

ಮೈಸೂರು: ಲೇಖಕರು ಹಾಗೂ ಹೋರಾಟಗಾರರು ಒಂದು ಭಾಷೆ ಮತ್ತು ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ. ಆದ್ದರಿಂದ ನಾವೆಲ್ಲರೂ ಕನ್ನಡದ ರಕ್ಷಣೆಗಾಗಿ ದೀಕ್ಷೆ ತೊಡೋಣ ಹಾಗೂ ಹೋರಾಟಗಾರರ ಕೈಬಲಪಡಿಸೋಣ ಎಂದು ಸಾಹಿತಿ ಪ್ರೊ.ಸಿ.ನಾಗಣ್ಣ ಹೇಳಿದರು.
ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಒಂದು ಭಾಷೆ ಮತ್ತು ಸಂಸ್ಕೃತಿ ಉಳಿಸಿಕೊಳ್ಳಬೇಕಾದರೆ ಭಾಷೆಯ ಉಳಿವಿಗೆ ಧಕ್ಕೆ ಬಂದಾಗಲೆಲ್ಲ, ಅದನ್ನು ರಕ್ಷಿಸುವಂಥ ರಕ್ಷಣಾ ಪಡೆಯೂ ಬೇಕು ಎಂದು ಹೇಳಿದರು.
ಅಂಬೇಡ್ಕರ್ ಹಾಗೂ ರಾಮ ಮನೋಹರ್ ಲೋಹಿಯಾ ಅವರ ಚಿಂತನೆಗಳನ್ನು ಹೊರಗಿಟ್ಟು ನಾವು ಸಾಹಿತ್ಯ ರಚಿಸಲಾಗದು. ಇಪ್ಪತ್ತನೇ ಶತಮಾನದಲ್ಲಿ ಎಲ್ಲ ಬರಹಗಳು ರಾಜಕಾರಣದಲ್ಲಿ ಒಂದೇ ಇರುತ್ತವೆ ಎಂಬ ಅಭಿಪ್ರಾಯ ಜನಜನಿತವಾದದ್ದು. ರಾಜಕಾರಣವನ್ನು ಒಳಗೊಳ್ಳದ ಬರಹವನ್ನು ನಾವು ಕಲ್ಪಿಸಿಕೊಳ್ಳಲು ವರ್ತಮಾನದಲ್ಲಿ ಸಾಧ್ಯವಾಗುವುದಿಲ್ಲ ಎಂದರು.
ಲೋಹಿಯಾ ಅವರು ಮೈಸೂರಿಗೆ ಬಂದಾಗ ಕುವೆಂಪು ಅವರನ್ನು ಭೇಟಿ ಮಾಡಿದ್ದರು. ಆಗ ನೀವು ರಾಜಕಾರಣದಲ್ಲಿ ಮಾಡುವುದನ್ನು ನಾನು ಸಾಹಿತ್ಯದ ಮೂಲಕ ಮಾಡುತ್ತಿದ್ದೇನೆ ಎಂದು ಹೇಳಿದ್ದರು ಎಂದು ಹಿಂದಿನ ಘಟನೆ ನೆನಪಿಸಿಕೊಂಡರು.
ಲೇಖಕ ಜಯಪ್ಪ ಹೊನ್ನಾಳಿ ಮಾತನಾಡಿ, ಮಹಿಳೆಯರು ಹಾಗೂ ಅಂಬೇಡ್ಕರ್ ಇಬ್ಬರಲ್ಲೂ ತಾಯ್ತನ ಇದೆ. ಅಂಬೇಡ್ಕರ್ ಬೇರೆಯಲ್ಲ, ತಾಯ್ತನ ಬೇರೆಯಲ್ಲ. ಮಹಿಳೆಯರು ಹಾಗೂ ಶೂದ್ರರಿಗೆ ಧ್ವನಿ ಕೊಟ್ಟರು. ಅವರು ಮಾತೃ ಹೃದಯದಿಂದ ಎಲ್ಲರಿಗೂ ಬದುಕುವ ಹಾಗೂ ಸಮಾನತೆಯ ಹಕ್ಕು ನೀಡಿದ್ದಾರೆ ಎಂದರು.
ಅಂಬೇಡ್ಕರ್ ಅವರಂಥ ವ್ಯಕ್ತಿಗಳು ತೀರಾ ಅಪರೂಪ. ನೊಂದವರ, ಬೆಂದವರ, ದಲಿತರ, ದಮನಿತರ ಆಶೋತ್ತರವಾಗಿ ಸಮಾನತೆ, ಪ್ರಜಾಪ್ರಭುತ್ವ, ಜಾತ್ಯತೀತತೆಯನ್ನು ಅವರು ಸಂವಿಧಾನದ ಮೂಲಕ ನೀಡಿದ್ದಾರೆ. ಹೀಗಾಗಿ ಅವರ ಸಮತೆ-ಮಮತೆಯ ತೇರನ್ನು ಮುಂದಕ್ಕೆ ಎಳೆಯಲು ಸಾಧ್ಯವಾಗದಿದ್ದರೂ ಹಿಂದಕ್ಕೆ ಎಳೆಯುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದಿದ್ದರು ಎಂದರು.
