

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಕಳೆದ ವರ್ಷ ಡಿ.8ರಂದು ವಿಧಿವಶರಾಗಿದ್ದಾರೆ. ಇದೀಗ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ವಿನೋದ್ ರಾಜ್ ಕುಟುಂಬ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಇಂದು (ಜ.14) ಲೀಲಾವತಿ ಸ್ಮಾರಕಕ್ಕೆ ವಿನೋದ್ ರಾಜ್ ನೆಲಮಂಗಲದ ತೋಟ ಮನೆಯ ಪಕ್ಕದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಸ್ಮಾರಕ ಹೇಗಿರಲಿದೆ ಎಂಬುದನ್ನು ತಿಳಿಸುವಂತಹ ಪ್ರತಿಕೃತಿಯ ಎದುರಿನಲ್ಲಿ ಪೂಜೆ ಮಾಡಲಾಗಿದೆ. ವಿನೋದ್ ರಾಜ್, ಪತ್ನಿ ಅನು ಹಾಗೂ ಪುತ್ರ ಯುವರಾಜ್ ಅವರು ಪೂಜೆಯಲ್ಲಿ ಭಾಗಿ ಆಗಿದ್ದಾರೆ. 55 ಲಕ್ಷ ರೂಪಾಯಿ ವೆಚ್ಚದಲ್ಲಿ ಲೀಲಾವತಿ ಸ್ಮಾರಕ ನಿರ್ಮಾಣ ಆಗಲಿದೆ. 120 ದಿನದಲ್ಲಿ ಈ ಕೆಲಸ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅಮ್ಮನವರ ಸಮಾಧಿ ಕೇವಲ ಸಮಾಧಿ ಅಲ್ಲ ಅದು ಒಂದು ಆಧ್ಯಾತ್ಮಿಕ ಕ್ಷೇತ್ರವನ್ನಾಗಿ ಮಾಡುತ್ತೇವೆ. ತಾಯಿಯ ಸ್ಮಾರಕಕ್ಕಾಗಿ ಸರ್ಕಾರದಿಂದ ಯಾವುದೇ ಅಪೇಕ್ಷೆ, ಹಣ ಪಡೆಯದೆ ನಾವೇ ಸಮಾಧಿ ಕಟ್ಟಲು ತೀರ್ಮಾನ ಮಾಡಿದ್ದೇವೆ ಎಂದಿದ್ದಾರೆ.
ಕಳೆದ ವರ್ಷ ಡಿಸೆಂಬರ್ 8ರಂದು ಹಿರಿಯ ನಟಿ ಲೀಲಾವತಿ ಅವರು ನಿಧನರಾದರು. ಈಗ ಅವರ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸಂಕ್ರಾಂತಿ ಹಬ್ಬದ ಬಳಿಕ ಸ್ಮಾರಕ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಪುತ್ರ ವಿನೋದ್ ರಾಜ್ ಹೇಳಿದ್ದರು. ಇಂದು (ಜನವರಿ 14) ಅವರು ತೋಟದ ಪಕ್ಕದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.