ತೂಕ ಇಳಿಸಿಕೊಳ್ಳಲು ಹೋಗಿ 26ವರ್ಷಕ್ಕೇ ಜೀವಕಳೆದುಕೊಂಡ ಯುವಕ!

26 year boy
Published on

ಚೆನ್ನೈ: ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ನ್ಯೂನತೆ ಇರುತ್ತದೆ. ಆದರೆ ಅದನ್ನೇ ಚಿಂತಿಸುತ್ತ ಮಾನಸಿಕವಾಗಿ ಜರ್ಝರಿತರಾಗುವವರಿಗೆ ಕೊರತೆಯೇನೂ ಇಲ್ಲ. ಇಲ್ಲೊಬ್ಬ 26ರ ಹರೆಯದ ಯುವಕ ತೂಕ ಇಳಿಸಿಕೊಳ್ಳುವ ಆಸೆಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಪಾಂಡಿಚೇರಿಯ 26 ವರ್ಷದ ಹೇಮಚಂದ್ರನ್ ಅಧಿಕ ತೂಕದಿಂದ ಬಳಲುತ್ತಿದ್ದ. ಆತ 150 ಕೆಜಿಗಿಂತ ಹೆಚ್ಚು ತೂಕವಿದ್ದ. ಈ ಅಧಿಕ ತೂಕದಿಂದಾಗಿ ಹೇಮಚಂದ್ರನ್ ತೀವ್ರ ಮಾನಸಿಕ ಯಾತನೆ ಅನುಭವಿಸುತ್ತಿದ್ದ. ಅಲ್ಲದೇ ಕೆಲವರು ಗೇಲಿ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಹೀಗಾಗಿಯೇ ಆತ ಹೇಗಾದರೂ ಮಾಡಿ ತೂಕ ಇಳಿಸಿಕೊಳ್ಳಲು ನಿರ್ಧರಿಸಿ ತಮಿಳುನಾಡಿನ ಚೆನ್ನೈನಲ್ಲಿರುವ ಬಿಪಿ ಜೈನ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದಾನೆ. ತೂಕ ಇಳಿಸಿಕೊಳ್ಳಲು ಶಸ್ತ್ರಚಿಕಿತ್ಸೆ ನಡೆಸುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಒಪ್ಪಿದ ಹೇಮಚಂದ್ರನ್ ಅವರಿಗೆ ಇದೇ ತಿಂಗಳ 23ರಂದು ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಆದರೆ, ವೈದ್ಯರು ಚಿಕಿತ್ಸೆ ನೀಡಿದ ಕೆಲವೇ ದಿನಗಳಲ್ಲಿ ಅವರ ಸ್ಥಿತಿ ಹದಗೆಟ್ಟಿತು. ಕೊನೆಗೆ ಯುವಕ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾನೆ. ಈ ಶಸ್ತ್ರಚಿಕಿತ್ಸೆಗೆ 8 ಲಕ್ಷ ರೂ.ವೆಚ್ಚವಾಗಿದೆಯಂತೆ.

ಇದಾದ ಬಳಿಕ ಆತನ ಕುಟುಂಬಸ್ಥರು ಸಾವಿಗೆ ಚಿಕಿತ್ಸೆ ನೀಡಿದ ವೈದ್ಯರೇ ಕಾರಣ ಎಂದು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಇದರಿಂದ ಯುವಕ ಚಿಕಿತ್ಸೆ ಪಡೆದ ಆಸ್ಪತ್ರೆಯ ಸುತ್ತಮುತ್ತ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಘಟನೆಗೆ ಸ್ಟಾಲಿನ್ ಸರ್ಕಾರ ಪ್ರತಿಕ್ರಿಯಿಸಿದೆ. ಯುವಕನ ಸಾವಿನ ಕುರಿತು ತನಿಖೆಗೆ ಆದೇಶಿಸಲಾಗಿದೆ. 26ನೇ ವಯಸ್ಸಿನಲ್ಲಿ ತೂಕ ಇಳಿಸಿಕೊಳ್ಳಬೇಕೆಂದುಕೊಂಡಿದ್ದ ಯುವಕ ವೈದ್ಯರ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿದ್ದಾನೆ. ಈ ಹಿಂದೆ ಕೆಲ ಯುವತಿಯರು ಸುಂದರವಾಗಿ ಕಾಣಲು ನಾನಾ ರೀತಿಯ ಚಿಕಿತ್ಸೆಗೆ ಒಳಗಾಗಿ ಕುರೂಪಿಯಾಗಿ ಕಾಣಿಸಿಕೊಂಡಿದ್ದರು. ಅವರಲ್ಲಿ ಕೆಲವರಿಗೆ ವಿವಿಧ ರೀತಿಯ ಕಾಯಿಲೆಗಳೂ ಬಂದಿವೆ. ಆದ್ದರಿಂದಲೇ ಸಮಸ್ಯೆಯಾದರೆ ನೈಸರ್ಗಿಕ ವಿಧಾನವನ್ನು ಪ್ರಯತ್ನಿಸಿದರೆ ತಡವಾದರೂ ಫಲಿತಾಂಶ ಅನುಕೂಲಕರವಾಗಿರುತ್ತದೆ ಎಂದು ಹಲವರು ಭಾವಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net