ಪರಿಸರ ಸಂರಕ್ಷಣೆ ಧ್ಯೇಯವಾಗಲಿ : ಸುಬ್ರಹ್ಮಣ್ಯ ಇನ್ನರ್‌ವ್ಹೀಲ್ ಕ್ಲಬ್‌ನಲ್ಲಿ ವೈಶಾಲಿ ಕುಡ್ವ ಅಭಿಪ್ರಾಯ

New Project (4)
Published on

ಸುಬ್ರಹ್ಮಣ್ಯ: ಮಹಿಳೆಯರು ಇಂದು ವಿಶ್ವದಾದ್ಯಂತ ಎಲ್ಲ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವರು. ಮನೆಯ ಅಡುಗೆ ಕೋಣೆಯಿಂದ ಹೊರಬಂದು ಸಮಾಜದ ಆಗುಹೋಗುಗಳನ್ನು ಮನಗಂಡು ತಮ್ಮಿಂದಾದಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಪರಿಸರ ರಕ್ಷಣೆ ಮಾಡುವುದರೊಂದಿಗೆ ಪರಿಸರದಲ್ಲಿರುವ ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಿ, ಪೋಷಿಸಿ. ಮಹಿಳೆಯರಿಗಾಗಿ ಇರುವ ಇನ್ನರ್‌ವ್ಹೀಲ್ ಕ್ಲಬ್‌ನಲ್ಲಿ ಕ್ರಿಯಾಶೀಲರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಅಶಕ್ತ ಜನರ ಬಾಳಿಗೆ ಬೆಳಕಾಗಿ ಎಂದು ಇನ್ನವ್ಹೀಲ್ ಜಿಲ್ಲೆ 318 ರ ಜಿಲ್ಲಾಧ್ಯಕ್ಷೆ ವೈಶಾಲಿ ಕುಡ್ವ ಹೇಳಿದರು.

ಸುಬ್ರಹ್ಮಣ್ಯ ಇನ್ನರ್‌ವ್ಹೀಲ್ ಕ್ಲಬ್‌ಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಸುಬ್ರಹ್ಮಣ್ಯ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ರುತಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಇನ್ನರ್‌ವ್ಹೀಲ್ ಪೂರ್ವಾಧ್ಯಕ್ಷರಾದ ವೇದ ಶಿವರಾಂ, ಶೋಭಾ ಗಿರಿಧರ್, ಲೀಲಾ ವಿಶ್ವನಾಥ್, ಜಾನಕಿ ವೆಂಕಟೇಶ್, ಸೌಮ್ಯಾ ಬಿ.ಪೈ, ಸರೋಜಾ ಮಾಯಿಲಪ್ಪ, ಸದಸ್ಯರುಗಳಾದ ಶ್ರೀಜೀಷಾ ನಾಯರ್, ಅಕ್ಷತಾ ಕಲ್ಕುದಿ ಉಪಸ್ಥಿತರಿದ್ದರು.

ಬಡ ಕುಟುಂಬಕ್ಕೆ ಬಾಲಕೃಷ್ಣ ಪೈ ದಂಪತಿ ಸಹಾಯಧನ ನೀಡಿದರು. ಜಿಲ್ಲಾಧ್ಯಕ್ಷೆ ವೈಶಾಲಿ ಕುಡ್ವ ಸುಬ್ರಹ್ಮಣ್ಯ ಇನ್ನರ್‌ವ್ಹೀಲ್ ಕ್ಲಬ್ ಹೊರ ತಂದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕ್ಲಬ್‌ನ ಕಾರ್ಯದರ್ಶಿ ಚಂದ್ರ ಹೊನ್ನಪ್ಪ ವಾರ್ಷಿಕ ವರದಿ ವಾಚಿಸಿದರು. ಜಿಲ್ಲಾಧ್ಯಕ್ಷೆ ವೈಶಾಲಿ ಕುಡ್ವ ಹಾಗೂ ಸಮಾಜ ರತ್ನ ಪ್ರಶಸ್ತಿ ಪುರಸ್ಕೃತ ಚಂದ್ರ ಹೊನ್ನಪ್ಪ ಅವರನ್ನು ಗೌರವಿಸಲಾಯಿತು.

ಸಚಿತಾ ಗೋಪಾಲ್ ಪರಿಚಯಿಸಿದರು. ಭಾರತಿ ದಿನೇಶ್ ಸಂದೇಶ ವಾಚಿಸಿದರು. ಸೌಮ್ಯಾ ದಿನೇಶ್ ವಂದಿಸಿದರು. ವಿಮಲಾ ರಂಗಯ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net