ಫೇಶಿಯಲ್ ಬೇಕೊ ಬೇಡ್ವೊ; ಇದರಿಂದಾಗುವ ಲಾಭಗಳೇನು?

facial image
Published on

ಬೆಂಗಳೂರು: ಸ್ಪಾಗಳಲ್ಲಿ ಅತಿ ಹೆಚ್ಚು ಬೇಡಿಕೆಯಿರುವುದು ಫೇಶಿಯಲ್‌ಗೆ. ಈಗಿರುವ ಚೆಲುವನ್ನು ಇನ್ನಷ್ಟು ಇಮ್ಮಡಿಗೊಳಿಸುವಲ್ಲಿ ಫೇಶಿಯಲ್ ಪಾತ್ರ ಬಹಳಷ್ಟಿದೆ. ಹರೆಯದ ಯುವಕ-ಯುವತಿಯರಿಗಷ್ಟೇ ಮೀಸಲಾಗಿರದ ಫೇಶಿಯಲ್, ಮುದುಡಿಕೊಂಡ ಮುಖಕ್ಕೂ ಚೈತನ್ಯ ಒದಗಿಸುತ್ತದೆ. ಫೇಶಿಯಲ್ ಎಂದರೆ ಮಸಾಜ್ ಎಂದರ್ಥ. ಇದನ್ನು ತಮಗಿಷ್ಟ ಬಂದಂತೆ ಅಡ್ಡಾದಿಡ್ಡಿಯಾಗಿ ಮಾಡುವ ಹಾಗಿಲ್ಲ. ಕ್ರಮಬದ್ಧವಾಗಿ ಮಾಡಬೇಕು. ಆಗ ಮುಖದಲ್ಲಿರುವ ಓರೆಕೋರೆಗಳು ಕಡಿಮೆಯಾಗಿ, ಸುಂದರ ಆಕಾರ ಮೂಡಿಬರುತ್ತದೆ. ಭಾರತದಲ್ಲಿ ಮಾಡುವ ಫೇಶಿಯಲ್ ಕ್ರಮ ವಿದೇಶಕ್ಕಿಂತ ಭಿನ್ನ, ಚೆನ್ನವೂ ಹೌದು. ವಿದೇಶದಲ್ಲಿ ತ್ವಚೆಯನ್ನು ಮುಟ್ಟದೆ ಮಷಿನ್‌ಗಳನ್ನು ಆಧರಿಸಿ ಮಾಡುತ್ತಾರೆ. ಭಾರತದಲ್ಲಿ ಕೈಯಿಂದ ಒತ್ತಡ ಹಾಕಿ ಮಾಡಲಾಗುತ್ತದೆ. ಅನೇಕ ವಿಧಾನಗಳಲ್ಲಿ ಇದನ್ನು ಮಾಡಲಾಗುತ್ತದೆ. ಎಫ್ಲುರಾಜ್, ಪೆಟ್ರಿಸಾಜ್, ಟಪೋಟ್‌ಮೆಂಟ್, ಫ್ರಿಕ್ಷನ್, ವೈಬ್ರೇಶನ್ ಇತ್ಯಾದಿ. ಇದರಿಂದಾಗುವ ಲಾಭಗಳು ಇಲ್ಲಿವೆ ನೋಡಿ…

*ತ್ವಚೆಯ ಆಳದಲ್ಲಿ ಅಡಗಿರುವ ಕೊಳೆಯನ್ನು ಪರಿಣಾಮಕಾರಿಯಾಗಿ ತೆಗೆಯುತ್ತದೆ.
*ಚರ್ಮವು ಸುಲಭವಾಗಿ ಉಸಿರಾಡಲು ಸಹಾಯಕವಾಗುತ್ತದೆ.
*ರಕ್ತ ಸಂಚಾರ ಸುಗಮವಾಗಿ, ವಿಶ್ರಾಂತಿ ಸಿಗುತ್ತದೆ.
*ಆರೋಗ್ಯಕರ ತ್ವಚೆಯಲ್ಲಿನ ಎಣ್ಣೆ, ಪಿ.ಹೆಚ್. ಮಟ್ಟವನ್ನು ಸಮತೋಲನಗೊಳಿಸುತ್ತದೆ.
*ಕೋಶಗಳು ಪುನರುಜ್ಜೀವಗೊಳ್ಳುತ್ತವೆ.
*ಮನಸ್ಸು ಮತ್ತು ದೇಹ ಉಲ್ಲಸಿತಗೊಳ್ಳುತ್ತದೆ.
*ಒತ್ತಡ ಕಡಿಮೆಯಾಗುತ್ತದೆ.
*ಮುಖ ಕಾಂತಿಯುತವಾಗಿ ಹೊಳೆಯುತ್ತದೆ.
*ಪೂರ್ವ ತಯಾರಿಯೂ ಬೇಕು

ಸ್ಪಾಗಳಲ್ಲಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುವ ಮುನ್ನ ಚರ್ಮ ವಿಶ್ಲೇಷಣೆ ಬಹಳ ಮುಖ್ಯ. ಬ್ಯೂಟಿಷನ್ ಅಥವಾ ಕಾಸ್ಮೆಟಾಲಜಿಸ್ಟ್​​​ಗಳ ಬಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಷ್ಟು ದಿನ, ಸಮಯ ಬೇಕೆಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಎಷ್ಟು ಹಣ ಖರ್ಚಾಗಬಹುದು, ಯಾವ ಉತ್ಪನ್ನಗಳು ತ್ವಚೆಗೆ ಯೋಗ್ಯ? ಮನೆಯಲ್ಲಿ ಹೇಗೆ ಆರೈಕೆ ಮಾಡಬೇಕು? ಅನುಕೂಲ ಮತ್ತು ಅನನುಕೂಲಗಳೇನು? ಈ ವಿಷಯಗಳ ಕುರಿತು ಮೊದಲೇ ಸಲಹೆ ಪಡೆದುಕೊಂಡರೆ ಮುಂದಿನ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net