ಮಾಜಿ ಸೈನಿಕರ ಪುನರ್ವಸತಿ ಇಲಾಖೆ ಸ್ಥಾಪಿಸಲಿ

gan (10)
Published on

ಕುಂದಾಪುರ: ಜಿಲ್ಲೆಯಲ್ಲಿ ಮಾಜಿ ಸೈನಿಕರ ಪುನರ್ವಸತಿ ಕಲ್ಯಾಣ ಇಲಾಖೆ ಸ್ಥಾಪಿಸಬೇಕು ಎಂದು ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಮಾಜಿ ಸೈನಿಕರು ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅವರನ್ನು ಒತ್ತಾಯಿಸಿದರು. ಶಾಸಕರನ್ನು ಅವರ ಕಚೇರಿಯಲ್ಲಿ ಶುಕ್ರವಾರ ಭೇಟಿ ಮಾಡಿದ ಮಾಜಿ ಸೈನಿಕರ ನಿಯೋಗವು ಈ ಕುರಿತು ಚರ್ಚಿಸಿ ಬಳಿಕ ಮನವಿ ನೀಡಿದರು. ಜಿಲ್ಲೆಯಲಿ 1,200 ಮಾಜಿ ಸೈನಿಕರು, ವೀರ ನಾರಿಯರು ಹಾಗೂ ಅವರ ಕುಟುಂಬಸ್ಥರು ಸೇರಿ 4,500 ಮಂದಿ ನೆಲೆಸಿದ್ದಾರೆ. ಜಿಲ್ಲೆಯಲ್ಲಿ ಮಾಜಿ ಸೈನಿಕರ ಪುನರ್ವಸತಿ ಕಲ್ಯಾಣ ಇಲಾಖೆ ಇಲ್ಲದಿರುವುದರಿಂದ ಮಾಜಿ ಸೈನಿಕರು ವೀರ ನಾರಿಯರು ಹಾಗೂ ಅವರ ಕುಟುಂಬಸ್ಥರು ಕಲ್ಯಾಣಕಾರಿ ಕಾರ್ಯಗಳಿಗಾಗಿ ದೂರದ ಮಂಗಳೂರಿಗೆ ತೆರಳಬೇಕಿದೆ. ಬಹುತೇಕರು ವೃದ್ಧರು, ಆರೋಗ್ಯ ಸಮಸ್ಯೆ ಉಳ್ಳವರಾಗಿದ್ದು, ದೂರಪ್ರಯಾಣ ಅಸಾಧ್ಯವಾಗಿದೆ. ಈ ಕಾರಣಕ್ಕಾಗಿ ಸೈನಿಕರ ಪುನರ್ವಸತಿ ಕಲ್ಯಾಣ ಇಲಾಖೆ ಸ್ಥಾಪಿಸಬೇಕು. ಮಾಜಿ ಸೈನಿಕರ ಕೋಟಾದಡಿ ಜಮೀನಿಗೆ ಅರ್ಜಿ ಸಲ್ಲಿಸಿದ್ದು, ಶೇ.95 ಮಂದಿಗೆ ಮಂಜೂರಾಗಿಲ್ಲ. ಈ ಕುರಿತು ವಿಶೇಷ ಗಮನ ಹರಿಸಬೇಕು ಎಂದು ನಿಯೋಗ ಆಗ್ರಹಿಸಿತು. ಮನವಿ ಸ್ವೀಕರಿಸಿದ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಈ ಬಗ್ಗೆ ಸಂಬಂಧಿತ ಸಚಿವರ ಗಮನಕ್ಕೆ ತರುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net