

ಆದರೆ, 2022 ವರ್ಷ ಬಾಲಿವುಡ್ ಪಾಲಿಗೆ ದುರಂತಮಯವಾಗಿದೆ. ಹಿಂದಿ ಚಿತ್ರೋದ್ಯಮವೇ ಈ ವರ್ಷ ಎಡಮಗ್ಗುಲಲ್ಲಿ ಎದ್ದಿದೆ. ದಕ್ಷಿಣ ಭಾರತದ ಚಿತ್ರಗಳು ಒಂದಾದ ಮೇಲೊಂದರಂತೆ ಅಖಿಲ ಭಾರತ ಮಟ್ಟದಲ್ಲಿ ಸೂಪರ್ಹಿಟ್ಗಳಾಗಿ ಜಾಗತಿಕ ಗಮನ ಸೆಳೆಯುತ್ತಿದ್ದರೆ, ಹಿಂದಿ ಚಿತ್ರಗಳು ನೆಲ ಕಚ್ಚುತ್ತಿವೆ. ಕೆಜಿಎಫ್ -2, ಆರ್ಆರ್ಆರ್, ಪುಷ್ಪಾ, ವಿಕ್ರಮ್ ಚಾರ್ಲಿ, ಸದ್ಯ ವಿಕ್ರಾಂತ್ ರೋಣ ಮೊದಲಾದ ಚಿತ್ರಗಳು ಪ್ರಾದೇಶಿಕ ಚೌಕಟ್ಟು ಮೀರಿ ಬಹುಬಾಷಾ ಮಾರುಕಟ್ಟೆಗಳಲ್ಲಿ ಜಯಭೇರಿ ಬಾರಿಸಿದ್ದರೆ, ಬಾಲಿವುಡ್ ಚಿತ್ರಗಳು ಬೋರಲು ಬಿದ್ದಿವೆ. ಈ ವರ್ಷದ ಬಹುನಿರೀಕ್ಷಿತ 28 ಚಿತ್ರಗಳಲ್ಲಿ ಕೇವಲ ಮೂರು ಚಿತ್ರಗಳು ಸಾಧಾರಣ ಪ್ರತಿಕ್ರಿಯೆ ಪಡೆದುಕೊಂಡಿದ್ದರೆ, ಉಳಿದ 25 ದಯನೀಯ ಸೋಲು ಕಂಡಿವೆ. ಅಕ್ಷಯ್ ಕುಮಾರ್ರ ‘ಬಚ್ಚನ್ ಪಾಂಡೆ’, ‘ಪೃಥ್ವಿರಾಜ್ ಚೌಹಾನ್’, ಅಮಿತಾಬ್ ಬಚ್ಚನ್, ಅಜಯ್ ದೇವಗನ್ರ ‘ರನ್ವೇ 34’, ರಣವೀರ್ ಸಿಂಗ್ರ ‘ಜಯೇಶ್ ಬಾಯ್ ಜೋರ್ದಾರ್’, ರಣಬೀರ್ ಕಪೂರ್, ಸಂಜಯ್ ದತ್ರ ‘ಶಂಷೇರಾ’, ಆಲಿಯಾ ಭಟ್ರ ‘ಗಂಗೂಬಾಯಿ ಕಥಿಯಾವಾಡಿ’, ಕಂಗನಾ ರನೌತ್ರ ‘ಧಾಕಡ್’ ಹೀಗೆ ಒಂದೇ ಎರಡೇ... ಬಂದ ಚಿತ್ರಗಳೆಲ್ಲವೂ ಹೇಳ ಹೆಸರಿಲ್ಲದಂತೆ ಮಾಯವಾಗಿವೆ. ಹಾಗೆ ನೋಡಿದರೆ, ಈ ವರ್ಷ ಬಾಲಿವುಡ್ನಲ್ಲಿ ಹೆಸರುಗಳಿಸಿದ್ದು ‘ಕಶ್ಮೀರ್ ಫೈಲ್ಸ್’ ಚಿತ್ರವೊಂದೇ. ವಿಪರ್ಯಾಸವೆಂದರೆ, ‘ಕಶ್ಮೀರ್ ಫೈಲ್ಸ್’ ಚಿತ್ರದ ವಿರುದ್ಧ ಬಾಲಿವುಡ್ನ ಬಹುದೊಡ್ಡ ಪ್ರಭಾವಿ ಲಾಬಿ ಅಪಪ್ರಚಾರ ನಡೆಸಿತ್ತು. ಚಿತ್ರದ ನಿರ್ಮಾಣ ಹಂತದಿಂದ, ಬಿಡುಗಡೆಯವರೆಗೆ ಸಾಕಷ್ಟು ಅಡ್ಡಿ-ಆತಂಕ ಸೃಷ್ಟಿಸಿತ್ತು. ಆದರೆ, ಬಹುಪಾಲು ದೇಶವಾಸಿಗಳು ಚಿತ್ರವನ್ನು ಭಾವನಾತ್ಮಕ ಕಾರಣಕ್ಕೆ ಮೆಚ್ಚಿಕೊಂಡು ಈ ಕಾಲಘಟ್ಟದ ಅತ್ಯಂತ ಯಶಸ್ವಿ ಚಿತ್ರವನ್ನಾಗಿಸಿದರು.
