

ಉಡುಪಿ: ಕೃಷ್ಣ ಮಠದಲ್ಲಿ ಬುಧವಾರ ಉತ್ಥಾನ ದ್ವಾದಶೀ ಪ್ರಯುಕ್ತ ತುಳಸೀಪೂಜೆ, ಲಕ್ಷದಿಪೋತ್ಸವ ಮತ್ತು ರಥೋತ್ಸವ ಸಂಭ್ರಮದಿಂದ ನಡೆಯಿತು.
ಮಧ್ಯಾಹ್ನ ರಥಬೀದಿಯಲ್ಲಿ ಲದೀಪೋತ್ಸವಕ್ಕಾಗಿ ಹಣತೆಯನ್ನಿಡುವ ಕಾರ್ಯಕ್ಕೆ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಸಾಯಂಕಾಲ ನವಗ್ರಹ ಪೂಜೆ, ನವಗ್ರಹ ದಾನದ ಬಳಿಕ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಮಹಾಪೂಜಾ ರಥದಲ್ಲಿ ಅನಂತೇಶ್ವರ ಚಂದ್ರೇಶ್ವರ ದೇವರು ಮತ್ತು ಗರುಡ ರಥದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಗಳನ್ನು ಸ್ಥಾಪಿಸಲಾಗಿತ್ತು. ರಾತ್ರಿ ನೂರಾರು ಭಕ್ತರು ಹಚ್ಚಿದ ಹಣತೆ ಬೆಳಕಿನಲ್ಲಿ ರಥಬೀದಿ ಕಂಗೊಳಿಸುತ್ತಿತ್ತು. ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಯಿತು.
ತುಳಸೀ ಪೂಜೆ
ಕೃಷ್ಣಮಠದಲ್ಲಿ ಬೆಳಗ್ಗೆ ಅಶ್ವಯುಜ ಮಾಸದ ಶುಕ್ಲ ಏಕಾದಶಿಯಿಂದ ಕಾರ್ತಿಕ ಮಾಸದ ಶುಕ್ಲ ಏಕಾದಶಿಯವರೆಗೆ 1 ತಿಂಗಳ ಪರ್ಯಂತ ನಡೆದ ಪಶ್ಚಿಮ ಜಾಗರ ಪೂಜೆ ಸಂಪನ್ನಗೊಂಡಿತು. ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಮಠದ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಯಲ್ಲಿ ತುಳಸೀ ಪೂಜೆ ನೆರವೇರಿಸಿದರು.
ಕ್ಷೀರಾಬ್ಧಿ ಪೂಜೆ
ಸಾಯಂಕಾಲ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಕ್ಷೀರಾಬ್ಧಿ ಪೂಜೆ ನಡೆಯಿತು. ಪರ್ಯಾಯ ಉಭಯ ಶ್ರೀಗಳು ತುಳಸೀ ಮತ್ತು ನೆಲ್ಲಿಗಿಡದ ಬುಡದಲ್ಲಿಟ್ಟಿದ್ದ ತೆಂಗಿನ ಹೋಳಿನಲ್ಲಿ ರಾಬ್ದಿ ಅ್ಯರ್ ಪ್ರದಾನ ಮಾಡಿದರು. ಈ ಮೂಲಕ ಚಾತುರ್ಮಾಸ್ಯದ ವೃತವನ್ನು ದೇವರಿಗೆ ಸಮರ್ಪಿಸಿದರು.