

ಪಡುಬಿದ್ರಿ: ಹೇರೂರು ಗ್ರಾಮಸ್ಥರ ಪ್ಲಾಟಿಂಗ್ ಸಮಸ್ಯೆಯನ್ನು ಹಂತಹಂತವಾಗಿ ಬಗೆಹರಿಲಾಗುತ್ತಿದ್ದು, ಎಲ್ಲರಿಗೂ ಪಹಣಿ ದೊರಕಿಸಿಕೊಡಲಾಗುವುದು. ಸವಲತ್ತು, ಸರ್ಕಾರಿ ಸೌಲಭ್ಯಗಳನ್ನು ಎಲ್ಲರಿಗೂ ತಲುಪಿಸುವ ಗ್ರಾಪಂ ಪ್ರಯತ್ನಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭರವಸೆ ನೀಡಿದರು.
ಮಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸವಲತ್ತು ವಿತರಣೆ, 92 ಹೇರೂರು ಗ್ರಾಮದ ದರ್ಖಾಸ್ತು ಪೋಡಿ ದುರಸ್ತಿ ಸರಳೀಕೃತ ಕಾರ್ಯದ ಹೊಸ ಪಹಣಿ ಮತ್ತು ಪೋಡಿ ನಕ್ಷೆ ವಿತರಣಾ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಮಜೂರು ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಪ್ರತಿಭಾ ಆರ್, ತಾಪಂ. ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಸರ್ವೇ ಮೇಲ್ವಿಚಾರಕ ನಾರಾಯಣ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ವನಿತಾ, ಪಿಡಿಒ ವಿಲಾಸಿನಿ ಉಪಸ್ಥಿತರಿದ್ದರು. ಗ್ರಾಪಂ ಉಪಾಧ್ಯಕ್ಷೆ ಮಂಜುಳಾ ಆಚಾರ್ಯ ಸ್ವಾಗತಿಸಿದರು. ಸದಸ್ಯ ಭಾಸ್ಕರ್ ಕುಮಾರ್ ವಂದಿಸಿದರು. ಕಾರ್ಯದರ್ಶಿ ಪ್ರಸಾದ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.