ಚಿತ್ರರಂಗವೆನ್ನುವುದು ಸೃಜನಶೀಲ ಮಾಧ್ಯಮ. ನಿಜಜೀವನದಲ್ಲಿ ಅಸಾಧ್ಯವಾದು ದನ್ನು ಕಲಾತ್ಮಕವಾಗಿ, ರಮ್ಯವಾಗಿ ತೋರಿಸಿ, ಸಮಾಜದಲ್ಲಿ ಸಕಾರಾತ್ಮಕತೆಯನ್ನು, ಬದುಕುವ ಭರವಸೆಯನ್ನು ಬಿತ್ತುವುದು ಚಿತ್ರರಂಗಗಳ ಸಾಮಾಜಿಕ ಜವಾಬ್ದಾರಿಗಳಲ್ಲೊಂದು. ಆದರೆ, ಬಾಲಿವುಡ್ ಚಿತ್ರಗಳು ಮೊದಲಿನಿಂದಲೂ ಕೆಲವು ವರ್ಗ, ಸಮುದಾಯಗಳನ್ನು ಓಲೈಸುವ, ಹಿಂದು ಧರ್ಮ, ದೇವರು, ಸಂಸ್ಕಾರ, ಆಚಾರ-ವಿಚಾರಗಳನ್ನು ಅವಹೇಳನ ಮಾಡುವುದನ್ನೇ ಕ್ರಿಯೆಟಿವಿಟಿ ಎಂದು ಬಿಂಬಿಸುವ ಕೆಲಸ ಮಾಡಿಕೊಂಡು ಬಂದಿದೆ. ಯಾವುದೇ ಬಾಲಿವುಡ್ ಚಿತ್ರಗಳನ್ನು ನೋಡಿದರೂ, ಅಲ್ಲಿ ಕೆಲವರು ಯಾವಾಗಲೂ ಕರುಣಾಳುಗಳಾಗಿರುತ್ತಾರೆ. ಆದರೆ, ಸಾಧು-ಸಂತರು, ಸನ್ಯಾಸಿಗಳನ್ನು ಜನರ ದಾರಿ ತಪ್ಪಿಸುವವರಂತೆ, ಕಾಮಪಿಪಾಸುಗಳಂತೆ, ಡ್ರಗ್ಸ್, ಅಪರಾಧ, ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರಂತೆ ಚಿತ್ರಿಸಲಾಗುತ್ತದೆ. ಇವರ ಕಲ್ಪನೆಯ ಪ್ರಕಾರ ಕಾಳಿ ಸಿಗರೇಟ್ ಸೇದುತ್ತಾಳೆ, ಶಿವ ಜನರ ಕಾಲ ಸಂದಿ ನುಸುಳುತ್ತಾನೆ, ಈ ಚಿತ್ರಗಳಲ್ಲಿ ಹಾಸ್ಯವೆಂದರೆ ಹಿಂದು ಆಚಾರ ವಿಚಾರಗಳು, ನಂಬಿಕೆಗಳ ಅವಹೇಳನ ಎಂಬಂತಾಗಿಬಿಟ್ಟಿದೆ.
