ಅಸಿಡಿಟಿ, ಗ್ಯಾಸ್, ಮಲಬದ್ಧತೆ ಮಧುಮೇಹಕ್ಕೆ ಕಾರಣವಾಗಬಹುದೇ…ತಜ್ಞರು ಹೇಳಿದ ಸಲಹೆ ಹೀಗಿದೆ!

health
Published on

ಬೆಂಗಳೂರು: ಬದಲಾದ ಜೀವನಶೈಲಿಯಿಂದಾಗಿ ರೋಗಗಳು ಸಹ ಬದಲಾಗುತ್ತಿರುವ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ನಮ್ಮ ಕೆಟ್ಟ ಆಹಾರ ಪದ್ಧತಿ ನಮ್ಮನ್ನು ಅನೇಕ ರೋಗಗಳಿಗೆ ಬಲಿಪಶು ಮಾಡುತ್ತಿದೆ. ಅಂದಹಾಗೆ ಇಂದು ವಿಶ್ವದ ಹೆಚ್ಚಿನ ಸಂಖ್ಯೆಯ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. 2021 ರ ಐಡಿಎಫ್ ಅಟ್ಲಾಸ್ ಡೇಟಾ ಪ್ರಕಾರ, ಭಾರತವು ವಿಶ್ವದ ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಒಟ್ಟು 74.2 ಮಿಲಿಯನ್ ಮಧುಮೇಹ ರೋಗಿಗಳಿದ್ದಾರೆ.

ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಹೊಟ್ಟೆಗೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳಿವೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಿರುವವರು ಸಾಮಾನ್ಯವಾಗಿ ಗ್ಯಾಸ್, ಹೊಟ್ಟೆ ನೋವು, ಉಬ್ಬುವುದು ಮತ್ತು ಅಜೀರ್ಣದಂತಹ ಸಮಸ್ಯೆಗಳ ಬಗ್ಗೆ ದೂರು ನೀಡುತ್ತಾರೆ. ಹಾಗಾಗಿ ಅಸಿಡಿಟಿ, ಗ್ಯಾಸ್ ಮತ್ತು ಮಲಬದ್ಧತೆಯಿಂದ ಮಧುಮೇಹ ಬರಬಹುದೇ ಎಂಬ ಪ್ರಶ್ನೆ ಇಂಥವರ ಮನಸ್ಸಿನಲ್ಲಿ ಮೂಡುತ್ತದೆ.

ಇಲ್ಲಿದೆ ನೋಡಿ ತಜ್ಞರ ಅಭಿಪ್ರಾಯ
ವೈದ್ಯರ ಪ್ರಕಾರ, ಯಾವುದೇ ಕಾಯಿಲೆ ಹೊಟ್ಟೆಯಿಂದಲೇ ಆರಂಭವಾಗುತ್ತದೆ. ನಮ್ಮ ಜೀರ್ಣಕ್ರಿಯೆಯು ಆರೋಗ್ಯಕರವಾಗಿದ್ದರೆ, ದೇಹವು ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ರೋಗಗಳ ಅಪಾಯವು ಕಡಿಮೆಯಾಗುತ್ತದೆ. ಆಮ್ಲೀಯತೆ ಮತ್ತು ಜೀರ್ಣಕಾರಿ ಸಮಸ್ಯೆಗಳಂತಹ 10 ಪ್ರಕರಣಗಳಲ್ಲಿ ಓರ್ವನಿಗೆ ಮಧುಮೇಹ ಇರುತ್ತದೆ. ಆದ್ದರಿಂದ ನೀವು ಕೆಲವು ವಿಶೇಷ ಸಲಹೆಗಳನ್ನು ಅನುಸರಿಸಿದರೆ ಈ ರೋಗದಿಂದ ಮುಕ್ತಿ ಪಡೆಯಬಹುದು.

ತೂಕವನ್ನು ನಿಯಂತ್ರಣದಲ್ಲಿಡಿ
ರಕ್ತದಲ್ಲಿನ ಸಕ್ಕರೆಯ ಕುಸಿತ ಮತ್ತು ಏರಿಕೆಯು ನಿಮ್ಮ ತೂಕವನ್ನು ಅವಲಂಬಿಸಿರುತ್ತದೆ. ಆದ್ದರಿಂದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ಅಧಿಕ ತೂಕವು ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತೂಕವನ್ನು ಹತೋಟಿಯಲ್ಲಿಟ್ಟುಕೊಂಡರೆ ಅನೇಕ ರೋಗಗಳು ನಿಯಂತ್ರಣದಲ್ಲಿರುತ್ತವೆ. ತೂಕವನ್ನು ನಿಯಂತ್ರಿಸಲು, ಆರೋಗ್ಯಕರ ಆಹಾರದೊಂದಿಗೆ ದೈಹಿಕ ಚಟುವಟಿಕೆಯನ್ನು ಅಳವಡಿಸಿಕೊಳ್ಳಿ.

ಸಕ್ಕರೆ ಪರಿಶೀಲಿಸಿ
ದಿನಕ್ಕೆ ಎರಡು ಬಾರಿಯಾದರೂ ನಿಮ್ಮ ಸಕ್ಕರೆಯನ್ನು ಪರೀಕ್ಷಿಸಿ. ಇದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ವರದಿಯನ್ನು ಪತ್ತೆ ಹಚ್ಚಬಹುದು. ಅಷ್ಟೇ ಅಲ್ಲ, ಉಪವಾಸ ಮತ್ತು ಊಟದ ನಂತರದ ಸಕ್ಕರೆ ಮಟ್ಟಗಳ ನಡುವೆ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ಸಹ ನೀವು ನೋಡಲು ಸಾಧ್ಯವಾಗುತ್ತದೆ.

ಕಾರ್ಬೋಹೈಡ್ರೇಟ್ಸ್ ಕಡಿಮೆ ಮಾಡಿ
ಮಧುಮೇಹವನ್ನು ನಿಯಂತ್ರಿಸಲು, ಕಡಿಮೆ ಕಾರ್ಬೋಹೈಡ್ರೇಟ್ಸ್ ಸೇವಿಸಿ. ಕಾರ್ಬೋಹೈಡ್ರೇಟ್‌ಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳು, ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳನ್ನು ಸೇರಿಸಿ.

ವ್ಯಾಯಾಮ ಮಾಡಿ
ನಿಯಮಿತ ವ್ಯಾಯಾಮವು ರಕ್ತದ ಸಕ್ಕರೆ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿ ಊಟದ ನಂತರ 10 ನಿಮಿಷಗಳ ಕಾಲ ವಾಕ್ ಮಾಡಿ.

ನಿದ್ರೆ
ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಕಷ್ಟು ನಿದ್ರೆ ಬಹಳ ಮುಖ್ಯ. ಕಡಿಮೆ ನಿದ್ರೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಈ ಒತ್ತಡವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಕಡಿಮೆ ನಿದ್ರೆಯಿಂದ ತೂಕವೂ ಹೆಚ್ಚಾಗಬಹುದು. 

(ಹಕ್ಕುತ್ಯಾಗ: ಈ ಲೇಖನವು ನಿಮ್ಮ ಮಾಹಿತಿಗಾಗಿ ಮಾತ್ರ. ಇದನ್ನು ಕಾರ್ಯಗತಗೊಳಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net