ಬೆಂಗಳೂರು: ನಗರದ ನೈರ್ಮಲ್ಯವನ್ನು ಶುಚಿಯಾಗಿ ಇಡುವಲ್ಲಿ ವರ್ಷವಿಡೀ ಶ್ರಮವಹಿಸಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ‘ಶಾಸಕರ ರಾಜ್ಯೋತ್ಸವ ಪ್ರಶಸ್ತಿ’ ನೀಡುವ ಹೊಸ ಪರಂಪರೆಗೆ ಯಶವಂತಪುರ ಕ್ಷೇತ್ರ ಸಾಕ್ಷಿಯಾಗಲಿದೆ.
ಬಿಬಿಎಂಪಿ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಉಪಕ್ರಮ ಕೈಗೊಳ್ಳಲಾಗಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿರುವ ಐದೂ ವಾರ್ಡ್‌ಗಳಲ್ಲಿ ನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರು ಒಳಗೊಂಡಂತೆ ಅವರಿಗೆ ನೆರವಾಗಿರುವ ಆಟೋ-ಟ್ರಕ್ ಚಾಲಕರು, ಸಹಾಯಕರು ಹಾಗೂ ಪಾಲಿಕೆ ಚಿತಾಗಾರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ 1,200 ಮಂದಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಕೆಂಗೇರಿ ಉಪನಗರದ ಬಂಡೇಮಠದ ಕಲ್ಯಾಣಮಂಪಟದಲ್ಲಿ ಶುಕ್ರವಾರ (ನ.3) ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಪೌರಕಾರ್ಮಿಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಿದ್ದಾರೆ ಎಂದು ಮಾಜಿ ಕಾರ್ಪೊರೇಟರ್ ಆರ್ಯ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ.
ನಾವು ವಾಸಿಸುವ ಪರಿಸರವನ್ನು ಸ್ವಚ್ಚ ಹಾಗೂ ಯಾವುದೇ ರೋಗ ಭೀತಿ ಇಲ್ಲದೆ ವರ್ಷವಿಡೀ ಶುಚಿ ಮಾಡುವ ಕಾಯಕದಲ್ಲಿ ಪೌರಕಾರ್ಮಿಕರು ನಿರತರಾಗಿದ್ದಾರೆ. ಇವರ ಕಾರ್ಯ ಹಾಗೂ ಅಗತ್ಯತೆಯನ್ನು ಕರೋನ ಸಂದರ್ಭದಲ್ಲಿ ಎಲ್ಲರೂ ಮನಗಂಡಿದ್ದಾರೆ. ಇಂತಹ ಶ್ರಮಜೀವಿಗಳಿಗೆ ನೈತಿಕಶಕ್ತಿ ತುಂಬವ ಉದ್ದೇಶದಿಂದ ಯಶವಂತಪುರ ಕ್ಷೇತ್ರದ ಎಲ್ಲ ಪೌರಕಾಮಿರ್ಕರಿಗೂ ಶಾಸಕರ ಪ್ರಶಸ್ತಿ ಪ್ರದಾನಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅರೆ ವೈದ್ಯಕೀಯ ಸಿಬ್ಬಂದಿಗು ಪ್ರಶಸ್ತಿ ನೀಡಿ ಗೌರವಿಸುವ ಚಿಂತನೆ ನಡೆದಿದೆ ಎಂದು ಎಸ್.ಟಿ.ಸೋಮಶೇಖರ್ ರಾಜ್ಯೋತ್ಸವ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಆರ್ಯ ಶ್ರೀನಿವಾಸ್ ತಿಳಿಸಿದ್ದಾರೆ.