ದೇಶದಲ್ಲಿ ಡಬ್ಬಿಂಗ್ ಕಾನೂನುಬದ್ಧಗೊಂಡ ಬಳಿಕ ಚಿತ್ರರಂಗದ ವ್ಯಾಪ್ತಿ ಮತ್ತು ಸಾಧ್ಯತೆಗಳು ವಿಸ್ತಾರಗೊಂಡಿವೆ. ಇದು ಪ್ರಾದೇಶಿಕ ಭಾಷೆಗಳ ಅತ್ಯುತ್ತಮ ಚಿತ್ರಗಳನ್ನು ಕದ್ದು, ರೀಮೇಕ್ ಮಾಡಿ ಮೆರೆಯುತ್ತಿದ್ದ ಬಾಲಿವುಡ್ ಪಾಲಿಗೆ ಚರಮಗೀತೆಯಾಗಿದ್ದರೆ, ಉಳಿದವರ ಪಾಲಿಗೆ ಹೊಸ ಜಗತ್ತೇ ತೆರೆದುಕೊಂಡಿದೆ. ಎರಡು ಭಾಗಗಳಲ್ಲಿ ತೆರೆ ಕಂಡ ‘ಬಾಹುಬಲಿ’ ಚಿತ್ರದ ಜಾಗತಿಕ ಯಶಸ್ಸು ಹಾಕಿಕೊಟ್ಟ ಮೇಲ್ಪಂಕ್ತಿ ಅನುಸರಿಸಿ ಈಗ ‘ಅಖಿಲ ಭಾರತ ಮಟ್ಟದಲ್ಲಿ’ ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ಯಶ್, ಸುದೀಪ್, ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್, ಪ್ರಭಾಸ್ ತಮ್ಮ ರಾಜ್ಯಗಳ ಪ್ರಭಾವಲಯ ದಾಟಿ ಭಾರತೀಯ ಸೂಪರ್ಸ್ಟಾರ್ಗಳಾಗಿದ್ದಾರೆ. ಈ ಸ್ಟಾರ್ಗಳ ಅಬ್ಬರಕ್ಕೆ ಬಾಲಿವುಡ್ನ ಸಾಂಪ್ರದಾಯಿಕ ಸ್ಟಾರ್ಗಳು ಗಲಿಬಿಲಿಗೆ ಸಿಲುಕಿದ್ದಾರೆ. ಸಲ್ಮಾನ್ ಖಾನ್ರ ಚಿತ್ರಗಳು 2019ರ ನಂತರ ಬಿಡುಗಡೆಗೊಂಡಿಲ್ಲ. ಅವರ ‘ಭಾಯಿಜಾನ್’ ಮತ್ತು ‘ಟೈಗರ್ 3’ ಚಿತ್ರಗಳ ನಿರ್ಮಾಣ ತೆವಳುತ್ತಿವೆ. ಶಾರುಖ್ ಖಾನ್ರ ‘ಝೀರೋ’ ಯಶ್ರ ಕೆಜಿಎಫ್ ಎದುರು ಝೀರೋ ಆದ ಬಳಿಕ ಕಣ್ಮರೆಯಾಗಿದ್ದಾರೆ. ಅವರು ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದರೂ ಬಿಡುಗಡೆಯ ಸುದ್ದಿಯಿಲ್ಲ. ಆಮೀರ್ ಖಾನ್ರ ‘ಲಾಲ್ ಸಿಂಗ್ ಛಡ್ಡಾ’ ಯಾವಾಗಲೋ ಬಿಡುಗಡೆ ಆಗಬೇಕಿತ್ತಾದರೂ, ‘ಕೆಜಿಎಫ್-2’, ‘ಆರ್ಆರ್ಆರ್’, ‘ಪುಷ್ಪ’ ಅಬ್ಬರಕ್ಕೆ ಬೆದರಿ ಮುಂದೂಡಿಕೆಯಾಗುತ್ತ ಕೊನೆಗೂ ಆ.11ಕ್ಕೆ ಬಿಡುಗಡೆ ನಿಗದಿ ಆಗಿದೆ. ಆದರೆ, ಚಿತ್ರ ತೆರೆಗೆ ಅಪ್ಪಳಿಸುವ ಮುನ್ನವೇ ನೆಲಕ್ಕೆ ಅಪ್ಪಳಿಸುವ ಭೀತಿ ತಲೆದೋರಿದೆ.
