ಬಾದಾಮಿ: ಶಿಕ್ಷಕರು ವಿಷಯದಾಳಕ್ಕಿಳಿದು, ಭಾವನೆಯೊಂದಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಿದಲ್ಲಿ ಮಾತ್ರ ಶಿಕ್ಷಣ ಮನಸ್ಸಿಗೆ ತಲುಪಲು ಸಾಧ್ಯವಿದೆ. ಈ ದಿಶೆಯಲ್ಲಿ ಶಿಕ್ಷಕರ ಜ್ಞಾನ ಅತೀ ಮುಖ್ಯವಾಗಿದೆ ಎಂದು ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಹೇಳಿದರು.

ಪಟ್ಟಣದ ಚಾಲುಕ್ಯ ನಗರದಲ್ಲಿ ಗುರುಶ್ರೀ ಮನೋಚಾರ್ಯ ಪ್ರತಿಷ್ಠಾನ ಬದಾಮಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುಸ್ಮರಣೆ ಅಂಗವಾಗಿ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ವಿಶೇಷ ತರಬೇತಿ, ಉಪನ್ಯಾಸ, ಸ್ಪರ್ಧಾತ್ಮಕ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಣಾಮಕಾರಿ ಬೋಧನೆಯು ವಿದ್ಯಾರ್ಥಿಗಳ ಸ್ಮತಿ ಪಟಲದಲ್ಲಿ ಸದಾ ಉಳಿಯುತ್ತದೆ. ಭವಿಷ್ಯದ ಜೀವನ ಸುಂದರಗೊಳ್ಳಲು ಶಿಕ್ಷಣ ಬುನಾದಿಯಾಗಿದೆ. ಶಿಕ್ಷಕರು ಗುರುಕುಲ ಶಿಕ್ಷಣ ಪದ್ಧತಿಯ ಜತೆಗೆ ಆಧುನಿಕ ಶಿಕ್ಷಣ ಪದ್ಧತಿಯಲ್ಲಿನ ಕಲಿಕಾ ಅಂಶಗಳ ಬಗ್ಗೆ ಜ್ಞಾನ ಹೊಂದಬೇಕು. ಸಮಾಜ ಸನ್ಮಾರ್ಗದತ್ತ ಸಾಗಲು ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ನಿರಂತರ ಓದಿನಿಂದ ಜ್ಞಾನ ಬಲದ ಜತೆಗೆ ಶಬ್ದ ಭಂಡಾರ ವೃದ್ಧಿಯಾಗುತ್ತದೆ ಎಂದರು.
ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವ ಗುರುಶ್ರೀ ಮನೋಚಾರ್ಯ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು. ಬಾದಾಮಿ ಎಸ್.ಜಿ.ಎಂ. ಪಿಯು ಕಾಲೇಜಿನ ನಿವೃತ್ತ ಪ್ರಾಚಾರ್ಯ ಆರ್.ಬಿ. ಸಂಕದಾಳ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಾಹಿತಿ ದಾಜೀಬಾ ಜಗದಾಳೆ, ಸಂದೇಶ ಮನೋಚಾರ್ಯ ಮತ್ತಿತರರಿದ್ದರು.