ನಾನ್​ ಸ್ಟಾಪ್ ವಿಡಿಯೋ ಗೇಮ್​ ಆಡಿದ 15ರ ಬಾಲಕನಿಗೇನಾಯಿತು ನೋಡಿ..

video game
Published on

ಬೀಜಿಂಗ್​: ಕೋವಿಡ್​ 19 ಲಾಕ್​ಡೌನ್ ಎಫೆಕ್ಟ್​ ಯಾವ ರೀತಿ ಆಗಿದೆ ನೋಡಿ. ಅದರ ಹುಟ್ಟೂರು ಚೀನಾದಲ್ಲಿನ ಜನರ ಕಥೆ-ವ್ಯಥೆ ಇದು. ಮೊಬೈಲ್​ ಹಿಡಿದು ಕುಳಿತುಕೊಳ್ಳಬೇಡಿ, ವಿಡಿಯೋ ಗೇಮ್ ಆಡ್ತಾನೇ ಇರಬೇಡಿ ಎಂಬಿತ್ಯಾದಿ ಉಪದೇಶಗಳನ್ನು ಪರಿಣತರು, ಮನೆಗಳಲ್ಲಿ ಹಿರಿಯರು ಪದೇಪದೆ ಕೊಡುತ್ತಿರುತ್ತಾರೆ. ಅದರ ಹಿಂದಿದೆ ಆರೋಗ್ಯದ ಕಾಳಜಿ. ಅಂತಹ ಕಾಳಜಿಯ ಉಪದೇಶಗಳನ್ನು ನಿರ್ಲಕ್ಷಿಸಿದ 15 ವರ್ಷ ವಯಸ್ಸಿನ ಬಾಲಕನಿಗೆ ಇದೇನಾಯಿತು!

ನನ್ನಿಂಗ್​ ಎಂಬ ಪಟ್ಟಣದ ಶಿವೋಬಿನ್​ ಎಂಬ ಹೆಸರಿನ ಬಾಲಕ ಆತ. ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ. ಕೋವಿಡ್ 19 ಸೋಂಕು ಹರಡದಂತೆ ಲಾಕ್​ಡೌನ್ ಹೇರಿದ್ದೇ ತಡ. ಯಾರೂ ಮನೆ ಬಿಟ್ಟು ಹೊರಬರಬೇಡಿ. ಎಲ್ಲರೂ ಮನೆಯಲ್ಲೇ ಸುರಕ್ಷಿತವಾಗಿರಿ ಎಂಬ ನಿರ್ದೇಶನ ನೀಡಲಾಗಿತ್ತು. ಮನೆಯಲ್ಲಿ ಇದ್ದ ಈ ಬಾಲಕ ಮೊಬೈಲ್ ಹಿಡಿದು ರೂಮ್ ಸೇರಿದ್ದ. ಆನ್​ಲೈನ್ ಕ್ಲಾಸ್​ ನೆಪದಲ್ಲಿ ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ನಿರಂತರ ವಿಡಿಯೋ ಗೇಮ್ ಆಡಿದ. ವಿಡಿಯೋ ಗೇಮ್ ಹುಚ್ಚು ಎಷ್ಟರ ಮಟ್ಟಿಗೆ ಆವರಿಸಿತ್ತು ಎಂದರೆ ರಾತ್ರಿ ನಿದ್ರೆಯ ಅವಧಿ 2 ಗಂಟೆಗೆ ಇಳಿದಿತ್ತು.

ಮಾರ್ಚ್​ ತಿಂಗಳಲ್ಲಿ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದ. ಎಡಗೈಗೆ ಬಲವೇ ಇರಲಿಲ್ಲ. ಕೂಡಲೇ ಅತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದಾಗ ಆತನ ಎಡದ ಕೈಗೆ ಲಕ್ವ ಬಡಿದಿರುವುದು ಗೊತ್ತಾಗಿತ್ತು. ಅಸಹಜ ಸ್ಟ್ರೋಕ್​ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ವೈದ್ಯರು, ಕೂಲಂಕಷವಾಗಿ ಪರಿಶೀಲಿಸಿ ಕಾರಣವೇನು ಎಂದು ವಿಚಾರಸಿದಾಗ ವಿಡಿಯೋ ಗೇಮ್​ನ ವಿಚಾರ ಬಹಿರಂಗವಾಗಿತ್ತು.

ಈ ರೀತಿ ಬಾಲ್ಯದಲ್ಲಿ ಲಕ್ವ ಹೊಡೆಯುವುದು ಸಹಜವಾದ ಕ್ರಿಯೆಯಲ್ಲ. ಸಾಮಾನ್ಯವಾಗಿ ಅನಾರೋಗ್ಯಕರ ಜೀವನಶೈಲಿ ಹೊಂದಿದವರಿಗೆ ಇಂತಹ ತೊಂದರೆ ಆಗುತ್ತವೆ. ಫೆಬ್ರವರಿ-ಮಾರ್ಚ್​ನಲ್ಲಿ ಆತನ ಜೀವನಶೈಲಿ ಅನಾರೋಗ್ಯಕರವಾಗಿತ್ತು. ಸದ್ಯ ಆತ ಜಿಯಾಂಗ್​ಬಿನ್​ ಹಾಸ್ಪಿಟಲ್​ನ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎಡ ಗೈ ಚಲನೆ, ಸ್ಪರ್ಶ ಎಲ್ಲವೂ ಗೊತ್ತಾಗಬಹುದಾದರೂ ಮತ್ತೆ ಹಿಂದಿನಂತೆ ಆರೋಗ್ಯಪೂರ್ಣವಾಗಿ ಇರುತ್ತಾನೆ ಎಂಬ ಭರವಸೆ ಇಲ್ಲ ಎಂದು ಡಾ. ಲಿ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net