ತಶುದ್ಧಿಯಿಂದ ಅಪರೋಕ್ಷ ಜ್ಞಾನ, ತತ್ತ್ವಸಾಕ್ಷಾತ್ಕಾರವನ್ನು ಪಡೆಯಬಹುದು. ಹಿತವೂ ಮಿತವೂ ಪ್ರಿಯವೂ ಸತ್ಯವೂ ಆದ ವಚನದಿಂದ ವಾಕ್ ಸಿದ್ಧಿಯು ಉಂಟಾಗುವುದರ ಮೂಲಕ ತತ್ತ್ವಸಾಕ್ಷಾತ್ಕಾರಕ್ಕೆ ಬೇಕಾದ ಚಿತ್ತಪ್ರಸಾದವು ಲಭಿಸುತ್ತದೆ. ಮನಸ್ಸನ್ನು ಮತ್ತು ಇಂದ್ರಿಯಗಳನ್ನು ವಶದಲ್ಲಿ ಇಟ್ಟುಕೊಳ್ಳುವುದು ಸಂಯಮ. ಸಂಯಮಶೀಲನಾದ ಉಪಾಸಕನು ಮಾತ್ರ ಸಿದ್ಧಿಯನ್ನು ಹೊಂದಬಲ್ಲನು. ಸತ್ಸಂಗವಂತೂ ಉಪಾಸಕನಿಗೆ ಅತ್ಯಂತ ಶ್ರೇಯಸ್ಕರವಾದ ಸಾಧನಾಪಥವಾಗಿದೆ. ಇದರಿಂದ ನಾನಾ ವಿಧವಾದ ವಿಘ್ನಗಳನ್ನು ಪರಿಹರಿಸಿಕೊಳ್ಳಬಹುದು. ಸತ್ಸಂಗದಿಂದ ಉಪಾಸನೆಯಲ್ಲಿ ಉತ್ಸಾಹವು ವೃದ್ಧಿಗೊಂಡು ಸಾಧನಾಮಾರ್ಗವು ಸುಗಮವಾಗಿ ಸಿದ್ಧಿಯೂ ಶೀಘ್ರವಾಗಿ ದೊರೆಯುವುದು. ಈ ನಾಲ್ಕು ಗುಣಗಳು ಉಪಾಸಕನಲ್ಲಿದ್ದರೆ ಇತರ ಅವಶ್ಯವಾದ ಸದ್ಗುಣಗಳು ತಾವಾಗಿಯೇ ಬೆಳೆಯುತ್ತವೆ.
ಸೂರ್ಯೋಪಾಸನೆಯಲ್ಲಿ ಸೂರ್ಯನಮಸ್ಕಾರವು ಅತ್ಯಂತ ಪ್ರಮುಖವಾದ ಒಂದು ಅಂಶವಾಗಿದೆ. ಯೋಗಮಾರ್ಗದ ಸಿದ್ಧಿ ಮತ್ತು ವ್ಯಾಧಿ ನಿವಾರಣೆಯ ಮೂಲಕ ಶರೀರದ ಆರೋಗ್ಯ ಸಂರಕ್ಷಣೆಗಳಿಗಾಗಿ ಸೂರ್ಯನಮಸ್ಕಾರವು ಅತ್ಯಂತ ಅವಶ್ಯವಾಗಿದೆ. ಸೂರ್ಯನ ಪ್ರಕಾಶ ಮತ್ತು ತೇಜಸ್ಸುಗಳಿಂದ ಶರೀರದ ಆರೋಗ್ಯದ ಮೇಲೆ ಬಹಳ ಉತ್ತಮವಾದ ಪರಿಣಾಮವು ಉಂಟಾಗುತ್ತದೆ. ಸೂರ್ಯನಮಸ್ಕಾರದಿಂದ ಬುದ್ಧಿಯ ಬೆಳವಣಿಗೆ ಉತ್ತಮವಾಗಿ ಆಗುತ್ತದೆ. ‘ಶರೀರಮಾದ್ಯಂ ಖಲು ಧರ್ಮ ಸಾಧನಂ’ ಎಂಬಂತೆ ಮಾನವ ಶರೀರವು ಧರ್ಮಸಾಧನೆಗೆ ಉತ್ತಮವಾದ ಸಾಧನವಾಗಿದೆ. ‘ಧರ್ವರ್ಥಕಾಮಮೋಕ್ಷಾಣಾಂ ಆರೋಗ್ಯಂ ಮೂಲಮುತ್ತಮಂ’ ಎಂದು ಹೇಳಿರುವುದರಿಂದ ನಾಲ್ಕು ಪುರುಷಾರ್ಥಗಳ ಸಿದ್ಧಿಗೆ ಶರೀರದ ಆರೋಗ್ಯವೇ ಮೂಲ ಕಾರಣ. ಸೂರ್ಯನಮಸ್ಕಾರದಿಂದ ಶರೀರ-ಇಂದ್ರಿಯ-ಮನಸ್ಸು- ಬುದ್ಧಿಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.