ಚಿತ್ರರಂಗದಲ್ಲಿ ಮೌತ್ ಪಬ್ಲಿಸಿಟಿ ಅಥವಾ ಮಾತಿನ ಪ್ರಚಾರಕ್ಕೆ ಬಹಳ ಮಹತ್ವವಿದೆ. ಚಿತ್ರ ನೋಡಿದವರು ಮೆಚ್ಚಿಕೊಂಡು, ಒಬ್ಬರಿಂದ ಇನ್ನೊಬ್ಬರಿಗೆ ಚಿತ್ರದ ಬಗ್ಗೆ ಸದಭಿಪ್ರಾಯ ಹಬ್ಬಿ ಚಿತ್ರ ಯಶಸ್ವಿಯಾಗುವ ಸಂದರ್ಭ ಅದು. ಅನೇಕ ಬಾರಿ ಚಿತ್ರ ಬಿಡುಗಡೆಯಾದ ವಾರ ಅಷ್ಟೇನು ರೆಸ್ಪಾನ್ಸ್ ಸಿಕ್ಕಿರುವುದಿಲ್ಲ. ವಿಮರ್ಶೆಗಳೂ ಅದ್ಭುತ ಎಂದೇನೂ ಹೊಗಳಿರುವುದಿಲ್ಲ. ಆದರೆ, ವೀಕ್ಷಕರು ಮೆಚ್ಚಿಕೊಂಡು ಬಾಯಿಂದ ಬಾಯಿಗೆ ಹರಡಿ ಚಿತ್ರ ಸೂಪರ್ ಹಿಟ್ ಆದ ನೂರಾರು ಉದಾಹರಣೆಗಳಿವೆ. ಕನ್ನಡದಲ್ಲೇ ‘ಮುಂಗಾರು ಮಳೆ’, ‘ಸಿಂಪಲ್ ಆಗ್ ಒಂದು ಲವ್ಸ್ಟೋರಿ’, ‘ಲವ್ ಮಾಕ್ಟೇಲ್’ ಮೊದಲಾದ ‘ಮೈಲಿಗಲ್ಲು ಚಿತ್ರಗಳು’ ಸಾವಿರಾರು ಸ್ಕ್ರೀನ್ಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ಸಕ್ಸಸ್ ಆಗಿದ್ದೇನೂ ಅಲ್ಲ. ಮೊದಲ ವಾರದಲ್ಲಿ ನೀರಸ ಪ್ರತಿಕ್ರಿಯೆ ಪಡೆದಿದ್ದ ಈ ಚಿತ್ರಗಳು ನಿಧಾನವಾಗಿ ಸೂಪರ್ಡೂಪರ್ ಹಿಟ್ಗಳೆನಿಸಿದವು.
ಆಮೀರ್ ಖಾನ್ರ ‘ಲಾಲ್ ಸಿಂಗ್ ಛಡ್ಡಾ’ ಚಿತ್ರ ಮುಂದಿನ ಗುರುವಾರ (ಆ.11) ಬಿಡುಗಡೆಗೆ ನಿಗದಿಯಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ವಿರುದ್ಧ ಬಾಯ್ಕಾಟ್ ಅಭಿಯಾನ ಬಹಳ ಜೋರಾಗಿ ನಡೆಯುತ್ತಿದೆ.
ಚಲನಚಿತ್ರಗಳಲ್ಲಿ ಮಾನವತಾವಾದಿಗಳಾಗಿ, ಸಮಾಜೋದ್ಧಾರಕರಾಗಿ, ದೇವತಾ ಮನುಷ್ಯರಾಗಿ ಮೆರೆಯುವ ಸ್ಟಾರ್ಗಳು ನಿಜಜೀವನದಲ್ಲಿ ಯಾವ ರೀತಿ ಇರುತ್ತಾರೆ ಎನ್ನುವುದನ್ನು ಜನ ಗಮನಿಸುತ್ತಾರೆ. ಸೆಲೆಬ್ರಿಟಿಗಳು ಸಾರ್ವಜನಿಕ ಬದುಕಿನಲ್ಲಿ ತೋರುವ ವರ್ತನೆ, ನಡೆದುಕೊಳ್ಳುವ ರೀತಿ, ನೀಡುವ ಹೇಳಿಕೆಗಳು ಅವರ ಚಿತ್ರಗಳ ಹಣೆಬರಹವನ್ನೂ ನಿರ್ಧರಿಸುತ್ತವೆ. ಯಾವುದೇ ನಟನನ್ನು ಜನ ಆತ ನಟಿಸಿದ ಚಿತ್ರಗಳ ಮೂಲಕ ಇಷ್ಟ ಪಟ್ಟಿರುತ್ತಾರೆಯೇ ಹೊರತು, ಆತನ ಜಾತಿ ಅಥವಾ ಮತ್ಯಾವುದೋ ಕಾರಣಕ್ಕಲ್ಲ. ಚಿತ್ರ ಚೆನ್ನಾಗಿದ್ದರೆ, ಸ್ಟಾರ್ಗಳಿಗೆ ಬೆಲೆ. ಇಲ್ಲವಾದಲ್ಲಿ ಆತ ಅಮಿತಾಭ್ ಬಚ್ಚನ್ ಆಗಿರಲಿ, ಶಾರುಖ್ ಖಾನ್, ಸಲ್ಮಾನ್ ಖಾನ್ ಆಗಿರಲಿ ಜನ ನೋಡುವುದಿಲ್ಲ. ಸೂಪರ್ಸ್ಟಾರ್ಗಳ ನಾಮಬಲದಿಂದ, ವರ್ಚಸ್ಸಿನಿಂದ, ಅಬ್ಬರದ ಪ್ರಚಾರದಿಂದ ಚಿತ್ರಗಳಿಗೆ ಭರ್ಜರಿ ಓಪನಿಂಗ್ ಕೊಡಿಸಬಹುದು. ಏಕಕಾಲಕ್ಕೆ ಸಾವಿರಾರು ಸ್ಕ್ರೀನ್ಗಳಲ್ಲಿ ಜಗದಗಲ ಬಿಡುಗಡೆಗೊಳಿಸಿ ಹಾಕಿದ ಬಂಡವಾಳ ಮರಳಿ ಪಡೆಯಬಹುದು. ಕಮರ್ಷಿಯಲ್ ಹಿಟ್ ಎಂದೂ ಹೇಳಿಕೊಳ್ಳಬಹುದು. ಆದರೆ, ಚಿತ್ರ ಚೆನ್ನಾಗಿಲ್ಲದಿದ್ದರೆ ಜನಾಭಿಪ್ರಾಯವನ್ನು ಬದಲಾಯಿಸಲು ಸಾಧ್ಯವಿಲ್ಲ.
‘ಲಾಲ್ ಸಿಂಗ್ ಛಡ್ಡಾ’ ಗುಣಮಟ್ಟದಲ್ಲಿ ಚೆನ್ನಾಗಿದ್ದಿರಬಹುದು. ಇದು ಹಾಲಿವುಡ್ನ ಸಾರ್ವಕಾಲಿಕ ಜನಪ್ರಿಯ ‘ಫಾರೆಸ್ಟ್ ಗಂಪ್’ ಚಿತ್ರದ ರೀಮೇಕ್. ಪ್ರಯೋಗಶೀಲತೆಗೆ, ಹೊಸಬಗೆಯ ಪಾತ್ರಗಳಿಗೆ, ಸವಾಲುಗಳಿಗೆ ಒಡ್ಡಿಕೊಂಡು, ಮೇಧಾವಿ ನಟ ಎಂಬ ಹೊಗಳಿಕೆಗೆ ಪಾತ್ರರಾಗಿರುವ ಆಮೀರ್ ಖಾನ್, ಮುಗ್ಧತೆ, ಮಗುವಿನ ಮನಸ್ಸಿನ ‘ಫಾರೆಸ್ಟ್ ಗಂಪ್’ ಪಾತ್ರವನ್ನು ‘ಲಾಲ್ಸಿಂಗ್ ಛಡ್ಡಾ’ ಹೆಸರಿನಲ್ಲಿ ಯಾವ ರೀತಿ ಭಾರತೀಯಗೊಳಿಸಿರಬಹುದು ಎಂಬ ಕುತೂಹಲ ಇದ್ದೇ ಇದೆ. ಆದರೆ, ಆಮೀರ್ರ ಸಾರ್ವಜನಿಕ ಬದುಕಿನ ವ್ಯಕ್ತಿಗತ ನಿಲುವುಗಳು, ಅವರು ಹಿಂದಿನ ಚಿತ್ರಗಳ ಮೂಲಕ ಬಿಂಬಿಸಿದ ಅಭಿಪ್ರಾಯಗಳು ಸದ್ಯ ದುಬಾರಿಯಾಗಿ ಪರಿಣಮಿಸಿದೆ. ಅಸಹಿಷ್ಣುತೆ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಆಮೀರ್ ‘ಭಾರತದಲ್ಲಿನ ಅಸಹಿಷ್ಣು ವಾತಾವರಣದಿಂದ ಪತ್ನಿ ಕಿರಣ್ ಭಯಭೀತಗೊಂಡಿದ್ದಾಳೆ. ಮಕ್ಕಳ ಸಲುವಾಗಿ ವಿದೇಶದಲ್ಲಿ ನೆಲೆಸುವ ಬಗ್ಗೆ ಯೋಚಿಸುವಂತಾಗಿದೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸೂಪರ್ಹಿಟ್ ‘ಪಿಕೆ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಹಿಂದು ಧರ್ಮ, ದೇವರು, ನಂಬಿಕೆಗಳನ್ನು ಅವಹೇಳನ ಮಾಡಿ, ಜನರ ಧಾರ್ವಿುಕ ಭಾವನೆಗಳಿಗೆ ಘಾಸಿಯಾಗುವಂಥ ಪಾತ್ರಗಳನ್ನು ನಿರ್ವಹಿಸಿದ್ದರು. ದೇವರಿಗೆ ಹಾಲಿನ ಅಭಿಷೇಕ ಮಾಡುವುದು ವ್ಯರ್ಥ. ಅದರ ಬದಲು ಬಡಮಕ್ಕಳಿಗೆ ನೀಡಿ ಎಂಬಂಥ ಅವರ ಸಲಹೆಗಳು ಅಸಮಾಧಾನಕ್ಕೆ ಕಾರಣವಾಗಿದ್ದವು. ಸದ್ಯ ಟ್ವಿಟರ್ ಸೇರಿದಂತೆ ಪ್ರಭಾವಿ ಜಾಲತಾಣಗಳಲ್ಲಿ ‘ಲಾಲ್ ಸಿಂಗ್ ಛಡ್ಡಾ ಬಾಯ್ಕಾಟ್ ಅಭಿಯಾನ’ ಟ್ರೆಂಡಿಂಗ್ನಲ್ಲಿದ್ದು, ‘ಆಮೀರ್ ಖಾನ್ರ ಚಿತ್ರ ನೋಡುವ ಬದಲು ಅದೇ ಹಣವನ್ನು ಬಡ ಮಕ್ಕಳಿಗಾಗಿ ಖರ್ಚು ಮಾಡಿ, ಕಷ್ಟದಲ್ಲಿದ್ದವರಿಗೆ ನೆರವಾಗಿ’ ಎಂಬ ಸಲಹೆ ಟಿಪ್ಪಣಿಗಳು ಬರುತ್ತಿವೆ. ಈ ಚಿತ್ರದ ನಾಯಕಿ ಕರೀನಾ ಕಪೂರ್ ಖಾನ್ರ ಸಾರ್ವಜನಿಕ ಬದುಕಿನ ಹೇಳಿಕೆಗಳು ಕೂಡ ಚಿತ್ರದ ಬಾಯ್ಕಾಟ್ ಬೆದರಿಕೆ ಕರೆಗೆ ಪೂರಕವಾಗಿವೆ. ಕರೀನಾ, ಹಿಂದೊಮ್ಮೆ ‘ನಮ್ಮ ಚಿತ್ರಗಳನ್ನು ನೋಡಿ ಎಂದು ಯಾರಿಗೂ ಬಲವಂತ ಮಾಡುವುದಿಲ್ಲ. ಇಷ್ಟವಿಲ್ಲದಿದ್ದರೆ ನೋಡಬೇಡಿ’ ಎಂಬ ಉದ್ಧಟ ಹೇಳಿಕೆ ನೀಡಿದ್ದರು. ಭಾರತವನ್ನು ಕೊಳ್ಳೆ ಹೊಡೆದ ನರರಕ್ಕಸ ತೈಮೂರನ ಹೆಸರನ್ನು ತನ್ನ ಮಗನಿಗಿಟ್ಟಿರುವುದು ಕೂಡ ಕರೀನಾ ಕುರಿತ ಜನಾಭಿಪ್ರಾಯ ಬದಲಾಗಲು ಕಾರಣವಾಗಿದೆ. ಇಂಥ ಹಲವು ಕಾರಣಗಳು ಒಟ್ಟಾಗಿ ಬಾಯ್ಕಾಟ್ ಲಾಲ್ಸಿಂಗ್ ಛಡ್ಡಾ ಅಭಿಯಾನ ತೀವ್ರತೆ ಪಡೆದುಕೊಂಡಿದ್ದು, ‘ದಯವಿಟ್ಟು ನನ್ನ ಚಿತ್ರವನ್ನು ಎಲ್ಲರೂ ನೋಡಿ’ ಎಂದು ಆಮೀರ್ ಖಾನ್ ಕೈಮುಗಿದು ಬೇಡುವ ಪರಿಸ್ಥಿತಿ ನಿರ್ವಣವಾಗಿದೆ.
