

ಕಳೆದೆರೆಡು ದಿನಗಳಿಂದ ಬಾಲಿವುಡ್ ತುಂಬಾ ಅದೇ ಸುದ್ದಿ. ಹಿಂದಿಯ ಏಳು ಚಿತ್ರಗಳ ಹಕ್ಕುಗಳನ್ನು ಡಿಸ್ನಿ-ಹಾಟ್ಸ್ಟಾರ್ ಸಂಸ್ಥೆಯು ಖರೀದಿಸಿದ್ದು, ಮುಂದಿನ ಮೂರು ತಿಂಗಳುಗಳಲ್ಲಿ ಆ ಏಳು ಸಿನಿಮಾಗಳನ್ನು ನೇರವಾಗಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ.
ಇದನ್ನೂ ಓದಿ: ಈ ಬಾರಿ ಸ್ಟಾರ್ಗಳ ಹುಟ್ಟುಹಬ್ಬದ ಸಂಭ್ರಮ ಇಲ್ಲ …
ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮೀ ಬಾಂಬ್', ಅಜಯ್ ದೇವಗನ್ ಅಭಿನಯದ 'ಭುಜ್ - ದಿ ಪ್ರೈಡ್ ಆಫ್ ಇಂಡಿಯಾ', ಸಂಜಯ್ ದತ್ ಅಭಿನಯದ 'ಸಡಕ್ 2', ಅಭಿಷೇಕ್ ಬಚ್ಚನ್ ಅಭಿನಯದ 'ದಿ ಬಿಗ್ ಬುಲ್', ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರ 'ದಿಲ್ ಬೇಚಾರ', ವಿದ್ಯುತ್ ಜಾಮ್ವಾಲ್ ಅಭಿನಯದ 'ಖುದಾ ಹಾಫಿಜ್' ಮತ್ತು ಕುನಾಲ್ ಖೇಮು ಅಭಿನಯದ 'ಲೂಟ್ಕೇಸ್' ಚಿತ್ರಗಳು ಸೇರಿವೆ.
ಯಾವಾಗ ಇಷ್ಟೊಂದು ಚಿತ್ರಗಳು ಓವರ್ ದಿ ಟಾಪ್ (ಓಟಿಟಿ)ಯಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಲಾಯಿತೋ, ಈ ಚಿತ್ರಗಳೆಲ್ಲಾ ಅದೆಷ್ಟಕ್ಕೆ ಡಿಸ್ನಿ-ಹಾಟ್ಸ್ಟಾರ್ಗೆ ಮಾರಾಟವಾಗಿರಬಹುದು ಎಂಬ ಲೆಕ್ಕಾಚಾರ ಶುರುವಾಯಿತು. ಅದರಲ್ಲೂ ಈ ಪಾಟಿಯಲ್ಲಿ ದೊಡ್ಡ ದೊಡ್ಡ ಸ್ಟಾರ್ಗಳ, ಬಿಗ್ ಬಜೆಟ್ ಚಿತ್ರಗಳು ಇವೆ. ಈ ಚಿತ್ರಗಳೆಲ್ಲಾ ಎಷ್ಟಕ್ಕೆ ಮಾರಾಟವಾಗಿರಬಹುದು ಎಂಬ ಸಹಜ ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಆದರೆ, ಎರಡೂ ಚಿತ್ರತಂಡದವರು ಚಿತ್ರ ಎಷ್ಟಕ್ಕೆ ಮಾರಾಟವಾಗಿದೆ ಎಂಬ ವಿಷಯವನ್ನು ಎಲ್ಲೂ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಕಮಾಂಡೋ ಪರವಾಗಿ ಕಂಗನಾ ಬ್ಯಾಟಿಂಗ್!
ಮೂಲಗಳ ಪ್ರಕಾರ, ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮೀ ಬಾಂಬ್', ಅಜಯ್ ದೇವಗನ್ ಅಭಿನಯದ 'ಭುಜ್ - ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರಗಳು ಕ್ರಮವಾಗಿ 125 ಮತ್ತು 112ಕೋಟಿಗಳಿಗೆ ಮಾರಾಟವಾಗಿದೆಯಂತೆ. ಇದುವರೆಗೂ ಯಾವ ಚಿತ್ರಕ್ಕೂ, ಯಾವ ಓಟಿಟಿಯಲ್ಲೂ ಇಷ್ಟೊಂದು ದೊಡ್ಡ ಮೊತ್ತದ ಹಣ ಕೊಟ್ಟ ಉದಾಹರಣೆಗಳಿರಲಿಲ್ಲ. ಈಗ 'ಲಕ್ಷ್ಮೀ ಬಾಂಬ್' ಮತ್ತು 'ಭುಜ್ - ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರಗಳು ಕ್ರಮವಾಗಿ 125 ಕೋಟಿ ಮತ್ತು 112ಕೋಟಿ ಗಳಿಸಿರುವುದರಿಂದ, ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ಚಿತ್ರಗಳು ಎಂಬ ಹೆಗ್ಗಳಿಗಕೆಗೆ ಪಾತ್ರವಾಗಿವೆ.
ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನವೇ ಎರಡೂ ಚಿತ್ರತಂಡಗಳು ಬರೀ ಓಟಿಟಿ ಹಕ್ಕುಗಳಿಂದಲೇ ಸೇಫ್ ಆಗಿದ್ದು, ಸ್ಯಾಟಿಲೈಟ್ ಮತ್ತು ಡಬ್ಬಿಂಗ್ ಹಕ್ಕುಗಳಿಂದ ಇನ್ನಷ್ಟು ದುಡ್ಡು ಸಂಪಾದಿಸುವ ಸಾಧ್ಯತೆಗಳಿವೆ.