
ಮಂಡ್ಯ: ಐದು ಕೋಟಿ ರೂ ವೆಚ್ಚದಲ್ಲಿ ಬೂದನೂರು ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿತಾಣವಾಗಿ ಮಾಡಲಾಗುವುದು. ಕೆರೆಯ ಸುತ್ತಲೂ ವಾಯು ವಿಹಾರ ಉದ್ಯಾನ ನಿರ್ಮಿಸಲಾಗುವುದು. ಅಂತೆಯೇ ಇನ್ನೊಂದು ವಾರದಲ್ಲಿ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಹಳೇಬೂದನೂರು, ಕಟ್ಟೆದೊಡ್ಡಿ, ಕಾಗೆಹಳ್ಳದದೊಡ್ಡಿ, ಕನ್ನಲಿ ಮತ್ತು ಬಿ.ಗೌಡಗೆರೆ ಗ್ರಾಮಕ್ಕೆ ನೀರನ್ನೊದಗಿಸುವ 4.95 ಕೋಟಿ ರೂ ವೆಚ್ಚದಲ್ಲಿ 18ನೇ ವಿತರಣಾ ನಾಲೆ ಮತ್ತು ಸೇತುವೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ 30 ರಿಂದ 40 ವರ್ಷದಿಂದ ಈ ಭಾಗದ ನಾಲೆಗಳು ಅಭಿವೃದ್ಧಿಯನ್ನೇ ಕಂಡಿರಲಿಲ್ಲ. ಮಂಡ್ಯ ವಿಧಾನಸಭಾ ಕ್ಷೇತ್ರದ ನಾಲೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 200 ಕೋಟಿ ರೂ ನೀಡಿದ್ದು, ಈ ಪೈಕಿ ಬೂದನೂರು ಭಾಗದ ನಾಲೆಗಳ ಅಭಿವೃದ್ಧಿಗೆ 10 ಕೋಟಿ ರೂ ನೀಡಲಾಗಿದೆ ಎಂದು ತಿಳಿಸಿದರು.
ಹಳೇಬೂದನೂರು ಗ್ರಾಮದಿಂದ ಕೊನೆ ಭಾಗದ ಗ್ರಾಮಗಳಿಗೆ ನೀರು ಸರಾಗವಾಗಿ ಹರಿಯಲಿ ಎಂಬ ಉದ್ದೇಶದಿಂದ 4.95 ಕೋಟಿ ರೂ ವೆಚ್ಚದಲ್ಲಿ ನಾಲಾ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ನಾಲೆ ಅಭಿವೃದ್ಧಿಯಿಂದ ಈ ಭಾಗದ ರೈತರು ಹಾಗೂ ಗ್ರಾಮಸ್ಥರಿಗೆ ಸಾಕಷ್ಟು ಲಾಭವಾಗಲಿದೆ. ಮುಖ್ಯವಾಗಿ ನೀರಿನ ವಿತರಣಾ ವ್ಯವಸ್ಥೆ ಸುಧಾರಣೆಗೊಳ್ಳಲಿದೆ. ಇದರಿಂದ ಜಲಾನಯನ ವ್ಯವಸ್ಥೆ ಸಮರ್ಪಕವಾಗಿ ನಡೆದು ಕೃಷಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಭಿವೃದ್ಧಿ ದೃಷ್ಟಿಯಿಂದ ಮುಂದೆ ನಡೆಯಲಿರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದರು.
ಮನ್‌ಮುಲ್ ಅಧ್ಯಕ್ಷ ಯು.ಎಸ್.ಶಿವಕುಮಾರ್(ಶಿವಪ್ಪ), ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮೈಷುಗರ್ ಮಾಜಿ ಅಧ್ಯಕ್ಷ ಬಿ.ಸಿ.ಶಿವಾನಂದ, ಮುಖಂಡ ಬಿ.ಟಿ.ಚಂದ್ರಶೇಖರ್ ಇತರರಿದ್ದರು.