ಭೂಕುಸಿತದಿಂದ ನದಿಗೆ ಬಿದ್ದ ಎರಡು ಬಸ್​; ಕಣ್ಮರೆಯಾದ 63 ಮಂದಿಗಾಗಿ ಹುಡುಕಾಟ

Untitled-design-2024-07-12T131012.279
Published on

ಕಠ್ಮಂಡು: ನೇಪಾಳದ ಮದನ್-ಆಶೀರ್ ಹೆದ್ದಾರಿಯಲ್ಲಿ ಶುಕ್ರವಾರ (ಜುಲೈ 12) ಬೆಳಗ್ಗೆ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದಾಗಿ 63 ಜನರು ಪ್ರಯಾಣಿಸುತ್ತಿದ್ದ ಎರಡು ಬಸ್​​ಗಳು ತ್ರಿಶೂಲಿ ನದಿಗೆ ಬಿದ್ದು, ನೀರಿನ ರಭಸಕ್ಕೆ ನದಿಯಲ್ಲಿ ಬಸ್​​ಗಳು ಕೊಚ್ಚಿಹೋಗಿವೆ.

ಏಂಜೆಲ್ ಬಸ್ ಮತ್ತು ಗಣಪತಿ ಡಿಲಕ್ಸ್ ಬಸ್​​​ಗಳಲ್ಲಿ ಇದ್ದಂತಹ ಭಾರತೀಯರು ಸೇರಿದಂತೆ 63 ಮಂದಿ ಪ್ರಯಾಣಿಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬೆಳಗಿನ ಜಾವ 3:30ರ ಸುಮಾರಿಗೆ ಭೂಕುಸಿತವು ಉಂಟಾಗಿ ಬಸ್​​ಗಳು ನದಿಗೆ ಬಿದ್ದಿವೆ. ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಾಪತ್ತೆಯಾದ ಬಸ್‌ಗಳನ್ನು ಹುಡುಕುವ ನಮ್ಮ ಪ್ರಯತ್ನಗಳಿಗೆ ಮಳೆ ಅಡ್ಡಿಯುಂಟುಮಾಡುತ್ತಿದೆ ಎಂದು ಚಿತ್ವಾನ್‌ನ ಮುಖ್ಯ ಜಿಲ್ಲಾ ಅಧಿಕಾರಿ ಇಂದ್ರದೇವ್ ಯಾದವ್ ತಿಳಿಸಿರುವುದಾಗಿ ಎಎನ್​ಐ ವರದಿ ಮಾಡಿದೆ.

ನೇಪಾಳ ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭೂಕುಸಿತದಿಂದಾಗಿ ನಾರಾಯಣಘಾಟ್-ಮುಗ್ಲಿಂಗ್ ರಸ್ತೆ ವಿಭಾಗದಲ್ಲಿ ಶಿಲಾಖಂಡರಾಶಿಗಳು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ರಕ್ಷಣಾ ಕಾರ್ಯಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಭಾವೇಶ್ ರಿಮಲ್ ತಿಳಿಸಿದ್ದಾರೆ.

ಪ್ರಯಾಣಿಕರನ್ನು ಹುಡುಕಲು ಮತ್ತು ಪರಿಣಾಮಕಾರಿಯಾಗಿ ರಕ್ಷಿಸಲು ಗೃಹ ಆಡಳಿತ ಸೇರಿದಂತೆ ಸರ್ಕಾರದ ಎಲ್ಲಾ ಏಜೆನ್ಸಿಗಳಿಗೆ ನಿರ್ದೇಶಿಸಿರುವುದಾಗಿ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ನೇಪಾಳಿ ಸೇನೆಯು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಹಂಚಿಕೊಂಡಿದೆ.

ಅಲ್ಲದೆ ಹವಾಮಾನ ವೈಪರಿತ್ಯದಿಂದಾಗಿ ಕಠ್ಮಂಡುವಿನಿಂದ ಕಠ್ಮಂಡುವಿನಿಂದ ಭರತ್‌ಪುರಕ್ಕೆ ತೆರಳುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ನೇಪಾಳದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ನೇಪಾಳದಿಂದ ಬಿಡುಗಡೆಯಾದ ನೀರಿನ ಪರಿಣಾಮ ಭಾರತದಲ್ಲೂ ಕಾಣುತ್ತಿದೆ.

ಮಾನ್ಸೂನ್ ಆರಂಭವಾದಾಗಿನಿಂದ, ನೇಪಾಳದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 62 ಜನರು ಮೃತಪಟ್ಟಿದ್ದಾರೆ ಮತ್ತು 90 ಜನರು ಗಾಯಗೊಂಡಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಕಳೆದ ವಾರ ಮಾಹಿತಿ ನೀಡಿದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net