ಸಮಚಿತ್ತದ ದಾರಿ; ಮನುಷ್ಯರ ವರ್ತನೆಯಲ್ಲೂ ಹೀಗೆ ಭಿನ್ನತೆ

fgsdf
Published on

|ರೇಖಾ ಗಜಾನನ ಭಟ್ಟ

ಅದೊಂದು ಕಚೇರಿ. ಅಲ್ಲಿನ ಕೆಲಸಗಾರ ಕಚೇರಿಯ ಎಲ್ಲಾ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುತ್ತಿದ್ದ. ಮೇಲಧಿಕಾರಿ ಹೇಳಿದ್ದನ್ನು ವಿಧೇಯತೆಯಿಂದ ಪಾಲಿಸುತ್ತಿದ್ದ. ಆ ಮೇಲಧಿಕಾರಿ ಮಾತ್ರ ಈತನನ್ನು ಪ್ರಶಂಸಿಸುವುದನ್ನು ಬಿಟ್ಟು ಸದಾ ನಿಂದಿಸುತ್ತಿದ್ದರು. ಇದರಿಂದ ಬೇಸತ್ತ ಕೆಲಸಗಾರ ಕ್ರಮೇಣ ಉತ್ಸಾಹ ಕಳೆದುಕೊಂಡ. ತಾನು ಅತಿಯಾಗಿ ಗೌರವಿಸುವ ಅಧಿಕಾರಿ ಒಂದು ದಿನವೂ ತನ್ನೊಡನೆ ಆತ್ಮೀಯವಾಗಿ ನಡೆದುಕೊಳ್ಳುತ್ತಿಲ್ಲವಲ್ಲ ಎನ್ನುವ ಕೊರಗು ಅವನಲ್ಲಿ ಮನೆಮಾಡಿತು. ಒಬ್ಬ ಸಂತರ ಬಳಿ ಹೋಗಿ ಅಳಲನ್ನು ತೋಡಿಕೊಂಡ. ಸಂತರು ಅವನನ್ನು ಆಶ್ರಮದ ಗೋಶಾಲೆಗೆ ಕರೆದುಕೊಂಡು ಹೋದರು. ಅಲ್ಲಿರುವ ಹತ್ತಾರು ದನಕರುಗಳಿಗೆ ಮೇವು ನೀಡುತ್ತಾ ಹೋದರು. ಸಂತರನ್ನು ಕಂಡು ಜಿಗಿದು ಕುಣಿದ ಹಸುಕರುಗಳು ಮೇವು ತಿಂದು, ನಂತರ ಸಂತರ ಕೈಯನ್ನು ನೆಕ್ಕುತ್ತ ಪ್ರೀತಿಯನ್ನು ವ್ಯಕ್ತಪಡಿಸಿದವು. ಹಾಗೆ ಮುಂದುವರಿದು ಸಂತರು ಒಂದು ಹೋರಿಯ ಬಳಿ ಬಂದರು.

ಆ ಹೋರಿ ಹೂಂಕರಿಸುತ್ತಾ ಮೇಲೆದ್ದು, ಮೇವು ತಿಂದು ಮುಗಿಸಿ ಸಂತರನ್ನು ಸಿಟ್ಟಿನಿಂದ ತಿವಿಯಲು ಮುಂದೆ ಬಂದಿತು. ಆಗ ಸಂತರು ಕೆಲಸಗಾರನತ್ತ ತಿರುಗಿ.. ‘ನೋಡು ಈ ಗೋಶಾಲೆಯೇ ನಿನ್ನ ಕೊರಗು ತೊಡೆದುಕೊಳ್ಳಲು ಪಾಠಶಾಲೆಯಾಗಿದೆ. ನಾನು ನೀಡಿದ ಪ್ರೀತಿಗೆ ಪ್ರತಿಯಾಗಿ ಎಲ್ಲಾ ದನಗಳು ಪ್ರೀತಿ ತೋರ್ಪಡಿಸಿದರೂ ಈ ಹೋರಿ ಮಾತ್ರ ಸಿಟ್ಟನ್ನೇ ಹೊರಹಾಕಿತು. ಅದು ಸಣ್ಣ ಕರುವಾಗಿದ್ದಾಗಿನಿಂದಲೂ ಇದೇ ಸ್ವಭಾವ ಹೊಂದಿದೆ. ಬದಲಾಯಿಸಲು ಎಷ್ಟು ಯತ್ನಿಸಿದರೂ ಅದು ಬದಲಾಗದೇ ಹೋದಾಗ ನಾವೇ ಅದರ ಗುಣಕ್ಕೆ ಹೊಂದಿಕೊಂಡೆವು’ ಎಂದರು. ಆಗ ಕೆಲಸಗಾರ ‘ಮತ್ತೇಕೆ ಹೋರಿಯನ್ನು ಇಲ್ಲೇ ಇಟ್ಟುಕೊಂಡಿದ್ದೀರಿ..’ಎಂದು ಕೇಳಿದ.

