ಕುಮಟಾ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪಹಣಿಯಲ್ಲಿ ವಕ್ಪ ಆಸ್ತಿ ಎಂದು ನಮೂದು ಮಾಡದಂತೆ ತಡೆಹಿಡಿದಿರುವುದು ತಾತ್ಕಾಲಿಕ ಕ್ರಮವಾಗಿದ್ದು, ಚುನಾವಣೆಯ ತಂತ್ರವಾಗಿದೆ. ಮುಸ್ಲಿಂ ಓಲೈಕೆ, ಹಿಂದು ವಿರೋಧಿ ಧೋರಣೆಯನ್ನು ಕಾಂಗ್ರೆಸ್ ಕೈಬಿಡಬೇಕು ಹಾಗೂ ಹಗರಣಗಳ ಸರ್ಕಾರದಿಂದ ಸಿದ್ಧರಾಮಯ್ಯ, ಜಮೀರ್ ಅಹ್ಮದ್ ಉಚ್ಛಾಟನೆಯಾಗಬೇಕು ಎಂದು ಶಾಸಕ ದಿನಕರ ಶೆಟ್ಟಿ ಆಗ್ರಹಿಸಿದರು.
ಇಲ್ಲಿನ ಬಿಜೆಪಿ ಮಂಡಲದ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೇಂದ್ರದಿಂದ ವಕ್ಪ್ ತಿದ್ದುಪಡಿ ಖಚಿತವಾಗುತ್ತಿದ್ದಂತೆ ರಾಜ್ಯದಲ್ಲಿ ವಕ್ಪ್ ಬೋರ್ಡ್ ತನ್ನ ಕರಾಳತನ ಪ್ರದರ್ಶಿಸಿ, ಹಿಂದುಗಳ ಹಾಗೂ ಸಾರ್ವಜನಿಕ ಆಸ್ತಿಯನ್ನು ಕಬಳಿಸತೊಡಗಿದೆ. ಇದು ಅತ್ಯಂತ ಆತಂಕಕಾರಿ ನಡೆಯಾಗಿದ್ದು, ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಕುಮ್ಮಕ್ಕು ಕೊಡುತ್ತಿದೆ. ಆದ್ದರಿಂದ ಸಿದ್ಧರಾಮಯ್ಯ ತೊಲಗಬೇಕು. ಜಮೀರ್ ಅಹ್ಮದ್ ಗಡಿಪಾರು ಮಾಡಬೇಕು. ನಮ್ಮ ತಾಲೂಕಿನಲ್ಲಿ ಎಲ್ಲೇ ಹಿಂದುಗಳ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ನಮೂದಾಗಿದ್ದಲ್ಲಿ ಬಿಜೆಪಿ ಅವರೊಂದಿಗೆ ಹೋರಾಟಕ್ಕೆ ಕೈಜೋಡಿಸಲಿದೆ. ಜನರು ಇನ್ನಾದರೂ ಜಾಗೃತರಾಗಬೇಕಿದೆ ಎಂದರು.
ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಮಾತನಾಡಿದರು. ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಮನವಿ ಸಲ್ಲಿಸಲಾಯಿತು. ಪಟ್ಟಣದ ಮಹಾಸತಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತಾಲೂಕು ಸೌಧದವರೆಗೆ ನಡೆಯಿತು. ಬಳಿಕ ರಾಜ್ಯ ಸರ್ಕಾರ ಹಾಗೂ ವಕ್ಪ್ ಅಕ್ರಮದ ವಿರುದ್ಧ ಘೊಷಣೆಗಳನ್ನು ಕೂಗಿದರು.
ಡಾ. ಜಿ.ಜಿ. ಹೆಗಡೆ, ಜಿ.ಎಸ್. ಗುನಗಾ, ಎಂ.ಜಿ. ಭಟ್, ಹೇಮಂತಕುಮಾರ, ತಿಮ್ಮಪ್ಪ ಮುಕ್ರಿ, ಸಂತೋಷ ನಾಯ್ಕ, ವಿ.ಐ. ಹೆಗಡೆ, ರಾಜೇಶ ನಾಯಕ, ಜಗನ್ನಾಥ ನಾಯ್ಕ, ಜಯಾ ಶೇಟ, ಅನುರಾಧಾ ಭಟ್, ಗಿರಿಯಾ ಗೌಡ, ಮಂಜುನಾಥ ಜನ್ನು, ಅಶೋಕ ಪ್ರಭು, ಪ್ರಶಾಂತ ನಾಯ್ಕ, ಇತರರಿದ್ದರು.