ಭಾರತೀಯ ಚಿತ್ರರಂಗವೆಂದರೆ ಯಾವತ್ತೂ ಬಾಲಿವುಡ್ಗೆ ಸೀಮಿತವಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಸತ್ಯಜಿತ್ ರೇ, ಶಾಮ್ ಬೆನಗಲ್, ಬಾಲಚಂದರ್, ಪುಟ್ಟಣ್ಣ ಕಣಗಾಲ್ರಂಥ ಮಹಾನ್ ನಿರ್ದೇಶಕರು, ಡಾ. ರಾಜ್ಕುಮಾರ್, ಎಂಜಿಆರ್, ಎನ್ಟಿಆರ್, ಶಿವಾಜಿ ಗಣೇಶನ್, ವಿಷ್ಣುವರ್ಧನ್, ರಜನಿಕಾಂತ್, ಕಮಲಹಾಸನ್ರಂಥ ಹತ್ತಾರು ಮೇರು ನಟರು ವಿವಿಧ ಭಾಷಾ ಚಿತ್ರರಂಗವನ್ನು ಚಿರಸ್ಥಾಯಿಗೊಳಿಸಿ ಅಖಿಲ ಭಾರತ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ಹೀಗಿದ್ದರೂ, ಹಿಂದಿ ಬಾಹುಳ್ಯದ ಉತ್ತರದ ರಾಜ್ಯಗಳಲ್ಲಿ ಬಹು ವಿಸ್ತಾರವಾದ ವೀಕ್ಷಕವರ್ಗವನ್ನು ಹೊಂದಿದ್ದ ಬಾಲಿವುಡ್, ಚಿತ್ರೋದ್ಯಮವೆಂದರೆ ತಾನೊಂದೇ ಎಂಬ ಸರ್ವಾಧಿಕಾರವನ್ನು ಸ್ಥಾಪಿಸಿಕೊಂಡು ಬಿಟ್ಟಿತ್ತು. ಆದರೆ, ಈಗ ಕಾಲ ಬದಲಾಗಿದೆ. ಜಗತ್ತಿನ ಅತ್ಯುತ್ತಮ ಚಿತ್ರಗಳು ಒಟಿಟಿಗಳ ಮೂಲಕ ಜನ ಬಯಸುವ ಭಾಷೆಯಲ್ಲಿ ಮನೆಗೆ ತಲುಪುತ್ತಿರುವ ಹೊಸ ಕಾಲಘಟ್ಟದಲ್ಲಿ ಕಂಟೆಂಟ್ ಈಸ್ ಕಿಂಗ್. ಜಪಾನಿನಲ್ಲಿ ಸುದೀಪ್ರ ಯಕ್ಕ ಸಕ್ಕಾ ಸ್ಟೆಪ್ ಹಾಕುವ, ಆಸ್ಟ್ರೇಲಿಯಾದಲ್ಲಿ ಅಲ್ಲು ಅರ್ಜುನ್ರ ಪುಷ್ಪ ಸ್ಟೈಲಲ್ಲಿ ದಾಡಿ ನೀವುವ, ಅಮೆರಿಕದಲ್ಲಿ ಯಶ್ರ ವೈಲೆನ್ಸ್ ವೈಲೆನ್ಸ್ ಡೈಲಾಗ್ ಗುನುಗುವ ಈ ಕಾಲ ಚಿತ್ರೋದ್ಯಮ ಜಾಗತೀಕರಣಕ್ಕೆ ತೆರೆದುಕೊಂಡಿರುವ ಸುವರ್ಣಯುಗ. ಬಾಲಿವುಡ್ಗಿದು ಆತ್ಮಾವಲೋಕನದ ಕಾಲ.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)