ಪ್ರಸ್ತುತ ಜಾತಿಯನ್ನು ನೊಂದವರು ಗುರಾಣಿ ಮಾಡಿಕೊಂಡಿದ್ದರೆ ಬಲಿತರು ಖಡ್ಗ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರವನ್ನು ಉಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಬಿಜೆಪಿ ಯುವ ಮುಖಂಡ ವಿ.ಕವೀಶ್ಗೌಡ ಮಾತನಾಡಿ, ಎಲ್ಲರಿಗೂ ಸಮಾನ ಹಕ್ಕು ಮತ್ತು ಅವಕಾಶ ಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್. ಸಂವಿಧಾನದಿಂದ ನಮಗೆ ಅನುಕೂಲವಾಗಿದ್ದರೂ ಅದರ ಆಶಯಗಳನ್ನು ಸಂಪೂರ್ಣವಾಗಿ ಜಾರಿ ಮಾಡುವಲ್ಲಿ ಸ್ವಲ್ಪ ಹಿಂದುಳಿದಿದ್ದೇವೆ. ಅಂಗನವಾಡಿ, ಆಶಾ, ಗಾರ್ಮೆಂಟ್ಸ್, ಶಿಕ್ಷಕರು, ವೈದ್ಯರು ಹೆಚ್ಚಾಗಿ ಮಹಿಳೆಯರೇ ಇದ್ದಾರೆ. ಮಹಿಳೆಯರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಕೊಡಬೇಕು ಎಂದರು.
ಪ್ಯಾರಾ ಅಥ್ಲಿಟ್ ಭಾರತಿ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ತೆರಳಲು, ತರಬೇತಿ ಹಾಗೂ ಶಿಕ್ಷಣ ಪಡೆಯಲು ತಮ್ಮ ವತಿಯಿಂದ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಅವರು ಘೋಷಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಬುದ್ಧ, ಬಸವಣ್ಣ ನಂತರ ಅಂಬೇಡ್ಕರ್ ಮಹಿಳೆಯರಿಗೆ ಸಮಾನತೆಗಾಗಿ ಶ್ರಮಿಸಿದವರು. ಸ್ಥಾನಮಾನಕೊಟ್ಟ ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಬೇಕು. ಪ್ರಸ್ತುತ ಮಹಿಳೆಯರು ಭೂಮಿಯಿಂದ ಬಾಹ್ಯಾಕಾಶದವರೆಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಯಾವುದೇ ಪರೀಕ್ಷೆಯ ಫಲಿತಾಂಶ ಬಂದರೂ ಅವರದೇ ಮೇಲುಗೈ ಇರುತ್ತದೆ. ಇತ್ತೀಚೆಗೆ ಪ್ರಕಟವಾದ ಪಿಯುಸಿಯ ಮೂರು ವಿಭಾಗಗಳಲ್ಲೂ ಬಾಲಕಿಯರೇ ಮೊದಲ ಸ್ಥಾನ ಪಡೆದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಬಿ.ರಾಜಶೇಖರ್ ಮಾತನಾಡಿ, ಕನ್ನಡ ನಾಡು-ನುಡಿಯ ಜತೆಗೆ ಯಾವುದೇ ಶೋಷಿತರಿಗೆ, ನೊಂದವರಿಗೆ ನ್ಯಾಯ ಕೊಡಿಸಲು ತಮ್ಮ ವೇದಿಕೆ ಸದಾ ಬದ್ಧವಾಗಿದೆ. ಮೊಸರಲ್ಲಿ ಕಲ್ಲು ಹುಡುಕುವ ಬದಲು, ಎಲ್ಲರನ್ನು ಒಂದೇ ಎಂದು ನೋಡುವ ಬದಲು ಕನ್ನಡಪರ ಕೆಲಸ ಮಾಡುವವರಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕನ್ನಡಾಂಬೆ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಆರ್.ಮಂಜುಳಾ, ಮೈಸೂರು ತಾಲೂಕು ಅಧ್ಯಕ್ಷ ಸಂತೋಷ್, ಮುಖಂಡರಾದ ಉರುಗಲವಾಡಿ ರಾಮಣ್ಣ, ನಂದಿನಿ ಮಹೇಶ್, ಕನ್ನಡ ಅಭಿಮಾನಿ ಬಳಗದ ಕೃಷ್ಣಪ್ಪ, ಕರವೇ ಶ್ರೀನಿವಾಸ್, ರೈತ ಸಂಘದ ಕೃಷ್ಣೇಗೌಡ, ವಿವಿಧ ಸಂಘಟನೆಗಳ ಸೋಮೇಗೌಡ, ಮಹೇಶ್ಕುಮಾರ್, ಶಿವಕುಮಾರ್, ಮುಖಂಡ ರಂಗಪ್ಪ ಇತರರು ಇದ್ದರು.