

ಸಾಲಿಗ್ರಾಮ: ಎಸ್ಸಿ, ಎಸ್ಟಿ ಮತ್ತು ಬುಡಕಟ್ಟು ಜನಾಂಗದವರ ಮೇಲೆ ದೌರ್ಜನ್ಯ, ಅಸ್ಪಶ್ಯತೆ ನಡೆದರೆ ಯಾವುದೇ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಲಾಲ್ ತಾಕೀತು ಮಾಡಿದರು.
ಸಾಲಿಗ್ರಾಮ ಪಟ್ಟಣದ ಬಾಹುಬಲಿ ಸಮುದಾಯ ಭವನದಲ್ಲಿ ನಿಸರ್ಗ ಕಲಾಭಿವೃದ್ಧಿ ಟ್ರಸ್ಟ್ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ ಎಸ್ಸಿ, ಎಸ್ಟಿ ಮತ್ತು ಬುಡಕಟ್ಟು ಜನಾಂಗದವರ ಮೇಲೆ ದೌರ್ಜನ್ಯ, ಅಸ್ಪಶ್ಯತೆ ತಡೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಗಳಲ್ಲಿ ಜಾತಿ ಪದ್ಧತಿ ಬಿಟ್ಟು ಎಲ್ಲರೂ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಲು ಕಾನೂನು ವ್ಯವಸ್ಥೆ ನಿಮ್ಮೊಂದಿಗೆ ಇದೆ. ಯಾರೂ ಅಸ್ಪಶ್ಯತೆ ಮತ್ತು ದೌರ್ಜನ್ಯಗಳಿಗೆ ಸಹಕಾರ ನೀಡದೆ ಕಾನೂನು ಸುವ್ಯವಸ್ಥೆ ಪಾಲಿಸಬೇಕು. ಸಮಾಜದಲ್ಲಿ ಎಲ್ಲ ಜನರಂತೆ ಅವರೂ ಒಳ್ಳೆಯ ಬದುಕನ್ನು ಕಟ್ಟಿಕೊಂಡು ಜೀವನ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ನರಗುಂದ ಮಾತನಾಡಿ, ಎಸ್ಸಿ, ಎಸ್ಟಿ ಮತ್ತು ಬುಡಕಟ್ಟು ಜನಾಂಗದವರ ಮೇಲೆ ದೌರ್ಜನ್ಯ ನಡೆದು ಕಾನೂನು ಹೋರಾಟ ಮಾಡಲು ಅಸಂಘಟಿತರಾಗಿದ್ದರೆ ಭಯಪಡುವ ಅವಶ್ಯಕತೆ ಇಲ್ಲ. ಸರ್ಕಾರ ಕಾನೂನು ವ್ಯವಸ್ಥೆಯನ್ನು ನಿಮ್ಮ ರಕ್ಷಣೆಗೆ ನೀಡಿದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ವತಿಯಿಂದ ಉಚಿತವಾಗಿ ಯಾವುದೇ ಶುಲ್ಕ ಪಡೆಯದೆ ವಕೀಲರು ವಕಾಲತ್ತು ವಹಿಸಲಿದ್ದಾರೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಜಿಲ್ಲಾ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಮಾಜಿ ಸದಸ್ಯ ಹನಸೋಗೆ ನಾಗರಾಜ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚಂದ್ರು, ಕಂಠಿಕುಮಾರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಂಕರಮೂರ್ತಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ತಾಲೂಕು ಅಧಿಕಾರಿ ನವ್ಯಶ್ರೀ, ಹೊನ್ನೇನಹಳ್ಳಿ ರಾಜಯ್ಯ ಮಾತನಾಡಿದರು.
ಇನ್ಸ್ಪೆಕ್ಟರ್ ಶಿವಪ್ರಸಾದ್, ಕೃಷ್ಣರಾಜ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುವರ್ಣ, ತಂದ್ರೆ ರೇಣುಕಾ, ಉಪಾಧ್ಯಕ್ಷೆ ಶೈಲಜಾ, ಸುಧಾಕರ್ ವಕೀಲ ಗೋವಿಂದರಾಜು, ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಸಿ.ಸಿ.ಮಹದೇವ್, ಕಾರ್ಯದರ್ಶಿ ಮಂಜು ಬೈರೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕಾಧಿಕಾರಿ ಕೃಷ್ಣಪ್ಪ ಇತರರು ಇದ್ದರು.
ಕಾರ್ಯಕ್ರಮದ ಅರ್ಧದಲ್ಲೇ ತುರ್ತು ಕೆಲಸವಿದೆ ಎಂದು ಪೊಲೀಸರು, ವಕೀಲರು ಹೊರಟರು. ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು.