ಲಂಕಾ ಪ್ರೀಮಿಯರ್​ ಲೀಗ್​ ದಿಢೀರ್​ ಮುಂದೂಡಿಕೆ, ಕ್ವಾರಂಟೈನ್​ ನಿಯಮವೇ ಕಾರಣ!

ipl lpl
Published on

ಕೊಲಂಬೊ: ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್​ ಲೀಗ್​ (ಎಲ್​ಪಿಎಲ್​) ಟಿ20 ಟೂರ್ನಿಯನ್ನು ಶ್ರೀಲಂಕಾ ಕ್ರಿಕೆಟ್​ ಮಂಡಳಿ (ಎಸ್​ಎಲ್​ಸಿ) ಮಂಗಳವಾರ ದಿಢೀರ್​ ಮುಂದೂಡಿದೆ. ದ್ವೀಪರಾಷ್ಟ್ರದಲ್ಲಿ ಕರೊನಾ ವೈರಸ್​ ಕಾರಣದಿಂದಾಗಿ ವಿದೇಶಿ ಆಟಗಾರರು 14 ದಿನಗಳ ಕಡ್ಡಾಯ ಕ್ವಾರಂಟೈನ್​ಗೆ ಒಳಪಡಬೇಕಾದ ನಿಬಂಧನೆಯಿಂದಾಗಿ ಎಲ್​ಪಿಎಲ್​ ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಟೂರ್ನಿ ಆಗಸ್ಟ್​ 28ರಂದು ಆರಂಭಗೊಳ್ಳುವುದೆಂದು ನಿಗದಿಯಾಗಿತ್ತು. ಆದರೆ ವಿದೇಶಿ ಆಟಗಾರರು 14 ದಿನಗಳ ಕ್ವಾರಂಟೈನ್​ಗೆ ಒಳಪಡುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿರುವುದರಿಂದ, ಟೂರ್ನಿಗೆ ಪ್ರಮುಖ ವಿದೇಶಿ ಆಟಗಾರರು ಅಲಭ್ಯವಾಗುವ ಭೀತಿ ಕಾಣಿಸಿಕೊಂಡಿತ್ತು. ಅಲ್ಲದೆ ಟೂರ್ನಿಗೆ ಇನ್ನು ಕೇವಲ 17 ದಿನಗಳು ಮಾತ್ರ ಬಾಕಿ ಉಳಿದಿದ್ದ ಕಾರಣ, ಕ್ವಾರಂಟೈನ್​ ನಿಬಂಧನೆಗಳಿಂದಾಗಿ ಟೂರ್ನಿಯನ್ನು ಆಗಸ್ಟ್​ ಅಂತ್ಯದ ವೇಳೆಗೆ ಆರಂಭಿಸುವುದು ಅಸಾಧ್ಯವೆನಿಸಿತ್ತು.

ಎಲ್​ಪಿಎಲ್​ ಟೂರ್ನಿ ಇನ್ನು ಐಪಿಎಲ್​ ನಂತರದಲ್ಲಿ ನವೆಂಬರ್​ನಲ್ಲಿ ಆಯೋಜಿಸಲಾಗುವುದು ಎಂದು ಎಸ್​ಎಲ್​ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ತಿಳಿಸಿದ್ದಾರೆ. ಐಪಿಎಲ್​ ಟೂರ್ನಿ ನವೆಂಬರ್​ 10ರಂದು ಮುಕ್ತಾಯಗೊಳ್ಳಲಿದ್ದರೆ, ಎಲ್​ಪಿಎಲ್​ ಟೂರ್ನಿ ನವೆಂಬರ್​ ಮಧ್ಯಭಾಗದ ನಂತರ ಮರುನಿಗದಿಯಾಗುವ ನಿರೀಕ್ಷೆ ಇದೆ.

5 ತಂಡಗಳು ಆಡಬೇಕಿರುವ ಎಲ್​ಪಿಎಲ್​ ಟೂರ್ನಿಯ 23 ಪಂದ್ಯಗಳು, ಶ್ರೀಲಂಕಾದ 4 ಅಂತಾರಾಷ್ಟ್ರೀಯ ಕ್ರಿಕೆಟ್​ ಕ್ರೀಡಾಂಗಣಗಳಲ್ಲಿ ನಿಗದಿಯಾಗಿದ್ದವು. ಟೂರ್ನಿಯಲ್ಲಿ ಒಟ್ಟು 93 ವಿದೇಶಿ ಕ್ರಿಕೆಟಿಗರು ಪಾಲ್ಗೊಳ್ಳುವ ನಿರೀಕ್ಷೆ ಇಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net