

ಕುಷ್ಟಗಿ: 2024-25ನೇ ಸಾಲಿನ ತೊಗರಿ ಉತ್ಪನ್ನಕ್ಕೆ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಅಲ್ಲಲ್ಲಿ ಕೇಂದ್ರ ತೆರೆದು ಖರೀದಿಸಲಾಗುತ್ತಿದೆ. ರೈತರಿಗೆ ಉತ್ತಮ ಬೆಲೆ ನೀಡುವ ಸಲುವಾಗಿ ಸರ್ಕಾರ ಯೋಜನೆ ಜಾರಿಗೆ ತಂದರೆ ಖರೀದಿಸುವವರು ರೈತರಿಂದ ಪ್ರತಿ ಕ್ವಿಂಟಾಲ್ಗೆ 80-100ರೂ. ವಸೂಲಿ ಮಾಡುವ ಮೂಲಕ ಕೃಷಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.
ಪಟ್ಟಣ ಹೊರವಲಯದ ರಾಷ್ಟೀಯ ಹೆದ್ದಾರಿ ಪಕ್ಕದ ಖಾಸಗಿ ಗೋದಾಮಿನಲ್ಲಿ ಆರಂಭಿಸಿರುವ ಕೇಂದ್ರದಲ್ಲಿ ಫೆ.23ರಿಂದ ತೊಗರಿ ಖರೀದಿಸಲಾಗುತ್ತಿದೆ. ಕೇಂದ್ರ ಸರ್ಕಾರದ 7,550ರೂ. ಹಾಗೂ ರಾಜ್ಯ ಸರ್ಕಾರದ 450ರೂ. ಸೇರಿ ಪ್ರತಿ ಕ್ವಿಂಟಾಲ್ಗೆ 8000ರೂ. ನೀಡಲಾಗುತ್ತಿದೆ. ರೈತರಿಂದ ತಲಾ ಗರಿಷ್ಠ 40 ಕ್ವಿಂಟಾಲ್ ವರೆಗೆ ಖರೀದಿಸುವಂತೆ ಸರ್ಕಾರದ ಸೂಚನೆ ಇದೆ
ಕೇಂದ್ರದ ಭಾರತೀಯ ಸಹಕಾರಿ ಗ್ರಾಹಕ ಫೆಡರೇಷನ್(ಎನ್‌ಸಿಸಿಎ್) ಹಾಗೂ ರಾಜ್ಯದ ಕೃಷಿ ಸಹಕಾರ ಮಹಾ ಮಂಡಳ ಖರೀದಿ ಏಜೆನ್ಸಿಗಳಾಗಿದ್ದು, ಕೃಷಿ ಮಾರಾಟ ಮಹಾ ಮಂಡಳ ಪರವಾಗಿ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಖರೀದಿಸುತ್ತಿದೆ. ನಿತ್ಯ ಹತ್ತಾರು ರೈತರಿಂದ ನೂರಾರು ಕ್ವಿಂಟಾಲ್ ಉತ್ಪನ್ನ ಖರೀದಿಯಾಗುತ್ತಿದೆ. ಗುಣಮಟ್ಟದ ತೊಗರಿ ಖರೀದಿಸುವಂತೆ ಸರ್ಕಾರ ನೀಡಿರುವ ನಿರ್ದೇಶನ ಖರೀದಿ ಕೇಂದ್ರದವರಿಗೆ ವರವಾಗಿ ಪರಿಣಮಿಸಿದೆ. ಗುಣಮಟ್ಟ ಪರೀಕ್ಷೆಗೆ ಜರಡಿ/ಸಾಣೆ ಹಿಡಿಯುವುದು ಕಡ್ಡಾಯವಾಗಿದೆ.
ಪರೀಕ್ಷೆ ವೇಳೆ ತಿರಸ್ಕರಿಸಲೂಬಹುದು ಎಂದು ಹೇಳುವ ಖರೀದಿ ಕೇಂದ್ರದವರು, ಕ್ವಿಂಟಾಲ್ಗೆ 100ರೂ. ನೀಡಿದರೆ ನೇರವಾಗಿ ಖರೀದಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಉತ್ಪನ್ನ ತಿರಸ್ಕೃತಗೊಂಡರೆ ಮನೆಗೆ ಕೊಂಡೊಯ್ಯಬೇಕು ಎಂಬ ಆತಂಕಕ್ಕೆ ರೈತರು ಖರೀದಿ ಕೇಂದ್ರದವರು ಹೇಳಿದ್ದಕ್ಕೆ ಒಪ್ಪುತ್ತಿದ್ದಾರೆ. ಹಗಲು ದರೋಡೆಗೆ ಮುಂದಾಗಿರುವ ಖರೀದಿ ಕೇಂದ್ರದವರು ರೈತರ ಅನಿವಾರ್ಯತೆಯ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಗುಣಮಟ್ಟ ಪರೀಕ್ಷೆ ನೆಪವಾಗಿಟ್ಟುಕೊಂಡು ಪ್ರತಿ ಕ್ವಿಂಟಾಲ್ಗೆ 100ರೂ. ವಸೂಲಿ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಗೋದಾಮಿನ ಪಕ್ಕದಲ್ಲಿ ಇಬ್ಬರನ್ನು ನಿಲ್ಲಿಸಲಾಗಿರುತ್ತದೆ. ಹೆಚ್ಚು ಉತ್ಪನ್ನ ತಂದವರಿಂದ ಕ್ವಿಂಟಾಲ್ಗೆ 80ರೂ. ವರೆಗೆ ಪಡೆಯುತ್ತಾರೆ.
ಕೇಂದ್ರಕ್ಕೆ ಬಂದಿದ್ದ ಹೆಸರು ಹೇಳಲಿಚ್ಚಿಸದ ರೈತರು
ಖರೀದಿ ಕೇಂದ್ರದವರು ಹಣ ಪಡೆಯುತ್ತಿರುವ ಬಗ್ಗೆ ರೈತರು ದೂರು ನೀಡಿದರೆ ಅಗತ್ಯ ಕ್ರಮ ಕೈಗೊಳ್ಳುವಂತೆ ಎಪಿಎಂಸಿ ಕಾರ್ಯದರ್ಶಿಗೆ ಸೂಚಿಸಲಾಗುವುದು.
ಅಶೋಕ ಶಿಗ್ಗಾವಿ, ತಹಸೀಲ್ದಾರ್ ಕುಷ್ಟಗಿ