

ಗುರುಪುರ : ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಬೆಳ್ಳಿಬೆಟ್ಟು ಬಸ್ ತಂಗುದಾಣದ ಬಳಿ ಬುಧವಾರ ಸಂಜೆ ಗುಡ್ಡ ಕುಸಿದ ಪರಿಣಾಮ ಹೆದ್ದಾರಿಯಲ್ಲಿ ಒಂದೂವರೆ ತಾಸು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಗುಡ್ಡದ ಮಣ್ಣು ಹಾಗೂ ಕೆಸರು ನೀರು ಹೆದ್ದಾರಿಯಲ್ಲಿ ಹರಿದರೆ, ಕೆಲವು ಮರಗಳು ಹೆದ್ದಾರಿಗೆ ಅಡ್ಡಲಾಗಿ ಬಿದ್ದವು. ಕಾರ್ಯಾಚರಣಾ ತಂಡ ಸಮರೋಪದಿಯಲ್ಲಿ ಮರ ತುಂಡರಿಸಿ ತೆರವುಗೊಳಿಸಿ ಹೆದ್ದಾರಿ ವಾಹನ ಸಂಚಾರ ಸುಗಮಗೊಳಿಸಿದೆ.
ಗುರುಪುರ ಕೈಕಂಬದತ್ತ ಸಾಗುವ ಹೆದ್ದಾರಿಯ ಬದಿಯಲ್ಲಿ ಬೆಳ್ಳಿಬೆಟ್ಟು ಎಂಬಲ್ಲಿ ಗುಡ್ಡದ ಮಣ್ಣು ತೆಗೆಯಲಾದ ಪ್ರದೇಶದಲ್ಲೇ ಎತ್ತರದ ಗುಡ್ಡದಿಂದ ಮಣ್ಣು ಕುಸಿಯಲಾರಂಭಿಸಿದೆ. ಈ ವೇಳೆ ಹೆದ್ದಾರಿಗೆ ಮರಗಳು ಉರುಳಿಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.
ಧಾರಾಕಾರ ಮಳೆಗೆ ಗುಡ್ಡದಲ್ಲಿ ನೀರಿನ ಒರತೆ ಹೆಚ್ಚಾಗಿ ಹೆದ್ದಾರಿಯತ್ತ ನೀರು ಹರಿಯುತ್ತಿದೆ. ಸ್ಥಳಕ್ಕಾಗಮಿಸಿದ ಬಜ್ಪೆ ಪೊಲೀಸರು ಮರ ತೆರವು ಕಾರ್ಯಾಚರಣೆ ವೇಳೆ ಸುರಕ್ಷತಾ ಕ್ರಮ ಕೈಗೊಂಡಿದ್ದರು. ಗುರುಪುರ ಹೋಬಳಿ ಉಪತಹಸೀಲ್ದಾರ್ ಶಿವಪ್ರಸಾದ್ ಅವರು ಪರಿಶೀಲನೆ ನಡೆಸಿದರು. ಗುರುಪುರ ಸುತ್ತಮುತ್ತ ವಿದ್ಯುತ್ ಕೈಕೊಟ್ಟಿದೆ.