ಹೆಸರು ಕಾಳು ಬೆಂಬಲ ಬೆಲೆ ಘೊಷಣೆಗೆ ಸೀಮಿತ

9-LXR-HESARU
Published on

ಲಕ್ಷೆ್ಮೕಶ್ವರ: ರೈತರ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ದರ ಕುಸಿತವಾದಾಗ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನ ಖರೀದಿಸುವ ಮೂಲಕ ರೈತರ ಸಹಾಯಕ್ಕೆ ನಿಲ್ಲಬೇಕಾಗುತ್ತದೆ.

ಕೇಂದ್ರ ಸರ್ಕಾರ ಮುಂಗಾರಿನ ಪ್ರಮುಖ ಹೆಸರು ಸೇರಿ ಪ್ರಮುಖ 14 ಬೆಳೆಗಳಿಗೆ ಈ ವರ್ಷ ಮೇ ತಿಂಗಳಲ್ಲಿಯೇ ಕನಿಷ್ಠ ಬೆಂಬಲ ಬೆಲೆ ಪರಿಷ್ಕೃತ ದರ ಘೊಷಣೆ ಮಾಡಿದೆ. ಆದರೆ, ಖರೀದಿ ಕೇಂದ್ರಗಳು ಇನ್ನೂ ಪ್ರಾರಂಭವಾಗಿಲ್ಲ, ಕೇವಲ ಘೊಷಣೆಗೆ ಮಾತ್ರ ಸೀಮಿತ ಎಂಬಂತಾಗಿದೆ. ರೈತರು ಅನಿವಾರ್ಯತೆ, ಅಗತ್ಯಗಳ ನಡುವೆ ಕೈಗೆ ಸಿಕ್ಕ ದರಕ್ಕೆ ಮಾರಾಟ ಮಾಡಿದ್ದಾರೆ. ಸ್ಥಳೀಯ ಎಪಿಎಂಸಿಯಲ್ಲಿ ಅಧಿಕೃತವಾಗಿ 20 ಸಾವಿರ ಕ್ವಿಂಟಾಲ್​ಗಿಂತ ಹೆಚ್ಚು ಹೆಸರು ಕಾಳು ಮಾರಾಟವಾಗಿದೆ.

ಲಕ್ಷೆ್ಮೕೕಶ್ವರ ತಾಲೂಕಿನಲ್ಲಿ ಪಟ್ಟಣ ಸೇರಿದಂತೆ ದೊಡ್ಡೂರು, ಶಿಗ್ಲಿ, ಅಡರಕಟ್ಟಿ, ಗೊಜನೂರ, ಯತ್ತಿನಹಳ್ಳಿ, ಹರದಗಟ್ಟಿ, ಆದ್ರಳ್ಳಿ, ಅಕ್ಕಿಗುಂದ, ಸೂರಣಗಿ, ಬಾಲೆಹೊಸೂರ ಭಾಗದಲ್ಲಿ ಒಟ್ಟು 5,850 ಹೆಕ್ಟೇರ್​ನಲ್ಲಿ ಹೆಸರು ಬೀಜ ಬಿತ್ತನೆಯಾಗಿದೆ.

ಒಂದು ಹಂತದಲ್ಲಿ ಬೆಳೆ ಉತ್ತಮವಾಗಿದ್ದ ಸಂದರ್ಭದಲ್ಲಿ ಬಿಡದ ಮಳೆ, ಮೋಡ ಕವಿದ ವಾತಾವರಣದಿಂದ ಹಳದಿ ರೋಗ, ಕೀಟಬಾಧೆ, ಬೂದು/ತಾಮ್ರ ರೋಗ ಹೀಗೆ ಹತ್ತಾರು ಸಂಕಷ್ಟದ ನಡುವೆ 80 ದಿನಕ್ಕೆ ಹೆಸರು ಬೆಳೆ ಕಟಾವಿಗೆ ಬಂದಿತ್ತು. ಆದರೆ, ಕಟಾವಿನ ವೇಳೆ ನಿರಂತರ ಮಳೆಗೆ ಹೆಸರು ಕಾಳು ಗಿಡದಲ್ಲಿಯೇ ಮೊಳಕೆಯೊಡೆಯಿತು.

ಮಳೆ ಮತ್ತು ಕೂಲಿ ಆಳಿನ ಸಮಸ್ಯೆ ನಡುವೆಯೂ ಕಟಾವು ಮಾಡಿದ ಹೆಸರು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕಡಿಮೆ ಗುಣಮಟ್ಟದ ಕಾರಣದಿಂದ ಸೂಕ್ತ ದರ ಇಲ್ಲ. ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಹೆಸರಿಗೆ ಕ್ವಿಂಟಾಲ್​ಗೆ 9,000 ದರವಿದೆ. ಆದರೆ, ಗುಣಮಟ್ಟ ಇಲ್ಲದ್ದರಿಂದ 4,000 ರೂ. ಕ್ವಿಂಟಾಲ್ ಮಾರಾಟವಾಗುತ್ತಿದೆ. ಎಕರೆಗೆ ಸರಾಸರಿ 5 ಕ್ವಿಂಟಾಲ್ ಇಳುವರಿ ಬರುತ್ತಿದ್ದ ಹೆಸರು ಈ ವರ್ಷ ಸರಾಸರಿ 1 ಕ್ವಿಂಟಾಲ್​ನಷ್ಟು ಬಂದಿದೆ. ಈಗಿನ ದರಕ್ಕೆ ಮಾರಾಟ ಮಾಡಿದರೆ ಕಟಾವಿನ ಖರ್ಚು ಮರಳಿ ಬರದಂತಾಗಿದೆ.

ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಹೆಸರಿಗೆ 8,768 ರೂ. ಕನಿಷ್ಠ ಬೆಂಬಲ ಬೆಲೆ ಘೊಷಿಸಿ 4 ತಿಂಗಳಾಗಿದೆ. ರೈತರು ತಮ್ಮ ತುರ್ತು ಉದ್ದೇಶಗಳಿಗಾಗಿ ಕಡಿಮೆ ದರಕ್ಕೆ ಮಾರಾಟ ಮಾಡಿದ್ದಾರೆ. ರೈತರೆಲ್ಲ ಬೆಳೆ ಮಾರಾಟ ಮಾಡಿದ ಮೇಲೆ ಖರೀದಿ ಕೇಂದ್ರಗಳು ನೆಪ ಮಾತ್ರಕ್ಕೆಂಬಂತೆ ಪ್ರಾರಂಭಗೊಳ್ಳುತ್ತವೆ. ಕೇಂದ್ರ ಸರ್ಕಾರ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಮಳೆಯಿಂದ ಬೆಳೆ ಹಾಳಾಗಿ ಸಂಕಷ್ಟದಲ್ಲಿರುವ ರೈತರಿಗೆ ಬೆಳೆವಿಮೆ, ಎನ್​ಡಿಆರ್​ಎಫ್ ಯೋಜನೆಯಡಿ ಪರಿಹಾರ ಕಲ್ಪಿಸಬೇಕು.

| ಆನಂದಸ್ವಾಮಿ ಗಡ್ಡದ್ದೇವರಮಠ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

ಬೀಜ, ರಸಗೊಬ್ಬರ, ಕೂಲಿ, ನಿರ್ವಹಣೆ ಖರ್ಚು ಸೇರಿ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ. ಖರ್ಚು ಮಾಡಿದ್ದೇವೆ. ಆದರೆ, ರೋಗಬಾಧೆ, ಅತಿವೃಷ್ಟಿಯಿಂದ ಬೆಳೆ ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಇನ್ನು ಅಳಿದುಳಿದ ಬೆಳೆಯನ್ನು ಒಕ್ಕಲು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಸೂಕ್ತ ದರವಿಲ್ಲ. ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಬೆಂಗಳೂರಿನ ಕೆಎಸ್​ಸಿಎಂಎಫ್​ನ ನಿರ್ದೇಶಕರಿಗೂ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ.

| ಚನ್ನಪ್ಪ ಷಣ್ಮುಕಿ, ವಿರೂಪಾಕ್ಷ ಆದಿ, ರೈತರು

ಬೆಂಬಲ ಬೆಲೆಯಡಿ ಹೆಸರು ಖರೀದಿಸಲು ಜಿಲ್ಲಾದ್ಯಂತ ಖರೀದಿ ಕೇಂದ್ರ ಪ್ರಾರಂಭಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದಿಂದ ಆದೇಶ ಬಂದ ಕೂಡಲೇ ಖರೀದಿ ಕೇಂದ್ರ ಆರಂಭಿಸಲಾಗುವುದು.

| ಡಿ.ಬಿ. ಡೊಕ್ಕಣ್ಣವರ

ಕರ್ನಾಟಕ ಸಹಕಾರ ಮಾರಾಟ ಮಂಡಳ (ಕೆಎಸ್​ಸಿಎಂಎಫ್) ಜಿಲ್ಲಾ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net