ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಬ್ರಹ್ಮಾವರ ತಾಲೂಕಿನ ಸಾಹೇಬರಕಟ್ಟೆ ಸಮೀಪದ ಗರಿಕೇಮಠ ಶ್ರೀ ಅರ್ಕಗಣಪತಿ ಕ್ಷೇತ್ರದಲ್ಲಿ ದೀಪೇಶ್ ಎಂ. ದೊಡಿಯಾ ಸಿಎ ಲೈಸಿಸ್ಟರ್ ಯು.ಕೆ. ಸೇವಾರ್ಥ ಕ್ಷೇತ್ರದ ಮುಖ್ಯಸ್ಥ ರಾಮಪ್ರಸಾದ ಅಡಿಗ ನೇತೃತ್ವದಲ್ಲಿ ಎರಡು ದಿನಗಳ ಲಕ್ಷ ಲಿಂಗಾರ್ಚನ ವಿಧಿ ಶನಿವಾರ ಆರಂಭಗೊಂಡಿತು.
ಅಷ್ಟ ಮಾತ್ರಿಕೆಗಳನ್ನು ಒಟ್ಟಾಗಿ ಆವೆ ಮಣ್ಣಿಗೆ ಸೇರಿಸಿ ಒಂದು ಲಕ್ಷ ಲಿಂಗಗಳನ್ನು ತಯಾರಿಸಲಾಗಿದ್ದು, ನೂರಾರು ವೈದಿಕ ವಿಪ್ರೋತ್ತಮರು ಧಾರ್ಮಿಕ ವಿಧಿವಿಧಾನಗಳ ಮೂಲಕ ನ್ಯಾಸಾದಿಗಳೊಂದಿಗೆ ಲಿಂಗಾರ್ಚನೆ ರುದ್ರ ಪಾರಾಯಣ ಲಕ್ಷ ಲಿಂಗ ಪೂಜಾ ಕಾರ್ಯ ಆರಂಭಿಸಿದರು.
ಬೆಳಗ್ಗೆ 7ರಿಂದ ಗುರುಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ, ಋತ್ವಿಗ್ವರಣೆ, ಗೋಪೂಜೆ, ಕೈಲಾಸ ಪ್ರಸ್ತಾರ ನಿರ್ಮಾಣ, ನ್ಯಾಸಾದಿಗಳು, ಲಕ್ಷ ಲಿಂಗಗಳ ಸ್ಥಾಪನೆ, ದೇವತಾ ಆವಾಹನೆ, ತ್ರಿಕಾಲ ಪೂಜೆ, ಲಘುನ್ಯಾಸ ಪೂರ್ವಕ ರುದ್ರಪಾರಾಯಣ, ಕಲ್ಪೋಕ್ತ ಪೂಜೆ, ಬಿಲ್ವಾರ್ಚನೆ, ತಿಲಾರ್ಚನೆ, ಭಸ್ಮಾರ್ಚನೆ, ಸಹಸ್ರನಾಮ ಪೂಜೆ ನಡೆಯಿತು. ಸಂಜೆ 6ರಿಂದ ಶ್ರಾವಣ ಮಾಸ ಶನಿಪ್ರದೋಷ ಪೂಜೆ, ರುದ್ರತ್ರಿಶತಿ ಅರ್ಚನೆ, ಮಂಗಳಾರತಿ ಮುಂತಾದ ಕಾರ್ಯಕ್ರಮಗಳು ನೆರವೇರಿದವು. ಕ್ಷೇತ್ರದ ಮುಖ್ಯಸ್ಥ ರಾಮಪ್ರಸಾದ ಅಡಿಗ, ಸೇವಾರ್ಥಿ ದೀಪೇಶ್ ಎಂ.ದೋಡಿಯಾ, ವೈದಿಕ ವೃಂದ, ಭಕ್ತರು ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಇದೇ ಮೊದಲು
ಅಪೂರ್ವ ಲಕ್ಷಲಿಂಗಾರ್ಚನೆ ಉತ್ತರ ಭಾರತ ಭಾಗಗಳಾದ ಉತ್ತರ ಪ್ರದೇಶ, ಕಾಶೀಯಂತಹ ಮಹಾಕ್ಷೇತ್ರಗಳಲ್ಲಿ ಮಾತ್ರ ನಡೆಯುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಈ ಕಾರ್ಯಕ್ರಮ ಅಪೂರ್ವವಾಗಿದ್ದು, ಕರ್ನಾಟಕ ಇತಿಹಾಸದಲ್ಲೇ ಇದೇ ಮೊದಲ ಬಾರಿ ಲಕ್ಷಲಿಂಗಾರ್ಚನೆ ಕಾರ್ಯಕ್ರಮ ನಡೆಯುತ್ತಿದೆ.