ಸಂಪಾದನೆಯ ಒಂದಂಶ ಸಮಾಜಕ್ಕಿರಲಿ: ಶಾಸಕ ಅಶೋಕ್ ರೈ

Ism_Ashok-Rai
Published on

ಪುತ್ತೂರು ಗ್ರಾಮಾಂತರ: ಮನುಷ್ಯ ಎಷ್ಟೇ ಎತ್ತರಕ್ಕೆ ಏರಿದ್ದರೂ, ಎಷ್ಟೇ ಶ್ರೀಮಂತನಾಗಿದ್ದರೂ, ಅಧಿಕಾರಲ್ಲಿದ್ದರೂ ತಾನು ಬೆಳೆದು ಬಂದ ದಾರಿಯನ್ನು ಎಂದೂ ಮರೆಯಬಾರದು. ನಡೆದು ಬಂದ ದಾರಿಯ ಬಗ್ಗೆ ಅವಲೋಕನ ಮಾಡುವ ಜತೆಗೆ ಸಂಪಾದನೆಯ ಒಂದಂಶವನ್ನು ಸಮಾಜದ ಒಳ್ಳೆಯ ಕೆಲಸಗಳಿಗಾಗಿ ನೀಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಕುಂಬ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಭಾನುವಾರ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ‘ಬಾಂತಲಪ್ಪುಡ್ ಕುಸಾಲ್ದ ಗೊಬ್ಬಲು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು ಮಾತನಾಡಿ, ಕುಂಬ್ರ ಶಾಲೆಯಲ್ಲಿ ಕಲಿತು ಹೋದ ಮಂದಿಯನ್ನು ಮತ್ತೊಮ್ಮೆ ಶಾಲೆಯೊಳಗೆ ಕರೆಸಿಕೊಳ್ಳುವ ಪ್ರಯತ್ನ ಇದಾಗಿದೆ. ಹಳೇ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಭೇಟಿ ನೀಡುವ ಪರಿಪಾಠವನ್ನು ಬೆಳೆಸಿಕೊಳ್ಳುವ ಜತೆಗೆ ಶಾಲೆಯ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂಬುವುದು ನಮ್ಮ ಆಶಯ ಎಂದರು.

ನಿವೃತ್ತ ಪ್ರಾಂಶುಪಾಲ ಜತ್ತಪ್ಪ ರೈ ಕುಂಬ್ರ ಮತ್ತು ಕುಂಬ್ರ ಅಂಗನವಾಡಿ ಸಹಾಯಕಿ ರಾಜೀವಿ ಕುಂಬ್ರ ಅವರನ್ನು ಸನ್ಮಾನಿಸಲಾಯಿತು. ಬಿಎಂಎಸ್ ಕಟ್ಟಡ ಕಾರ್ಮಿಕರ ಸಂಘದ ಕುಂಬ್ರ ವಲಯಾಧ್ಯಕ್ಷ ಪುರಂದರ ಶೆಟ್ಟಿ ಮುಡಾಲ ಅವರು ಮುಖ್ಯ ಅತಿಥಿಯಾಗಿದ್ದರು.

ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಹಳೇ ವಿದ್ಯಾರ್ಥಿ ಸಂಘದ ಪೂರ್ವಾಧ್ಯಕ್ಷ ಪುರಂದರ ರೈ ಕುಯ್ಯರು, ಗ್ರಾಪಂ ಸದಸ್ಯರಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ ಮುಡಾಲ, ನಿಮಿತಾ ರೈ, ಶಾರದಾ ಆಚಾರ್ಯ, ಕೆಪಿಎಸ್ ಪ್ರೌಢ ಶಾಲಾ ವಿಭಾಗದ ಹಿರಿಯ ಪದವೀಧರ ಸಹಾಯಕರಾದ ಮಮತಾ ಕೆ.ಎಸ್., ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಜೂಲಿಯಾನ ಮೊರೆಸ್, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಉದ್ಯಮಿ ಶಿವರಾಮ ಆಳ್ವ ಸಾಜ, ಪದ್ಮನಾಭ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಕುಮಾರ್ ಬರೆಮೇಲು ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ ವಂದಿಸಿದರು. ನೇಮಾಕ್ಷ ಸುವರ್ಣ ಮತ್ತು ಹರೀಶ್ ರೈ ಮುಗೇರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net