

ಶಿರಸಿ: ಇತ್ತೀಚಿನ ದಿನಗಳಲ್ಲಿ ಜನತೆ ಸಾಹಿತ್ಯಕ್ಕಾಗಿ ಮೀಸಲಿಡುವ ಸಮಯ ಕಡಿಮೆಯಾಗುತ್ತಿದ್ದು, ಪುಸ್ತಕಗಳನ್ನು ಓದುವುದರಿಂದ ಜ್ಞಾನ ಸಂಪತ್ತು ಅಧಿಕವಾಗುತ್ತದೆ. ಯುವಕರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿ ತೊಡಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಹೇಳಿದರು. ನಗರದ ನೆಮ್ಮದಿಯ ರಂಗಧಾಮದಲ್ಲಿ ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಹಮ್ಮಿಕೊಂಡಿದ್ದ ಮಲೆನಾಡ ಅಕ್ಷರೋತ್ಸವ -2024 ಅನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳ ಮೇಲಿನ ಅತಿಯಾದ ವ್ಯಾಮೋಹದಿಂದ ಯುವಕರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ವಿಷಾದನೀಯ. ಸಾಹಿತ್ಯವೆಂದರೆ ವಯಸ್ಸಾದವರ ಕಾರ್ಯಕ್ರಮ ಎಂಬ ಭಾವನೆ ಇದೆ. ಈ ಭಾವನೆಯಿಂದ ಹೊರಬರಬೇಕು.
ಯುವಕರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡಾಗ ಈ ಕ್ಷೇತ್ರ ಇನ್ನಷ್ಟು ಬಲಗೊಳ್ಳಲು ಸಾಧ್ಯ. ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆಯು ಮಲೆನಾಡು ಅಕ್ಷರೋತ್ಸವ ಕಾರ್ಯಕ್ರಮ ಏರ್ಪಡಿಸಿ, ಯುವಕರು ಸಾಹಿತ್ಯ ಕ್ಷೇತ್ರದತ್ತ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ಅಕ್ಷರ ದೀಪ ಫೌಂಡೇಷನ್ ಅಧ್ಯಕ್ಷ ಪ್ರವೀಣಕುಮಾರ ಕನ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಶಿರಸಿಯು ಸಾಹಿತ್ಯ ಕ್ಷೇತ್ರದ ತಲೆ ಇದ್ದಂತೆ. ಇಲ್ಲಿ ಕಾರ್ಯಕ್ರಮ ಸಂಘಟಿಸಿರುವುದು ಸಂತಸ ತಂದಿದೆ ಎಂದರು.
ಬರಹಗಾರ ದತ್ತಗುರು ಕಂಠಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 20 ಜನ ಗಣ್ಯರಿಗೆ ಆದರ್ಶ ರತ್ನ ದ್ರೋಣಾಚಾರ್ಯ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಕವಯಿತ್ರಿ ಲತಾ ಹೆಗಡೆ, ಸಾಹಿತಿ ಶುಭಾ ವಿಷ್ಣು ಸಭಾಹಿತ, ಕಾದಂಬರಿಕಾರ ಗಣಪತಿ ಹೆಗಡೆ, ಮುಕ್ತಕ ಕವಿ ಕೃಷ್ಣ ಪದಕಿ, ಅಕ್ಷರ ದೀಪ ಸಾಹಿತ್ಯ ವೇದಿಕೆ ವ್ಯವಸ್ಥಾಪಕ ಎಸ್.ಐ. ಕುಲಕರ್ಣಿ, ಇತರರು ಉಪಸ್ಥಿತರಿದ್ದರು. ಶಿವಪ್ರಸಾದ ಹಿರೇಕೈ, ನಿಶ್ಚಿತಾ ಹೆಗಡೆ, ಡಾ.ದಿವ್ಯಾ ಹೆಗಡೆ ಹಾಗೂ ಭವ್ಯಾ ಹಳಯೂರ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಆಯ್ದ ಕವಿಗಳಿಂದ ಕವಿ ಗೋಷ್ಠಿ ನಡೆಯಿತು.