

ಮಂಡ್ಯ: ಕೆರಗೋಡು ಗ್ರಾಮದಲ್ಲಿ ಧ್ವಜ ತೆರವು ವಿವಾದ ಹಿನ್ನೆಲೆಯಲ್ಲಿ ಗ್ರಾಮದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ನಿಯೋಗ, ಗ್ರಾಮದ ಮುಖಂಡರು ಹಾಗೂ ಗ್ರಾಪಂ ಸದಸ್ಯರು ಸಭೆ ಮಾಡಿ ಚರ್ಚೆ ನಡೆಸಿದರು.
ಸಭೆಯಲ್ಲಿ ಗ್ರಾಮಸ್ಥ ಆನಂದ್ ಮಾತನಾಡಿ, ನಮ್ಮ ಗ್ರಾಪಂನಲ್ಲಿ ಎಲ್ಲ ಪಕ್ಷದ ಬೆಂಬಲಿತ ಸದಸ್ಯರಿದ್ದಾರೆ. ಎಲ್ಲ ಪಕ್ಷದವರು ಹನುಮಾನ್ ಧ್ವಜಕ್ಕೆ ಬೆಂಬಲ ನೀಡಿದ್ದಾರೆ. ಇಲ್ಲಿಯೂ ಎಲ್ಲ ಸದಸ್ಯರು ಇದ್ದಾರೆ. ಈಗಲೂ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲರೂ ಧ್ವಜಬೇಕೆಂದು ಹೇಳುತ್ತಿದ್ದಾರೆ. ಇವರು ರಾಜಕೀಯ ಮಾಡಿ ನಮ್ಮನ್ನು ಹೊಡೆಯುತ್ತಿದ್ದಾರೆ ಎಂದರು.
ನಾನು ಪಿಟಿ ಮಾಸ್ಟರ್. ನಮಗೆ ದೇಶ ಭಕ್ತಿಯನ್ನು ಬೇರೆಯವರು ಹೇಳಿಕೊಡುವ ಆಗತ್ಯವಿಲ್ಲ. 108 ಅಡಿ ಧ್ವಜಸ್ತಂಭದಲ್ಲಿ ಚಿಕ್ಕ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಅವರು ಹಾರಿಸಿರುವ ಧ್ವಜ ಮನೆಯ ಮೇಲೆ ಹಾರಿಸುವುದು. ಎಷ್ಟು ಉದ್ದದ ಧ್ವಜಸ್ತಂಭಕ್ಕೆ ಇಷ್ಟು ಅಗಲ ಧ್ವಜ ಹಾಕಬೇಕೆಂದು ಇದೆ. ಅಧಿಕಾರಿಗಳು ಹಾರಿಸಿರುವ ಬಾವುಟ ಹಾರಾಡುತ್ತಿಲ್ಲ. ಅದನ್ನು ನೋಡಿ ನಮ್ಮ ಕಣ್ಣಲ್ಲಿ ನೀರು ಬರುತ್ತಿದೆ. ನಮ್ಮೂರಿಗೆ ಬೇರೆ ಜಿಲ್ಲೆಯಿಂದ ಯಾರು ಬಂದಿಲ್ಲ. ಪೊಲೀಸರು ನಮ್ಮೂರಿನವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಧಾರ್ಮಿಕ ಭಾವನೆ ವಿಚಾರ ಬಂದಾಗ ಗ್ರಾಮದ ಯುವಕರು ಆಕ್ರೋಶವಾಗಿದ್ದು ನಿಜ. ಆ ವೇಳೆ ಕೆಲವರು ಕಲ್ಲು ತೂರಿರಬಹುದು. ಆ ರೀತಿ ಘಟನೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಾರಣ. ಇದನ್ನೇ ನೆಪ ಮಾಡಿಕೊಂಡು ಲಾಠಿಚಾರ್ಜ್ ಮಾಡಿದರು. ಹೆಂಗಸರಿಗೂ ಈ ಪೊಲೀಸರು ಹೊಡೆದಿದ್ದಾರೆ. ಠಾಣೆಯಲ್ಲಿ ಯುವಕರನ್ನು ಕೂರಿಸಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್‌ನಲ್ಲಿ ಇದ್ದಾಗ ನಮ್ಮೂರಿಗೆ ಬಂದಿದ್ದಾರೆ. ಆಗ 101 ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿದ್ದೇವೆ. ಅಂದು ಅವರನ್ನು ಕರೆದು ಕನ್ನಡರಾಜ್ಯೋತ್ಸವ ಮಾಡಿದ್ದೇವೆ. ಅದನ್ನು ಮರೆತಿದ್ದೀರಾ ಸಿದ್ದರಾಮಯ್ಯ ಅವರೇ?. ಈ ಜಿಲ್ಲಾಡಳಿತ ನಾಳೆಯೇ ಶಾಂತಿ ಸಭೆ ಮಾಡಲಿ. ಈ ಮೂಲಕ ನಮ್ಮೂರಿನಲ್ಲಿ ಶಾಂತಿ ನೆಲಸುವಂತೆ ಮಾಡಿ. ಮೊದಲು ಈಗ ಆಗಿರುವ ಸಮಸ್ಯೆಯನ್ನು ಬಗೆಹರಿಸಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಿ. ನಮಗೆ ನ್ಯಾಯ ಹಾಗೂ ಶಾಂತಿ ಬೇಕು ಅಷ್ಟೇ ಎಂದು ಒತ್ತಾಯಿಸಿದರು.
