ಮಣಿಪುರ ಕೋಮು ಸಂಘರ್ಷ, ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಲಿ

SUCI
ವಿಜಯಪುರದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿಗೆ ಎಸ್‌ಯುಸಿಐ (ಸಿ) ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಬಿ.ಭಗವಾನರಡ್ಡಿ, ಟಿ.ಸುನಿತಕುಮಾರ, ಸಿ.ಎ.ಘಂಟೆಪ್ಪಗೋಳ್ ಮತ್ತಿತರರಿದ್ದಾರೆ.
Published on

ವಿಜಯಪುರ: ಮಣಿಪುರದಲ್ಲಿ ನಡೆಯುತ್ತಿರುವ ನಿರಂತರ ಹಾಗೂ ವ್ಯಾಪಕ ಕೋಮು ಗಲಭೆಗಳಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಕೂಡಲೇ ಕೋಮು ಸಂಘರ್ಷವನ್ನು ನಿಯಂತ್ರಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ಆಗ್ರಹಿಸಿ ಎಸ್‌ಯುಸಿಐ (ಸಿ) ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಕಚೇರಿ ಎದುರು ಕೆಲಕಾಲ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಘಟನೆ ಖಂಡಿಸಿ ಘೋಷಣೆ ಕೂಗಿದರು. ಮಣಿಪುರದ ಜನರ ನೆರವಿಗೆ ಧಾವಿಸುವಂತೆ ಒತ್ತಾಯಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ರಾಜ್ಯ ಸೆಕ್ರಟರಿಯಟ್ ಸದಸ್ಯ ಕಾ. ಟಿ.ಸುನಿತಕುಮಾರ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಮತ್ತು ಮಣಿಪುರ ರಾಜ್ಯ ಬಿಜೆಪಿ ಸರ್ಕಾರಗಳ ಬೆಂಬಲದೊಂದಿಗೆ 2023, ಮೇ 3ರಿಂದ ಮಣಿಪುರದಲ್ಲಿ ಸತತವಾಗಿ ಕೋಮು ಸಂಘರ್ಷ ನಡೆಯುತ್ತಿದೆ. ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನರು ನಿರ್ಗತಿಕರಾಗಿದ್ದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮೂಕಪ್ರೇಕ್ಷಕವಾಗಿರುವುದು ಅತ್ಯಂತ ಖಂಡನೀಯ ಎಂದರು.

ಪ್ರದಾನಮಂತ್ರಿ ನರೇಂದ್ರ ಮೋದಿಯವರು ಕೂಡ ಈ ಕುರಿತು ಮೌನವಾಗಿರುವುದು ಪರೋಕ್ಷವಾಗಿ ಕೋಮುಗಲಭೆಗಳಿಗೆ ಬೆಂಬಲವಾಗಿ ನಿಂತಂತೆ ತೋರುತ್ತದೆ. ಕೇಂದ್ರ ಸರ್ಕಾರದ ಈ ಒಡೆದು ಆಳುವ ನೀತಿ ಹಾಗೂ ಮತ ಬ್ಯಾಂಕ್ ರಾಜಕೀಯ ಉದ್ದೇಶಪೂರ್ವಕವಾಗಿಯೇ ಕೋಮುಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಜಾತಿ ಮತ, ಜನಾಂಗ ಮತ್ತು ಧರ್ಮವನ್ನು ಲೆಕ್ಕಿಸದೇ ಸಾಮಾನ್ಯ ಜನರ ಜೀವನದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿರುವುದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದರು.

ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರಡ್ಡಿ ಮಾತನಾಡಿ, ಮಣಿಪುರದಲ್ಲಿ ಸಾಮಾನ್ಯ ಜನರ ಅಮೂಲ್ಯ ಜೀವಗಳನ್ನು ಉಳಿಸಲು ಹಾಗೂ ಶಾಂತಿಯ ಮರುಸ್ಥಾಪನೆಗೆ ತುರ್ತು ಕ್ರಮ ಜರುಗಿಸಲು ಒತ್ತಾಯಿಸುತ್ತೇವೆ. ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಮಣಿಪುರದ ಶಾಂತಿಪ್ರೀಯ ಹಾಗೂ ಪ್ರಜಾತಾಂತ್ರಿಕ ಮನಸ್ಸುಗಳು ಒಗ್ಗೂಡಿ ರಾಜ್ಯದಲ್ಲಿ ಐಕ್ಯತೆ ಹಾಗೂ ಭ್ರಾತೃತ್ವವನ್ನು ಕಾಪಾಡಲು ಕರೆ ನೀಡುವುದರೊಂದಿಗೆ ಮಣಿಪುರದಲ್ಲಿ ಕೋಮು ದ್ವೇಷವನ್ನು ಹರಡುತ್ತಿರುವವರಿಗೆ ಬೆಂಬಲವಾಗಿ ನಿಂತ ಸರ್ಕಾರದ ಕುತಂತ್ರದ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ವಿಜಯಪುರ ನಾಗರಿಕ ವೇದಿಕೆಯ ಮುಖಂಡ ಸಿ.ಎ.ಘಂಟೆಪ್ಪಗೋಳ್, ಸ್ಲಮ್ ಅಭಿವೃದ್ಧಿಯ ಅಧ್ಯಕ್ಷ ಅಕ್ರಂ ಮಾಶ್ಯಾಳಕರ ಮತ್ತಿತರರು ಮಾತನಾಡಿದರು.
ವಿ.ಎ. ಪಾಟೀಲ, ಅನಿಲ ಹೊಸಮನಿ, ಅಡಿವೆಪ್ಪ ಸಾಲಗಲ್ಲ, ಮಲ್ಲಿಕಾರ್ಜುನ ಎಚ್.ಟಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ್ ಎಚ್.ಟಿ, ಶಿವಬಾಳಮ್ಮ ಕೊಂಡಗೂಳಿ, ಸುರೇಖಾ ಕಡಪಟ್ಟಿ, ಕಾವೇರಿ ರಜಪೂತ, ದೀಪಾ, ಶಿವರಂಜನಿ, ಸಿದ್ರಾಮ ಹಿರೇಮಠ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net