

ಗುರುಗಳು ನಮಗೆ, ನಮ್ಮ ಜೀವನಕ್ಕೆ ಸರಿಯಾದ ಮಾರ್ಗ ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ ದಿಕ್ಸೂಚಿ, ದಾರಿದೀಪ. ಪರಮಾತ್ಮನ, ಪರಮಾರ್ಥದ ಅರಿವನ್ನು ತಿಳಿಯಲು ನಮ್ಮೊಳಗಿರುವ ಆತ್ಮಜ್ಯೋತಿ ಯನ್ನು ಜ್ಞಾನವೆಂಬ ತೈಲ ಹಾಕಿ ಬೆಳಗುವಂತೆ ಮಾಡಿ ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಅಧ್ಯಾತ್ಮದ ಜೊತೆಗೆ ಲೌಕಿಕ ಪ್ರಪಂಚದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟುವ ತನಕ ಸಹಾಯ ಮಾಡುವವನೇ ಶ್ರೇಷ್ಠಗುರು. ಅಲೆದು ಅಲೆದು ಹುಡಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವುಗಳೆಲ್ಲರೂ ಆ ಗುರುವಿನ ಮುಖಾಂತರವೇ ಪರಮಾತ್ಮನ ಅರಿವು, ಪ್ರಪಂಚದ ಅರಿವು, ಅರಿಯಬೇಕಾಗಿರುವುದರಿಂದ, ಗುರುವನ್ನು ನಮ್ಮ ಅಂತರಂಗದಲ್ಲೇ ಪ್ರತಿಷ್ಠಾಪಿಸಿ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲ ಎಂದು ಅಂತಹ ಗುರುವಿಗೆ ಶರಣಾದಾಗ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಫಲಪ್ರದವಾಗುತ್ತದೆ.
ಪ್ರಶಾಂತತೆ, ಕ್ರೋಧರಾಹಿತ್ಯ, ಸದಾಚಾರಯೋಗ್ಯ, ಸಹೃದಯಿ ಮತ್ತು ತತ್ತ್ವದರ್ಶಿ- ಈ ಐದು ವಿಶೇಷ ಗುಣಗಳಿದ್ದವರು ‘ಗುರು’ ಎಂದು ಕರೆಯಲ್ಪಡುತ್ತಾರೆ.
ಪ್ರಶಾಂತತೆ: ದ್ವಂದ್ವರಹಿತವಾದ ಮನಸ್ಸಿನ ಸ್ಥಿತಿಯೇ ಪ್ರಶಾಂತತೆ. ಸಮುದ್ರದ ತರಂಗಗಳೆಲ್ಲ ಅಡಗಿದಾಗ ಸಮುದ್ರ ಹೇಗೆ ಪ್ರಶಾಂತವಾಗಿರುತ್ತದೆಯೋ ಹಾಗೆ ಮನದ ಸಂಕಲ್ಪ ಮತ್ತು ವಿಕಲ್ಪಗಳ ತೆರೆ ಅಡಗಿದ ಸ್ಥಿತಿಯೇ ಪ್ರಶಾಂತತೆ. ಸುಖ-ದುಃಖಗಳ ಮಧ್ಯೆ ಸಮಸ್ಥಿತಿಯಿಂದ ಇರುವುದು ಗುರುವಿನ ಮೊದಲ ಲಕ್ಷಣ.
ಕ್ರೋಧರಾಹಿತ್ಯ: ಕೋಪ ಅಂಟದ ತಪಸ್ಸು ಫಲಕಾರಿಯಾಗುತ್ತದೆ. ಕ್ರೋಧ ತನ್ನ ವೈರಿ. ಆ ಕ್ರೋಧದ ಇನ್ನೊಂದು ಮುಖವೇ ದ್ವೇಷವಾಗಿದೆ. ಗುರುವಿನಲ್ಲಿ ಪ್ರೀತಿ ವಾತ್ಸಲ್ಯಗಳು ಇದ್ದರೆ ಮಾತ್ರ ಗುರು-ಶಿಷ್ಯರ ನಡುವಿನ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಇಲ್ಲದಿದ್ದರೆ ಆ ಸಂಬಂಧ ವ್ಯಾವಹಾರಿಕವಾಗಿ ಮಾತ್ರ ಸೀಮಿತವಾಗುತ್ತದೆ. ಇದು ಗುರುವಿನ ದ್ವೀತಿಯ ಲಕ್ಷಣ.
ಸದಾಚಾರಯೋಗ್ಯ: ಆಚಾರ ಮತ್ತು ವಿಚಾರ ಎಂಬ ಎರಡು ಕೊಂಡಿಗಳು ಯಾವತ್ತೂ ಕಳಚಬಾರದು. ಮಾತು ಬ್ರಹ್ಮ, ಮನವು ಭ್ರಮೆಯಿಂದ ತುಂಬಿದ್ದರೆ ಏನು ಪ್ರಯೋಜನ? ಪುಣ್ಯಕ್ಷೇತ್ರದಲ್ಲಿದ್ದು ದುಷ್ಟ ವಿಚಾರಕ್ಕೆ ಕೈಹಾಕಿ ಅಧ್ಯಾತ್ಮ ಕ್ಷೇತ್ರವನ್ನು ಅಲ್ಲೋಲಕಲ್ಲೋಲ ಮಾಡುವ ಗುರುವನ್ನು ನೋಡಿದರೆ ಮನಸ್ಸು ಜುಗುಪ್ಸೆಗೆ ಒಳಗಾಗುತ್ತದೆ. ಇದು ತೃತೀಯ ಲಕ್ಷಣ.
ಸಹೃದಯಿ: ಇನ್ನೊಬ್ಬರು ತೊಂದರೆಯಲ್ಲಿದ್ದಾಗ ಕೈಲಾದ ಸಹಾಯ ಮಾಡ ಬೇಕು. ಅದಕ್ಕೆ ಪ್ರತಿಫಲ ಬಯಸದೆ ಇರುವುದೇ ಸಹೃದಯಿಯ ಲಕ್ಷಣ. ಅವರು ಸಮಾಜ ಮುಖಿಯಾಗಿ ಸಮಾಜದ ಮೇಲೆ ಬೆಳಕು ಚೆಲ್ಲಬೇಕು. ಇದು ಚತುರ್ಥ ಲಕ್ಷಣ.
ತತ್ತ್ವದರ್ಶಿ: ಗುರು ಯಾವಾಗಲೂ ತತ್ತಾ್ವನುಭವಿಯಾಗಿರಬೇಕು. ಚಿತ್ರದ ಹುಲಿ, ಶಿಲೆಯ ಸಿಂಹ, ಪರಿಮಳವಿಲ್ಲದ ಪುಷ್ಪ, ರಸವಿಲ್ಲದ ಹಣ್ಣು, ವಿದ್ಯೆಯಿಲ್ಲದ ಗುರು ಇವೆಲ್ಲ ವ್ಯರ್ಥ ಸಮಾನ. ಶಿಷ್ಯರು-ಭಕ್ತರ ಸಂದೇಹಗಳನ್ನು ದೂರ ಮಾಡಿ ತತ್ತ್ವವನ್ನು ಉಪದೇಶಿಸುವುದು ಗುರುವಿನ ಪಂಚಮ ಲಕ್ಷಣ.
(ಲೇಖಕರು ಉಪನ್ಯಾಸಕರು)
(ಪ್ರತಿಕ್ರಿಯಿಸಿ: manollasa@gmail.com)