

ಭಟ್ಕಳ: ತಾಲೂಕಿನ ವೆಂಕಟಾಪುರದ ಸೇತುವೆ ಶಿಥಿಲಗೊಂಡಿದ್ದು, ಕಾರವಾರದ ಕಾಳಿ ಹಳೇ ಸೇತುವೆಯ ಪರಿಸ್ಥಿತಿ ಇದಕ್ಕೂ ಒದಗಿ ಬರಲಿದೆಯೇ ಎನ್ನುವ ಆತಂಕ ಸಾರ್ವಜನಿಕರಿಗೆ ಕಾಡುತ್ತಿದೆ. ಹೆದ್ದಾರಿ ವಿಸ್ತರಣೆ ಸಮಯದಲ್ಲಿ ವೆಂಕಟಾಪುರ ನದಿಗೆ ಹೊಸ ಸೇತುವೆ ನಿರ್ಮಾಣ ಮಾಡಿದ ಬಳಿಕ ದ್ವಿಪಥ ವಾಹನ ಸಂಚಾರಕ್ಕೆ (ಎರಡು ಸೇತುವೆ) ಅನುವು ಮಾಡಿಕೊಡಲಾಗಿತ್ತು. ಕಾಮಗಾರಿ ನಡೆಸುವ ಸಂದರ್ಭದಲ್ಲೇ ಹಳೇ ಸೇತುವೆ ಪರಿಶೀಲನೆ ನಡೆಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದ್ದ ಎನ್ಎಚ್ಎಐ ಈ ಕುರಿತು ನಿಷ್ಕಾಳಜಿ ವಹಿಸಿ ಮನಸಿಗೆ ಬಂದಂತೆ ಕಾಮಗಾರಿ ನಡೆಸಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಆಗಲೇ ಹಳೇ ಸೇತುವೆಯ ಸಾಮರ್ಥ್ಯ ಪರಿಶೀಲಿಸಿ ಅಗತ್ಯ ದುರಸ್ತಿ ಕಾರ್ಯ ಮಾಡಿ ಜನರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದ್ದ ಇಲಾಖೆ ಎಡವಿದೆ. ಈಗ ಸೇತುವೆ ಬಂದ್ ಮಾಡಿ ಅದರ ದುರಸ್ತಿ ಕಾರ್ಯಕ್ಕೂ ಮುಂದಾಗದೆ ಪ್ರಯಾಣಿಕರು ತೊಂದರೆ ಅನುಭವಿಸುವಂತೆ ಆಗಿದೆ. ಈಗಾಗಲೇ ಹೆದ್ದಾರಿ ವಿಸ್ತರಣೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಹಲವು ಸಂಘಟನೆಗಳು ಆರೋಪಿಸುತ್ತಿದ್ದು, ಜಿಲ್ಲಾಧಿಕಾರಿಯಿಂದ ಹಿಡಿದು ಪ್ರಧಾನಮಂತ್ರಿಯವರೆಗೂ ದೂರು ಹೋಗಿವೆ.
ಇದೇ ರೀತಿಯಲ್ಲಿ ಹೊನ್ನಾವರ ತಾಲೂಕಿನ ಶರಾವತಿ ಸೇತುವೆಯನ್ನು ಈಗಾಗಲೇ ಬಂದ್ ಮಾಡಿ ಹಲವು ವರ್ಷಗಳೇ ಕಳೆದಿವೆ. ಅದು ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ ಎಂದು ಬಂದ್ ಮಾಡಲಾಗಿದೆ. ಆದರೆ, ತಪ್ಪದೇ ಟೋಲ್ ಸಂಗ್ರಹಿಸುವ ಎನ್ಎಚ್ಎಐ, ಸೇತುವೆಯ ಮರು ನಿರ್ಮಾಣ ಅಥವಾ ಅದರ ಪರ್ಯಾಯ ಮಾರ್ಗ ಕಂಡು ಹಿಡಿಯುತ್ತಿಲ್ಲ. ಉಡುಪಿ, ದಕ್ಷಿಣ ಕನ್ನಡದಲ್ಲಿ ಶಿಥಿಲಗೊಂಡಿರುವ ಸೇತುವೆಗಳನ್ನು ಮರು ನಿರ್ಮಾಣ ಮಾಡಲಾಗಿದೆ. ಆದರೆ, ಉತ್ತರ ಕನ್ನಡಕ್ಕೆ ಮಾತ್ರ ಈ ಭಾಗ್ಯವಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನೂ ಸ್ವಲ್ಪ ದಿನಗಳಲ್ಲಿ ಹೊನ್ನಾವರ ಶರಾವತಿ ಸೇತುವೆಗೆ ಬಂದ ಗತಿಯೇ ವೆಂಕಟಾಪುರ ಸೇತುವೆಗೆ ಬರಲಿದೆ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಸೇತುವೆಯಿಂದ ಸುಮಾರು ಅರ್ಧ ಕಿಮೀ ದೂರದಲ್ಲಿಯೇ ಬ್ಯಾರಿಕೇಡ್ಗಳನ್ನಿಟ್ಟು ಹಳೇ ಸೇತುವೆ ರಸ್ತೆ ಬಂದ್ ಮಾಡಿದ್ದ ಕಂಪನಿಯು ಒಂದೇ ಕಡೆಯಿಂದ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ವಾಹನಗಳ ಭರಾಟೆ ಹೆಚ್ಚುತ್ತಿರುವುದರಿಂದ ಭಾರಿ ಗಾತ್ರದ ವಾಹನಗಳು ತಿರುವು ಪಡೆಯುವಾಗ ಸಂಪೂರ್ಣ ರಸ್ತೆಯನ್ನು ಆವರಿಸಿ ಎದುರಿನಿಂದ ಬಂದ ವಾಹನಗಳ ದಿಕ್ಕು ತಪ್ಪಿಸುತ್ತಿವೆ. ಸಣ್ಣ ಪುಟ್ಟ ವಾಹನಗಳೂ ಪ್ರತಿದಿನ ಅಪಘಾತಗಳು ಸಾಮಾನ್ಯ ಎನ್ನುವಂತಾಗಿದೆ. ವಾಹನ ಸವಾರರು ತಮಗರಿವಿಲ್ಲದಂತೆ ಒಂದು ವಾಹನವನ್ನು ಹಿಂದಿಕ್ಕಿ ಹೋಗುವ ಸಾಹಸಕ್ಕೆ ಕೈ ಹಾಕುತ್ತಿರುವ ಸಂದರ್ಭದಲ್ಲಿಯೇ ತಿರುವು ಬರುವುದರಿಂದ ಅಪಾಯವಾಗುವ ಎಲ್ಲ ಸಾಧ್ಯತೆಗಳಿವೆ. ವಾಹನಗಳ ನಿಷೇಧ ಹೇರಿ ತಿಂಗಳು ಉರುಳಿದರೂ ಹಳೇ ಸೇತುವೆಯ ರಿಪೇರಿ ಮಾಡಿಲ್ಲ, ಹೊಸ ಸೇತುವೆ ನಿರ್ವಿುಸಲು ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಶುರುವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ 7 ಕಿಮೀ ರಸ್ತೆ ನಿರ್ವಣಕ್ಕೆ ಬಾಕಿ ಇದೆ ಎನ್ನುವ ಹೆದ್ದಾರಿ ಇಲಾಖೆ ಎಲ್ಲಿಯೂ ಕೂಡು ರಸ್ತೆ, ಸರ್ವಿಸ್ ರಸ್ತೆ, ಬೀದಿ ದೀಪ, ಚರಂಡಿ ವ್ಯವಸ್ಥೆಯನ್ನು ಮಾಡಿಲ್ಲ. ಸುಮಾರು ಶೇ. 40ರಷ್ಟು ಕಾಮಗಾರಿ ಬಾಕಿ ಇಟ್ಟುಕೊಂಡು ಸಂಸದರ ಸಭೆಯಲ್ಲಿ ಸುಳ್ಳು ಹೇಳುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಸವೇ ಕೈಗೊಂಡು ಸತ್ಯವನ್ನು ಜನರ ಮುಂದಿಡಬೇಕು. ಸತೀಶಕುಮಾರ, ಸಂಚಾಲಕ, ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ವೆಂಕಟಾಪುರ ಸೇತುವೆಯ ಸ್ಥಿರತೆಯ ಸಾಮರ್ಥ್ಯ ಪರಿಶೀಲನೆ ವೇಳೆ ಲೋಪ ಕಂಡು ಬಂದಿದೆ. ಮುಂಬೈ ಯುನಿವರ್ಸಿಟಿಯಿಂದ ಸ್ಟ್ರಕ್ಚರ್ ಇಂಜಿನಿಯರ್, ಪ್ರೊಫೆಸರ್ಗಳ ತಂಡ ಆಗಮಿಸಿ ಪರೀಕ್ಷೆ ನಡೆಸಿದೆ. ಅದರ ವರದಿ ಬರುವವರೆಗೂ ಹಳೇ ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ವರದಿ ಆಧರಿಸಿ ದುರಸ್ತಿಯೋ ಅಥವಾ ಉರುಳಿಸುವುದೋ ಎಂಬುದನ್ನು ಎನ್ಎಚ್ಎಐ ತಿರ್ವನಿಸಲಿದೆ. ಎ.ಟಿ. ಯೋಗೇಶ, ಇನ್ಸಿಡೆಂಟ್ ಮ್ಯಾನೇಜರ್, ಐಆರ್ಬಿ