ಅದು ಕೋಪದ ಸ್ವಭಾವ ಹೊಂದಿದ ಮಾತ್ರಕ್ಕೆ ಅದರಿಂದಾಗುವ ಪ್ರಯೋಜನವನ್ನು ನಾವು ಮರೆಯುವಂತಿಲ್ಲ. ನೀಡಿದ ಆಹಾರಕ್ಕೆ ಪ್ರತಿಯಾಗಿ ಅದು ನೀಡುವ ಗೊಬ್ಬರವನ್ನು ನಾವು ಬಳಸುತ್ತೇವೆ. ಅಲ್ಲದೇ ಅದನ್ನು ಹೊರಗಡೆ ಬಿಟ್ಟರೆ ತನ್ನ ಸ್ವಭಾವದ ಕಾರಣದಿಂದ ತೊಂದರೆ ತಂದುಕೊಳ್ಳುವುದೆಂಬ ಕಾಳಜಿಯೂ ಇದೆ. ಮನುಷ್ಯರ ವರ್ತನೆಯಲ್ಲೂ ಹೀಗೆ ಭಿನ್ನತೆಗಳಿರುತ್ತವೆ. ಅದಕ್ಕೆ ಬೇರೆಬೇರೆ ಮೂಲ ಕಾರಣಗಳಿರಬಹುದು. ಅಂತಹವರಿಂದ ನಾವು ಹೆಚ್ಚಿನ ನಿರೀಕ್ಷೆ ಮಾಡದೇ ಇದ್ದುದ್ದನ್ನು ಇದ್ದ ಹಾಗೆಯೇ ಒಪ್ಪಿಕೊಳ್ಳುವುದು ಜಾಣತನ. ಇದರಿಂದ ನಮ್ಮ ಮನಸ್ಸಿಗೂ ನೆಮ್ಮದಿ’ ಎಂದರು. ಅವರ ಮಾತಿನಿಂದ ಕೆಲಸಗಾರನ ಮನಸ್ಸು ಶಾಂತವಾಯಿತು. ನಮ್ಮ ನಡೆನುಡಿ ಕಾರ್ಯಗಳಿಂದ ಇತರರನ್ನು ಮೆಚ್ಚಿಸಬೇಕು ಎನ್ನುವುದು ಮಾನವ ಸಹಜ ಗುಣ. ಆದರೆ ಇಡೀ ಲೋಕವನ್ನು ಮೆಚ್ಚಿಸುತ್ತೇನೆ ಎನ್ನುವುದು ಮೂರ್ಖತನ. ನಮ್ಮ ಅತಿಯಾದ ನಿರೀಕ್ಷೆಗಳು ಮನೋಭಿನ್ನತೆಯ ಕಡಲಿನಲ್ಲಿ ಕೊಚ್ಚಿಹೋಗಿ ದುಃಖ ತರುತ್ತವೆ. ಜಗದ ಪ್ರತಿಯೊಂದು ಸಂಗತಿಯಲ್ಲೂ ವೈರುಧ್ಯದ ನಡೆಗಳಿವೆ. ಈ ಸತ್ಯ ಅರಿತು ಮನಸ್ಸನ್ನು ತರಬೇತುಗೊಳಿಸಿಕೊಂಡರೆ ಸಮಚಿತ್ತದ ದಾರಿಯತ್ತ ಸಾಗಬಹುದು. ಲೋಕವ ಮೆಚ್ಚಿಸಲು ನಾಕವನೇ ತಂದರೂ/ ಶೋಕವದು ತಪ್ಪೀತೆ..! ಇದು ಬಾಳ ಸತ್ಯ/ ಜಗವೆಂಬ ಬತ್ತಳಿಕೆ ಭಿನ್ನ ಭಾವಗಳಿಲ್ಲಿ/ ಚುಚ್ಚಿದರೂ ಸೈರಿಸಿಕೊಳಬೇಕು ನಿತ್ಯ

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net