ಬೆಳಗಿನ ಉಪಾಹಾರ ಲೇಟ್ ಆಗ್ತಿದೆಯಾ, ಮಧುಮೇಹ ಬರುವ ಸಾಧ್ಯತೆ ಹೆಚ್ಚು; ಎಚ್ಚರಿಸಿದ ವೈದ್ಯರು

breakfast (1)
Published on

ಬೆಂಗಳೂರು: ನೀವು ಪ್ರತಿದಿನ ಯಾವ ಸಮಯಕ್ಕೆ ಉಪಹಾರ ಸೇವಿಸುತ್ತೀರಿ? ಸರಿಯಾದ ಸಮಯಕ್ಕೆ ತಿಂಡಿ ತಿನ್ನದಿದ್ದರೆ, ಮುಂದಿನ ಬಾರಿಯಾದರೂ ಎಚ್ಚೆತ್ತುಕೊಳ್ಳಿ. ಏಕೆಂದರೆ ಬೆಳಗ್ಗೆ ಸರಿಯಾದ ಸಮಯಕ್ಕೆ ಉಪಹಾರ ಸೇವಿಸದಿದ್ದರೆ ಮಧುಮೇಹ ಬರುವ ಅಪಾಯವಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ಸ್ಪ್ಯಾನಿಷ್ ವಿಜ್ಞಾನಿಗಳು 8 ಗಂಟೆಯ ಮೊದಲು ಉಪಹಾರ ಸೇವಿಸುವವರಿಗೆ ಹೋಲಿಸಿದರೆ 9 ಗಂಟೆಯ ನಂತರ ಉಪಾಹಾರ ಸೇವಿಸುವವರಿಗೆ ಮಧುಮೇಹದ ಅಪಾಯವು 59 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಪುರಾವೆಗಳನ್ನು ತೋರಿಸಿದ್ದಾರೆ. ಆದರೆ ಬೆಳಗಿನ ಉಪಾಹಾರವನ್ನು ತ್ಯಜಿಸುವುದು ಒಳ್ಳೆಯದಲ್ಲ. ಒಂದು ವೇಳೆ ಹಾಗೆ ಮಾಡಿದರೆ ಮಧುಮೇಹ ಬರುವ ಅಪಾಯವಿದೆ ಎಂದು ಹೇಳಲಾಗುತ್ತದೆ.
ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್‌ನ ಅಧ್ಯಯನದಲ್ಲಿ, ರಾತ್ರಿ 10 ಗಂಟೆಯ ನಂತರ ತಡವಾಗಿ ಊಟ ಮಾಡುವವರಲ್ಲಿ ಮಧುಮೇಹದ ಅಪಾಯ ಹೆಚ್ಚು ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಂದಹಾಗೆ ಮೊದಲ ಊಟವನ್ನು ಬೆಳಿಗ್ಗೆ 8 ಗಂಟೆಗೆ ಮತ್ತು ಕೊನೆಯ ಊಟವನ್ನು ಸಂಜೆ 7 ಗಂಟೆಯ ಮೊದಲು ಪೂರ್ಣಗೊಳಿಸಿದರೆ, ಟೈಪ್ 2 ಮಧುಮೇಹದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಡಾ.ಮನೋಲಿಸ್ ಕೊಗೆವಿನಾಸ್ ಹೇಳುತ್ತಾರೆ.
ಚಯಾಪಚಯ ಕ್ರಿಯೆ ದೇಹದ ಜೈವಿಕ ಗಡಿಯಾರಕ್ಕೆ ಹೊಂದಿಕೊಳ್ಳುವ ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಜೈವಿಕ ಗಡಿಯಾರವು ಹಗಲು-ರಾತ್ರಿ ಎಂದು ಬೆಳಕನ್ನು ಅನುಸರಿಸುತ್ತದೆ. ಈ ಚಿಹ್ನೆಗಳ ಮೂಲಕ ಆಹಾರವನ್ನು ಸಹ ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಸಿರ್ಕಾಡಿಯನ್ ರಿದಮ್‌ನೊಂದಿಗೆ ಸಿಂಕ್ ಆಗದೆ ತಿನ್ನುವುದು ಹೃದ್ರೋಗ, ಮಧುಮೇಹ ಮತ್ತು ಬೊಜ್ಜು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ.

ಗಮನಿಸಿ: ವಿವಿಧ ಅಧ್ಯಯನಗಳು, ಸಂಶೋಧನೆಗಳು ಮತ್ತು ಆರೋಗ್ಯ ಜರ್ನಲ್‌ಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಎಂದಿನಂತೆ ಇಲ್ಲಿ ಒದಗಿಸಲಾಗಿದೆ. ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net