ಸೈನಿಕನ 2 ವರ್ಷದ ಮಗುವನ್ನು ಎಳೆದೊಯ್ದ ಚಿರತೆ! ಪತ್ತೆಗಾಗಿ ಎಲ್ಲೆಡೆ ಹುಡುಕಾಟ| Leopard attack

untitled-design-2025-09-24t113824515-68d38aed6871f
Published on

Leopard attack: ಮಹಾರಾಷ್ಟ್ರದ ನಾಸಿಕ್​ನಲ್ಲಿ ಚಿರತೆಯೊಂದು ಶ್ರುತಿಕ್​ ಗಂಗಾಧರ್​ ಎಂಬ ಎರಡು ವರ್ಷದ ಮಗುವಿನ ಮೇಲೆ ದಾಳಿ ನಡೆಸಿ ಎಳೆದುಕೊಂಡು ಹೋಗಿರುವ ಘಟನೆ ಮಂಗಳವಾರ ರಾತ್ರಿ 9:30 ರ ಸುಮಾರಿಗೆ ಬೆಳಕಿಗೆ ಬಂದಿದೆ.

ಈ ಘಟನೆಯು ಆ ಪ್ರದೇಶದಲ್ಲಿರುವ ಜನರಿಗೆ ಭಯಹುಟ್ಟಿಸಿದ್ದು, ಅರಣ್ಯ ಇಲಾಖೆ, ಡಿಯೋಲಾಲಿ ಫಿರಂಗಿ ಕೇಂದ್ರದ ಸಿಬ್ಬಂದಿ ಮತ್ತು ನಾಗರಿಕರು ಮಧ್ಯರಾತ್ರಿಯವರೆಗೂ ಡ್ರೋನ್​ ಸಹಾಯದಿಂದ ಹುಡುಕಿದರೂ ಈವರೆಗೂ ಮಗು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಘಟನೆ ಹಿನ್ನಲೆ

ವಡ್ನರ್​ ಗೇಟ್​ ಪ್ರದೇಶದ ಕಾರ್ಗಿಲ್​ ಗೇಟ್​ ಬಳಿಯ ಕ್ವಾಟರ್ಸ್​ ಮುಂದೆ ಮಂಗಳವಾರ ರಾತ್ರಿ 9:30 ಸುಮಾರಿಗೆ ಚಿರತೆ ದಾಳಿ ನಡೆಸಿದೆ. ಈ ವೇಳೆ ಮಗು ಅಳಲು ಪ್ರಾರಂಭಿಸಿದ್ದು, ಪಾಲಕರು ಮನೆಯಿಂದ ಹೊರ ಬಂದು ನೋಡಿದ್ದಾರೆ. ಈ ವೇಳೆಗಾಗಲೇ ಚಿರತೆ ಮಗುವನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕುಟುಂಬಸ್ಥರು ನೋಡಿ ಕಿರುಚಾಡಲು ಪ್ರಾರಂಭಿಸಿದ್ದಾರೆ. ಈ ದೃಶ್ಯವನ್ನು ನೋಡಿದ ಅಲ್ಲಿನ ಸ್ಥಳೀಯರು ಚಿರತೆಯನ್ನು ಸ್ವಲ್ಪ ದೂರದವರೆಗೂ ಬೆನ್ನಟ್ಟಿದ್ದಾರೆ. ಆದರೆ ಇದು ನದಿ ಬಳಿ ಹೋಗಿದ್ದನ್ನು ನೋಡಿ ವಾಪಸ್ಸಾಗಿದ್ದಾರೆ.

ರಕ್ತದ ಕಲೆಗಳು ಮತ್ತು ಚಿರತೆಯ ಕಾಲಿನ ಬೆರಳು ಗುರುತುಗಳು ಸಿಕ್ಕಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು, ಸೇನೆಯ ಜವಾನ್‌ಗಳು ಮತ್ತು ಸ್ಥಳೀಯರು ಡ್ರೋನ್‌ಗಳ ಸಹಾಯದಿಂದ ರಾತ್ರಿಯಿಂದಲೇ ಹುಡುಕಾಟ ಆರಂಭಿಸಿದ್ದಾರೆ. ಚಿರತೆಯನ್ನು ಸೆರೆಹಿಡಿಯಲು 6 ಬೇಟೆಗಳನ್ನು ಹಾಕಲಾಗಿದೆ. ಹಾಗೆಯೇ ಇಂದು ಬೆಳಿಗ್ಗೆಯಿಂದಲೇ ಶೋಧ ಕಾರ್ಯಾಚರಣೆ ಮುಂದುವೆರದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ನಡೆದ ನಂತರ ಮಗುವಿನ ತಾಯಿ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಈವರೆಗೂ ಮಗು ಪತ್ತೆಯಾಗದ ಕಾರಣ ಬೆಳಿಗ್ಗೆ ಶೋಧ ಕಾರ್ಯಚರಣೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net