

ವಿಜಯವಾಣಿ ಸುದ್ದಿಜಾಲ ಬೈಂದೂರು
ನಾಲ್ಕು ಅಕ್ಷರ ಓದಿದ ಕೂಡಲೇ ಪಾಂಡಿತ್ಯ ಜಾಗೃತವಾಗೋದಿಲ್ಲ. ಜೀವನ ಅನುಭವವೇ ದೊಡ್ಡ ಪಾಂಡಿತ್ಯ. ಜ್ಞಾನ ಹೊಂದಿದ್ದರೂ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳದೆ, ಸ್ವಯಂ ಅಜ್ಞಾನಿ ಎನ್ನುವವನೇ ನಿಜವಾದ ಜ್ಞಾನಿ ಎಂದು ಧಾರವಾಡದ ಹೆಬ್ಬಳ್ಳಿಯ ಶ್ರೀ ಬ್ರಹ್ಮಚೈತನ್ಯ ಸ್ಥಿರಪಾದುಕಾಶ್ರಮದ ಸದ್ಗುರು ದತ್ತಾವಧೂತ ಮಹರಾಜ್ ಹೇಳಿದರು.
ಬುಧವಾರ ಸಂಜೆ ಉಪ್ಪುಂದದ ಮಾದಯ್ಯ ಶೆಟ್ರಮನೆಯ ಮೂಲಸ್ಥಾನದ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ತೆರಳುವ ದಾರಿಯಲ್ಲಿ ನಿರ್ಮಿಸಿರುವ ಸ್ವಾಗತ ಗೋಪುರ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ಅಂತರಾಳದಲ್ಲಿ ಇರುವ ಭಗವಂತನನ್ನು ಭಕ್ತಿಯಿಂದ ಸಾಕ್ಷಾತ್ಕಾರವಾಗಿಸಿಕೊಳ್ಳಬೇಕು. ಸತ್ಕರ್ಮದಲ್ಲಿ ಕಾಲಕ್ಷೇಪ ಮಾಡಲು ಅವಕಾಶ ನೀಡುವ ದೇವಸ್ಥಾನ, ಮಂದಿರ ಕಟ್ಟಬೇಕಾದರೆ ಜನ್ಮ ಜನ್ಮಾಂತರಗಳ ಪುಣ್ಯಫಲ ಬೇಕು. ಜಗತ್ತಿನಲ್ಲಿನ ಶ್ರೀರಾಮನ ಭಕ್ತರು ಬರೆದಿರುವ 165 ಕೋಟಿ ರಾಮನಾಮ ಜಪ ಬರೆದಿರುವ ಪುಸ್ತಕ ಜೋಪಾನವಾಗಿ ಇಡಲು ಹೆಬ್ಬುಳ್ಳಿಯಲ್ಲಿ ಭವ್ಯ ಮಂದಿರ ಕಟ್ಟಿಸಲಾಗಿದೆ. ಭಗವಂತನ ಕಡೆಗೆ ಅಭಿಮುಖವಾಗಿಸುವ ಸಂಕೇತಗಳೇ ಭಗವತ್ ಮಂದಿರಗಳಾಗಿದೆ ಎಂದರು. ಉಪ್ಪುಂದ ಮಾದಯ್ಯ ಶೆಟ್ರಮನೆ ಮೂಲಸ್ಥಾನ ಕುಟುಂಬದ ಯು.ಸೀತಾರಾಮ ಶೆಟ್ಟಿ, ಜಲಜಾಕ್ಷಿ ಎಂ.ಶೆಟ್ಟಿ, ನಾರಾಯಣ ಎಂ.ಶೆಟ್ಟಿ, ಭುಜಂಗ ಎಂ.ಶೆಟ್ಟಿ, ಹರೀಶ್ಕುಮಾರ್ ಎಂ.ಶೆಟ್ಟಿ, ಜ್ಯೋತಿ ಆರ್.ಶೆಟ್ಟಿ, ಪತ್ರಕರ್ತ ರಾಜೇಶ್ ಕೆ.ಸಿ. ಇದ್ದರು.
ಚೈತನ್ಯಗಳನ್ನು ಬಿಂಬಗಳಲ್ಲಿ ತುಂಬಿ ಚೈತನ್ಯ ಜಾಗೃತಿಗೊಳಿಸುವುದೇ ನಿಜವಾದ ಪ್ರಾಣಪ್ರತಿಷ್ಠೆ. ಧರ್ಮ ಕಾರ್ಯ ನಡೆಸುವವರಿಗೆ ಸಮಸ್ಯೆಯ ಪರಿಹಾರ ಸರಳವಾಗಿರುತ್ತದೆ. ಸತ್ಸಂಗದಲ್ಲಿ ಭಗವಂತ ನಮಗೆ ಹತ್ತಿರವಾಗುತ್ತಾರೆ. ಭಕ್ತಿ, ಭಗವಂತ ಎನ್ನುವ ತತ್ವ ಶಾಶ್ವತವಾಗಿರುತ್ತದೆ. ಉಪಾಸನೆ, ಅನುಷ್ಠಾನ, ಭಗವಂತನೊಂದಿಗಿನ ಅನುಸಂಧಾನ ಭಕ್ತಿಯನ್ನು ನೆಲೆಗೊಳಿಸುತ್ತದೆ. ಸದ್ಗುರು ದತ್ತಾವಧೂತ ಮಹರಾಜ್ https://www.vijayavani.net/villagers-oppose-sewage-treatment-plant https://www.vijayavani.net/central-attempt-to-destabilize-the-state-government