

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪುರಾಣದಿಂದಲೂ ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ ಮತ್ತು ವ್ಯಕ್ತಿತ್ವ ಅಭಿವೃದ್ಧಿಯ ಪ್ರಮುಖ ಭಾಗವಾಗಿದೆ. ಹಾಗಾಗಿ ಕಲಿಕೆ ಎನ್ನುವುದು ತಕ್ಷಣಕ್ಕೆ ಮುಗಿಯುವುದಲ್ಲ, ಅದೊಂದು ಮುಗಿಯದ ಅಧ್ಯಾಯ ಎಂದು ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಹೇಳಿದರು.
ಉಜಿರೆ ಶ್ರೀ ಧ.ಮಂ.ಕಾಲೇಜು ಕಲಾ ಕೇಂದ್ರದಲ್ಲಿ ಯಕ್ಷಗಾನದ ನೂತನ ರಂಗಸ್ಥಳದ ಚೌಕಟ್ಟು ಉದ್ಘಾಟನೆ ಕಾರ್ಯಕ್ರಮ ಮತ್ತು ‘ವಿಶ್ವಮಾನವ ಶ್ರೀ ರಾಮಚಂದ್ರ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಲಾಕೇಂದ್ರದ ಮಾತೃ ಸ್ವರೂಪಿ ಸೋನಿಯಾ ಯಶೋವರ್ಮ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ವಿಶ್ವನಾಥ ಪಿ. ನೂತನ ರಂಗಸ್ಥಳ ಉದ್ಘಾಟಿಸಿದರು. ಡಾ.ಹೆಗ್ಗಡೆಯವರ ಕುರಿತ ಸಾಧನೆ ಹಾಗೂ ಅವರ ಚಿಂತನೆಗಳನ್ನು ಒಳಗೊಂಡಂತಹ ಕಾರ್ಯಕ್ರಮವನ್ನು ಯಕ್ಷ ದರ್ಶನ ಶೀರ್ಷಿಕೆಯಡಿ ಹಾಗೂ ಯಕ್ಷಗಾನದ ವಾರ್ಷಿಕ ವರದಿ ಬಿಡುಗಡೆ ಮಾಡಲಾಯಿತು.
ವಿದ್ಯಾರ್ಥಿಗಳಾದ ಅಮೋಘ ಶಂಕರ್ ಹಾಗೂ ಅನನ್ಯಾ ಅಧ್ಯಯನ ಪ್ರವಾಸದ ಅನುಭವ ಹಂಚಿಕೊಂಡರು. ವಿದ್ಯಾರ್ಥಿಗಳು ಬಾಲ ಗೋಪಾಲ ಪ್ರಸ್ತುತಿ ಆಡಿ ತೋರಿಸಿದರು. ಹೆಚ್ಚು ಯಕ್ಷಗಾನ ತರಗತಿಗೆ ಹಾಜರಾದ ವಿದ್ಯಾರ್ಥಿಗಳಾದ ಸ್ಮತಿ ಹಾಗೂ ಅನನ್ಯಾ ಅವರನ್ನು ಗುರುತಿಸಲಾಯಿತು. ಸಾಂಸ್ಕೃತಿಕ ವಿಭಾಗ ಮುಖ್ಯಸ್ಥ ಡಾ.ನಾಗಣ್ಣ, ಯಕ್ಷಗಾನ ತರಬೇತುದಾರ ಅರುಣ್‌ಕುಮಾರ್ ಧರ್ಮಸ್ಥಳ, ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ, ಕಾಲೇಜಿನ ಸಂಸ್ಕೃತ ವಿಭಾಗ ಪ್ರಾಧ್ಯಾಪಕ ಶ್ರೇಯಸ್ ಪಾಳ್ಯಂದೆ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಸಚಿನ್ ಮತ್ತಿತರರು ಉಪಸ್ಥಿತರಿದ್ದರು. ತೇಜಸ್ ಸ್ವಾಗತಿಸಿದರು. ಸಹನಾ ವಂದಿಸಿದರು. ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.