ನಾಮಫಲಕದಲ್ಲಿ ಕನ್ನಡ ಬಳಸದಿದ್ದರೆ ಲೈಸೆನ್ಸ್ ರದ್ದು

01
ಹೊಳೆನರಸೀಪುರ ತಾಲೂಕು ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ರೇಣು ಕುಮಾರ್, ಸೋಮಲಿಂಗೇಗೌಡ, ತಿಪ್ಪೇಸ್ವಾಮಿ, ಶಿವಶಂಕರ್, ರಾಜೇಶ್, ಸವಿತಾ ಇತರರು ಇದ್ದರು.
Published on

ಹೊಳೆನರಸೀಪುರ: ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು. ಈ ವಿಷಯದಲ್ಲಿ ಸರ್ಕಾರದ ಆದೇಶ ಪಾಲಿಸದವರ ಲೈಸೆನ್ಸ್ ರದ್ದುಗೊಳಿಸಲು ಮುಂದಾಗುವುದಾಗಿ ತಹಸೀಲ್ದಾರ್ ವೈ.ಎಂ.ರೇಣು ಕುಮಾರ್ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಖಾಸಗಿ ಶಾಲೆ, ಕಾಲೇಜು ಹಾಗೂ ಅಂಗಡಿ ಮತ್ತು ವಾಣಿಜ್ಯ ವಹಿವಾಟು ನಡೆಸುವ ಕಚೇರಿಗಳಲ್ಲಿ ಕಡ್ಡಾಯವಾಗಿ ಸರ್ಕಾರದ ಆದೇಶದ 60:40ರ ಅನುಪಾತದಂತೆ ನಾಮಫಲಕಗಳಲ್ಲಿ ಕನ್ನಡ ಬಳಸಬೇಕು ಎಂದು ಸೂಚನೆ ನೀಡಿದರು.

ಶೇ.60ರಷ್ಟು ಕನ್ನಡ ಇರಬೇಕು, ಉಳಿದ ಶೇ.40ರಷ್ಟು ಇತರ ಭಾಷೆಗಳಲ್ಲಿ ಇರಬೇಕು. ಯಾರು ಈ ನಿಯಮವನ್ನು ಪಾಲಿಸುತ್ತಿಲ್ಲವೋ ಅಂಥವರಿಗೆ ನೋಟಿಸ್ ಜಾರಿಗೊಳಿಸಿ ಎಂದು ಪುರಸಭೆ ಹಾಗೂ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದರು. ನೋಟಿಸ್‌ಗೆ ಮನ್ನಣೆ ನೀಡದವರ ಲೈಸೆನ್ಸ್ ರದ್ದತಿಗೆ ಕ್ರಮವಹಿಸಿ. ಇದಕ್ಕೂ ಬೆಲೆ ಕೊಡದಿದ್ದರೆ ಅಂಥವರ ವಿರುದ್ಧ ದೂರು ದಾಖಲಿಸಿ ಎಂದು ಖಡಕ್ಕಾಗಿ ಸೂಚನೆ ನೀಡಿದರು.

ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಓಹಿಲೇಶ್ ಮಾತನಾಡಿ, ನಾಮಫಲಕಗಳಲ್ಲಿ ಕನ್ನಡ ಬಳಸದವರ ವಿರುದ್ಧ ಹಾಗೂ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ನಡೆಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅವರು ಕಟ್ಟುನಿಟ್ಟಿನ ಕ್ರಮ ವಹಿಸಲು ನಿರ್ದೇಶನ ನೀಡಿದರು.

ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಲು ತೀರ್ಮಾಸಲಾಯಿತು. ಈ ರೀತಿ ಪ್ರತಿ ಸಭೆಯಲ್ಲೂ ಹೇಳುತ್ತೀರಿ, ಯಾರ ಮೇಲೂ ಕ್ರಮ ಜಾರಿಯಾಗಿಲ್ಲ. ಈ ಬಾರಿ ತಪ್ಪದೇ ಕ್ರಮ ಜಾರಿಯಾಗಬೇಕು. ಇಲ್ಲವಾದರೆ ಅಂಥವರ ವಿರುದ್ಧ ನಾವೇ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರವೇ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತೀಕ್ಷ್ಣವಾಗಿ ಪ್ರತಿಕ್ರಿಸಿದರು.

ನವಂಬರ್ 1ರಂದು ನಡೆಯುವ ಕನ್ನಡ ರಾಜ್ಯೋತ್ಸವದ ಮೆರವಣಿಗೆ ಕನ್ನಡಾಂಬೆ ಭಾವಚಿತ್ರದೊಂದಿಗೆ ಸಾಗಲಿದೆ. ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಭಾಗವಹಿಸುವಂತೆ ತಹಸೀಲ್ದಾರ್ ಹೇಳಿದರು.

ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಒಬ್ಬ ವಿದ್ಯಾರ್ಥಿಗೆ ಸನ್ಮಾನಿಸಲು ಮತ್ತು ಬೇರೆ ಯಾರಿಗೂ ಸನ್ಮಾನಿಸದಿರಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕನ್ನಡ ರಾಜ್ಯೋತ್ಸವದ ಮೆರವಣಿಗೆ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ವೃತ್ತದಿಂದ ಪ್ರಾರಂಭಿಸಿ ಪೇಟೆ ಬೀದಿ ಮೂಲಕ ಶ್ರೀ ಜಯಚಾಮರಾಜೇಂದ್ರ ವೃತ್ತದಲ್ಲಿ ಸಾಗಿ ಬಯಲುರಂಗ ಮಂದಿರ ತಲುಪಲು ನಿರ್ಣಯಿಸಲಾಯಿತು. ಇದಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್ ಆಕ್ಷೇಪಣೆ ವ್ಯಕ್ತಪಡಿಸಿ, ಈ ಹಿಂದೆ ತಾಲೂಕು ಕಚೇರಿಯಿಂದ ಬ್ಯಾಂಕ್ ರಸ್ತೆ ಮೂಲಕ ಸಾಗಿ ಪೇಟೆ ಬೀದಿ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಬರುತ್ತಿತ್ತು. ಇತ್ತೀಚೆಗೆ ಕಾರ್ಯಕ್ರಮದ ಮೆರವಣಿಗೆಯನ್ನು ಬದಲಾಯಿಸಿದ್ದೀರಿ. ಮೊದಲಿನಂತೆ ಮೆರವಣಿಗೆ ಪ್ರಾರಂಭಿಸಿ ಎಂದು ಪಟ್ಟುಹಿಡಿದರು. ಇದಕ್ಕೆ ತಹಸೀಲ್ದಾರ್ ಅವರು ಹತ್ತಾರು ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ. ಈಗಲೂ ಅದೇ ರೀತಿ ನಡೆಸುತ್ತೇವೆ. ನೀವು ಹೇಳಿದಂತೆ ನಡೆಸಬೇಕಾದರೆ ಸಂಸದರಿಂದ ಲೆಟರ್ ಕೊಡಿಸಿ, ಆಗ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಟ್ಟೇಗೌಡ, ಬಿಇಒ ಸೋಮಲಿಂಗೇಗೌಡ, ತಿಪ್ಪೇಸ್ವಾಮಿ, ಶಿವಶಂಕರ್, ರಾಜೇಶ್, ಸವಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net