ವೈಯಕ್ತಿಕ ಸಹಾಯಧನ ಹೆಚ್ಚಳಕ್ಕೆ ಪತ್ರ

sc
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಗ್ರಾಪಂನಿಂದ ಶೇ.25ರ ನಿಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡುವ ವೈಯಕ್ತಿಕ ಸಹಾಯಧನ ಹೆಚ್ಚಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಪಿಡಿಒ ಮಂಜುನಾಥ ಶೆಟ್ಟಿ ತಿಳಿಸಿದರು.

ಪಡುಬಿದ್ರಿ ಗ್ರಾಪಂ ಸಭಾಭವನದಲ್ಲಿ ಬುಧವಾರ ನಡ್ಸಾಲು ಮತ್ತು ಪಾದೆಬೆಟ್ಟು ಗ್ರಾಮಗಳಿಗೆ ಸಂಬಂಧಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ ಸೀತಾರಾಮ್ ಅವರ ಮನವಿಗೆ ಸ್ಪಂದಿಸಿದ ಪಿಡಿಒ, ಈಗ ನೀಡುತ್ತಿರುವ ಶೈಕ್ಷಣಿಕ ಸಹಿತ ವೈಯಕ್ತಿಕ ಸಹಾಯಧನ ಮೊತ್ತ ಕಡಿಮೆಯಾಗಿರುವುದು ನಮಗೂ ಮುಜುಗರ ತರುತ್ತಿವೆ. ಆದರೆ ಸರ್ಕಾರದ ಸುತ್ತೋಲೆಯಂತೆ ಅ ಮೊತ್ತ ನೀಡಬೇಕಿದೆ. ಕಾಮಗಾರಿಗೆ ಕಾಯ್ದಿರಿಸುವ ಮೊತ್ತವನ್ನು ವೈಯಿಕ್ತಿಕವಾಗಿ ಹೆಚ್ಚಿಸಲು ನಮಗೆ ಬರುವುದಿಲ್ಲ. ಸರ್ಕಾರ ಮಟ್ಟದಲ್ಲೇ ಆದೇಶವಾಗಬೇಕು ಎಂದರು.

ಕಂಚಿನಡ್ಕದಲ್ಲಿ ಪರಿಶಿಷ್ಟ ಜಾತಿಯವರ ಮನೆಗಳು ನಾದುರಸ್ತಿಯಲ್ಲಿವೆ. ಗ್ರಾಪಂನಿಂದ ಸರ್ವೇ ನಡೆಸಿ ಅರ್ಹರಿಗೆ ಮನೆ ದುರಸ್ತಿಗೆ ಸಹಾಯಧನ ನೀಡುವಂತೆ ಹಾಗೂ ಸವಲತ್ತು ಪಡೆದವರಿಗೆ ಮತ್ತೆ ನೀಡದೆ ಅವಕಾಶ ವಂಚಿತ ಫಲಾನುಭವಿಯನ್ನು ಗುರುತಿಸಿ ವಿತರಿಸುವಂತೆ ಕೃಷ್ಣ ಬಂಗೇರ ಆಗ್ರಹಿಸಿದರು. ಗ್ರಾಪಂನ ಇರಾದೆಯೂ ಇದೇ ಆಗಿದ್ದು, ಅರ್ಹರಿಗೆ ಯೋಜನೆಗಳ ಲಾಭ ಸಿಗುವಂತೆ ಕ್ರಮ ವಹಿಸಲಾಗುವುದು ಎಂದು ಪಿಡಿಒ ತಿಳಿಸಿದರು.

ಪ್ರಮುಖರಾದ ವಸಂತ, ಕೀರ್ತಿಕುಮಾರ್, ಸುಜಿತ್ ಮತ್ತಿತರರು ಅಹವಾಲು ಮಂಡಿಸಿದರು. ಗ್ರಾಪಂ ಅಧ್ಯಕ್ಷೆ ಶಶಿಕಲಾ ವೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಶಿಕ್ಷಣ ಇಲಾಖೆ ಶಿವಣ್ಣ, ಶಿಕ್ಷಣ ಸಂಯೋಜಕ ರಾಮಕೃಷ್ಣ ಭಟ್, ಮೆಸ್ಕಾಂ ಸಹಾಯಕ ಇಂಜಿನಿಯರ್ ಪ್ರೀತಮ್ ಯು.ನಾಯಕ್, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ವಿಜಯಲಕ್ಷ್ಮೀ, ಗ್ರಾಪಂ ಸದಸ್ಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ರೂಪಲತಾ ಎಸ್ಸಿ-ಎಸ್‌ಟಿಗೆ ಒದಗಿಸಲಾದ ಯೋಜನೆ ಬಗ್ಗೆ ವಿವರಿಸಿದರು.

ಬೇಡಿಕೆ ಸಲ್ಲಿಕೆ

ನಿತ್ಯ ಅಪಘಾತ ತಾಣವಗಿರುವ ಪಡುಬಿದ್ರಿ ಜಂಕ್ಷನ್‌ನಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲವಾಗುವಂತೆ ಬ್ಯಾರಿಕೇಡ್‌ಗಾಗಿ ಟೋಲ್ ಗುತ್ತಿಗೆದಾರ ಕಂಪೆನಿಗೆ ಬೇಡಿಕೆ ಸಲ್ಲಿಸುವಂತೆ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಎಂ.ಎಸ್. ಸೂಚನೆ ಪುರಸ್ಕರಿಸಿದ ಪಿಡಿಒ ಕಂಪೆನಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಪಡುಬಿದ್ರಿ ಕಾರ್ಕಳ ಜಂಕ್ಷನ್ ವೃತ್ತಕ್ಕೆ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಲು ಸುಕೇಶ್ ಬೇಡಿಕೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net