

ವಿಜಯಪುರ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ. ಹೀಗಾಗಿ ಬಿಜೆಪಿ ರಾಜ್ಯ ಘಟಕ ಮೊದಲು ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡಬೇಕೆಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷದಿಂದ ಹಮ್ಮಿಕೊಳ್ಳಲಾಗಿರುವ ಜನಾಕ್ರೋಶ ಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಲಾಗದೆ ರಾಜ್ಯ ಸರ್ಕಾರದ ವಿರುದ್ದ ಹೋರಾಟದ ನೆಪ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಡಿಸೇಲ್ ಮೇಲಿನ ತೆರಿಗೆ ಐದು ಪಟ್ಟು ಹೆಚ್ಚು ಮಾಡಿದೆ. ಪೆಟ್ರೋಲ್ ಮೇಲೆ ಎರಡರಿಂದ ಮೂರು ಪಟ್ಟು ತೆರಿಗೆ ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಕಡಿಮೆ ಇದ್ದರೂ ದೇಶದಲ್ಲಿ ದದ ಹೆಚ್ಚಿಗೆ ಮಾಡಿ ಬಿಜೆಪಿಯವರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಜನಾಕ್ರೋಶ ಹೋರಾಟದ ಮೂಲಕ ರಾಜ್ಯ ಬಿಜೆಪಿಯವರು ಕೇಂದ್ರದ ವಿರುದ್ಧ ಧ್ವನಿಯೆತ್ತಿದ್ದಾರೆ ಎನ್ನಬಹುದೆಂದರು.
ಬೆಲೆ ಏರಿಕೆ ಬಗ್ಗೆ ಬಿಜೆಪಿಯವರಿಗೆ ಮಾತನಾಡಲು ನೈತಿಕತೆ ಇದ್ದರೆ ಮೊದಲು ಕೇಂದ್ರದ ಬಗ್ಗೆ ಮಾತನಾಡಲಿ. ನಂತರ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿದರೆ ನಾವು ಉತ್ತರ ನೀಡುತ್ತೇವೆ ಎಂದರು.
ಸಚಿವ ಸಂಪುಟದಲ್ಲಿ ಜಾತಿಗಣತಿ ಮಂಡನೆ ಹಾಗೂ ಲಿಂಗಾಯತ ಶಾಸಕರ ವಿರೋಧಕ್ಕೆ ಸಂಬಂಧಿಸಿದ ವಿಚಾರವಾಗಿ ಮಾತನಾಡಿದ ಸಚಿವರು, ಕರ್ನಾಟಕದಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆದು ಬಹಳ ವರ್ಷಗಳಾಗಿತ್ತು. ವರದಿ ಮುಚ್ಚಿದ ಲಕೋಟೆಯಲ್ಲಿತ್ತು. ಅದನ್ನೀಗ ಸಚಿವ ಸಂಪುಟದಲ್ಲಿ ಮಂಡಿಸಲಾಗಿದೆ. ಈ ಕುರಿತು ಮುಂದಿನ ವಾರ ಚರ್ಚೆ ನಡೆಯಲಿದೆ. ಸಂಪುಟದ ಒಳಗಡೆ ಹಾಗೂ ಸಾರ್ವಜನಿಕರ ಅಭಿಪ್ರಾಯ ತೆಗೆದುಕೊಂಡು ಚರ್ಚೆ ಮಾಡುತ್ತೇವೆ. ಆ ಬಳಿಕವೇ ಮುಂದಿನ ತೀರ್ಮಾನ ಮಾಡಲಾಗುತ್ತದೆ ಎಂದರು.
ಅಲ್ಲದೇ, ವರದಿ ಕುರಿತು ಸಾರ್ವಜನಿಕರಿಂದ ಪರ ವಿರೋಧ ಅಭಿಪ್ರಾಯಗಳನ್ನು ಸಂಗ್ರಹಿಸುವುದಾಗಿಯೂ, ಪರ-ವಿರೋಧ ಚರ್ಚೆಯನ್ನೂ ಸ್ವಾಗತಿಸಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ವರದಿ ಮಂಡಿಸುವುದಾಗಿ ತಿಳಿಸಿದರು.