

ನವದೆಹಲಿ: ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೈನ್ ಮತ್ತು ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಹಾಗೂ ಆರ್‌ಸಿಬಿ ತಂಡದ ಮಾಜಿ ಕೋಚ್ ಸೈಮನ್ ಕಾಟಿಚ್ ಮುಂಬರುವ ಐಪಿಎಲ್ ಟೂರ್ನಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ತರಬೇತಿ ಬಳಗವನ್ನು ಕೂಡಿಕೊಂಡಿದ್ದಾರೆ. ಬಹುತೇಕ ಹೊಸ ಸಿಬ್ಬಂದಿ ಬಳಗವನ್ನು ಸನ್‌ರೈಸರ್ಸ್ ನೇಮಿಸಿದೆ.
ಕಳೆದ ಆವೃತ್ತಿಯವರೆಗೆ ವೀಕ್ಷಕವಿವರಣೆಕಾರರಾಗಿ ಐಪಿಎಲ್ ಸಂಪರ್ಕದಲ್ಲಿದ್ದ 52 ವರ್ಷದ ಲಾರಾ ಇದೀಗ ಸನ್‌ರೈಸರ್ಸ್ ತಂಡದ ಬ್ಯಾಟಿಂಗ್ ಕೋಚ್ ಮತ್ತು ಕಾರ್ಯತಂತ್ರಗಳ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ ಆಡಿರುವ ಡೇಲ್ ಸ್ಟೈನ್, ವೇಗದ ಬೌಲಿಂಗ್ ಕೋಚ್ ಆಗಿ ಸನ್‌ರೈಸರ್ಸ್ ಬಳಗ ಸೇರಿಕೊಂಡಿದ್ದಾರೆ. ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್ ಸ್ಪಿನ್ ಬೌಲಿಂಗ್ ಕೋಚ್ ಆಗಿ ಮುಂದುವರಿದಿದ್ದಾರೆ. ಎನ್‌ಸಿಎಗೆ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಮೆಂಟರ್ ಹುದ್ದೆ ತೊರೆದಿದ್ದಾರೆ.
ಆಸ್ಟ್ರೇಲಿಯಾದ ಟಾಮ್ ಮೂಡಿ ಮತ್ತೆ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಈ ಮುನ್ನ 2013ರಿಂದ 2019ರವರೆಗೆ 7 ವರ್ಷಗಳ ಕಾಲ ತಂಡದ ಕೋಚ್ ಆಗಿದ್ದ 56 ವರ್ಷದ ಮೂಡಿ, ಕಳೆದ ಆವೃತ್ತಿಯಲ್ಲಿ ತಂಡದ ಕ್ರಿಕೆಟ್ ನಿರ್ದೇಶಕರಾಗಿದ್ದರು. ಸೈಮನ್ ಕಾಟಿಚ್ ಸಹಾಯಕ ಕೋಚ್ ಆಗಿದ್ದರೆ, ಭಾರತದ ಮಾಜಿ ಬ್ಯಾಟರ್ ಹೇಮಂಗ್ ಬದಾನಿ ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಸನ್‌ರೈಸರ್ಸ್ ತಂಡ ನಾಯಕ ಕೇನ್ ವಿಲಿಯಮ್ಸನ್ ಮತ್ತು ಕಾಶ್ಮೀರಿ ಕ್ರಿಕೆಟಿಗರಾದ ಉಮ್ರಾನ್ ಮಲಿಕ್ ಹಾಗೂ ಅಬ್ದುಲ್ ಸಮದ್‌ರನ್ನು ರಿಟೇನ್ ಮಾಡಿಕೊಂಡಿದೆ. ಮುಂಬರುವ ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿಸಲು ಸನ್‌ರೈಸರ್ಸ್ ತಂಡ 68 ಕೋಟಿ ರೂ. ಬಜೆಟ್ ಉಳಿಸಿಕೊಂಡಿದೆ.