ಸರ್ವಾನುಮತದಿಂದ ಒಪ್ಪಿಗೆ: ಗ್ರಾಪಂ ಸದಸ್ಯ ಶಿವಾನಂದ ಮಾತನಾಡಿ, ಗ್ರಾಪಂಗೆ ಮೊದಲು ಮನವಿ ಬಂತು. ಸರ್ವಾನುಮತದಿಂದ ಅದಕ್ಕೆ ಒಪ್ಪಿಗೆ ಕೊಟ್ಟೆವು. ಮೂರು ಸಭೆಯಲ್ಲಿ ಯಾವುದೇ ವಿರೋಧ ಬರಲಿಲ್ಲ. ಧ್ವಜ ಹಾರಿಸಿದ ನಂತರ ಇಒ ಬಂದರು. ಪಂಚಾಯಿತಿಗೆ ಅಧಿಕಾರ ಇದೆ, ನಾವು ಸಭೆಯಲ್ಲಿ ಒಪ್ಪಿಗೆ ಕೊಟ್ಟಿದ್ದೇವೆಂದು ಹೇಳಿದೆವು.ಆ ದಿನವೇ ಪಂಚಾಯಿತಿ ವಜಾ ಮಾಡಬಹುದಿತ್ತು. ಆಗ ಮಾಡಲಿಲ್ಲ. ಶಾಂತಿ ಸಭೆಗಾಗಿ ಒಂದು ವಾರ ಕಾಲಾವಕಾಶ ಕೇಳಿದೆವು. ಅದಕ್ಕೆ ಅವಕಾಶ ಕೊಡಲಿಲ್ಲ. ರಜಾ ದಿನದಲ್ಲಿ ಬಂದು ಬಾವುಟ ತೆಗೆಯುವ ಅವಕಾಶ ಇತ್ತಾ ಎಂದು ಪ್ರಶ್ನಿಸಿದರು.
ಪಂಚಾಯಿತಿಗೆ ಹೆಚ್ಚಿನ ಅಧಿಕಾರ ಎನ್ನುತ್ತೀರಿ. ಇಂತಹ ಅಧಿಕಾರ ಏಕೆ ಬೇಕು. ಆದೇಶದ ಪ್ರತಿ ಕೇಳಿದರೆ ಕೊಡಲು ಸಿದ್ಧರಿಲ್ಲ. ಪಂಚಾಯಿತಿ ಮಟ್ಟದಲ್ಲಿ ಸಭೆ ಮಾಡಿ ಶಾಂತಿಸಭೆ ಏಕೆ ಮಾಡಲಿಲ್ಲ. ಎರಡು ಸಭೆಯಲ್ಲಿ ಯಾವ ಧ್ವಜ ಹಾರಿಸಬೇಕು ಎಂದು ಚರ್ಚೆ ಆಗಿಲ್ಲ. ಸಭೆಯಲ್ಲಿ ಅನುಮೋದಿಸಿದ್ದನ್ನ ರದ್ದುಪಡಿಸುವ ಹಕ್ಕು ಪಿಡಿಒಗೆ ಇಲ್ಲ. ಕೆರಗೋಡು ಗ್ರಾಮದಲ್ಲಿ ಎಲ್ಲರೂ ಪಕ್ಷಾತೀತವಾಗಿದ್ದೇವೆ. ಹೊರಗಡೆ ರಾಜಕೀಯ ಮಾಡಿದರೂ, ಗ್ರಾಮದಲ್ಲಿ ರಾಜಕಾಣ ಮಾಡಲ್ಲ. ಶಿವರಾತ್ರಿಯಂದು ಊರಲ್ಲಿ ದೊಡ್ಡ ಹಬ್ಬ ಮಾಡುತ್ತೇವೆ. ಅದಕ್ಕೆ ಅಡಚಣೆ ಆಗಬಾರದು. ಹೀಗಾಗಿ ಜಿಲ್ಲಾಡಳಿತ ಈ ಕೂಡಲೇ ಗ್ರಾಮದಲ್ಲಿ ಶಾಂತಿ ಸಭೆ ಮಾಡಬೇಕು. ಈ ಮೂಲಕ ಗ್ರಾಮದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಈ ಪ್ರಕರಣದಲ್ಲಿ ರಾಜಕೀಯ ಬೆರೆತಿರುವುದು ಬೇಸರ ತಂದಿದೆ. ಮೂರು ಬಾರಿಯೂ ಪಂಚಾಯಿತಿ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರೂ ಒಪ್ಪಿಗೆ ನೀಡಿದ್ದರು. ಅಧಿಕಾರಿಗಳು ಆತುರದ ನಿರ್ಧಾರ ಮಾಡಿದ್ದರಿಂದ ಗಲಾಟೆ ಆಗಿದೆ. ಧ್ವಜ ಇಳಿಸುವುದಕ್ಕೂ ಶಾಸಕ ರವಿಕುಮಾರ್ ಗಣಿಗ ಅವರಿಗೂ ಸಂಬಂಧ ಇಲ್ಲ. ಸ್ತಂಭ ನಿರ್ಮಾಣಕ್ಕೆ ಅವರೂ ದೇಣಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದರು. ವಿರೋಧ ಪಕ್ಷದವರು ಬೇಕೆಂದು ಶಾಸಕ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಹನುಮಾನ್ ಧ್ವಜ ಹಾರಿಸಲು ನಮ್ಮೂರಿನ ಕಾಂಗ್ರೆಸ್ ಕಾರ್ಯಕರ್ತರ ಒಪ್ಪಿಗೆಯೂ ಇದೆ. ಅಧಿಕಾರಿಗಳು ಶಾಂತಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಬೇಕು. ಮತ್ತೆ ಅದೇ ಜಾಗದಲ್ಲಿ ಹನುಮಾನ್ ಧ್ವಜ ಹಾರಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದರು.