ಸಂಸದ ಕೆ.ಸುಧಾಕರ್ ಮದ್ಯ ಹಂಚಿಕೆ ಬಗ್ಗೆ ಬಿಜೆಪಿ ಅಧ್ಯಕ್ಷ ನಡ್ಡಾ ಉತ್ತರಿಸಲಿ: ಡಿಕೆಶಿ ಸವಾಲು

dks
Published on

ಬೆಂಗಳೂರು: ಬಿಜೆಪಿ ಸಂಸದ ಡಾ ಕೆ ಸುಧಾಕರ್ ಅವರು ಕಾರ್ಯಕರ್ತರಿಗೆ ಮದ್ಯ ಹಂಚಿಕೆ ಮಾಡಿರುವ ಬಗ್ಗೆ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಉತ್ತರಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನೆಲಮಂಗಲದಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಮದ್ಯ ಹಂಚಿಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸುವುದು ಬೇರೆ ವಿಚಾರ. ಆದರೆ ಬಿಜೆಪಿ ಪ್ರಮುಖ ನಾಯಕರು ಇದಕ್ಕೆ ಸ್ಪಷ್ಟನೆ ನೀಡಬೇಕು. ಬಿಜೆಪಿಯ ಇಂಥ ಸಂಸ್ಕೃತಿ ಬಗ್ಗೆ ಸ್ಥಳೀಯ ಬಿಜೆಪಿ ನಾಯಕರಿಗಿಂತ ರಾಷ್ಟ್ರೀಯ ನಾಯಕರು ಉತ್ತರಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್‌ ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಮದ್ಯ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮದ್ಯ ಹಂಚಿಕೆ ವಿಚಾರ ರಾಜಕೀಯವಾಗಿಯೂ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಅಲ್ಲದೆ, ಪೊಲೀಸರು ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದಿದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಏನಿದು ವಿವಾದ?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ.ಸುಧಾಕರ್ ಅಭಿನಂದನಾ ಸಮಾವೇಶಕ್ಕೆ ಆಗಮಿಸಿದ್ದ ಜನರಿಗಾಗಿ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು

ಬಗೆ ಬಗೆಯ ಬಾಡೂಟ ಖಾದ್ಯಕ್ಕಾಗಿ ಜನರ ನೂಕುನುಗ್ಗಲು ಏರ್ಪಟ್ಟಿತ್ತು. ಸಮಾರಂಭಕ್ಕೆ ಬಂದಿದ್ದ ಕಾರ್ಯಕರ್ತರಿಗೆ ಬಾಡೂಟದ ಜೊತೆಗೆ ಎಣ್ಣೆ ಸಹ ನೀಡಲಾಗಿತ್ತು. ಎಣ್ಣೆ ಪಡೆದುಕೊಳ್ಳಲು ಜನರ ನೂಕುನುಗ್ಗಲು ಏರ್ಪಟ್ಟಿತ್ತು. ಸಮಾವೇಶಕ್ಕೆ ಬಂದವರಿಗೆ ಬಿಯರ್ ಹಾಗೂ ಹಾಟ್ ಡ್ರಿಂಕ್ಸ್ ವ್ಯವಸ್ಥೆ ಮಾಡಲಾಗಿತ್ತು. ಜನ ಮುಗಿಬಿದ್ದು ಎಣ್ಣೆ ಪಡೆದುಕೊಂಡರು. ಜನರು ಎಣ್ಣೆ, ಬಾಡೂಟಕ್ಕೆ ಮುಗಿಬಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net