

ಲಖನೌ: ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹಾಯಿಸಿದ ಆರೋಪ ಎದುರಿಸುತ್ತಿರುವ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರ ಅವರ ಮಗ ಆಶಿಶ್ ಮಿಶ್ರ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಅಕ್ಟೋಬರ್ 3 ರಂದು ನಡೆದ ಘಟನೆಯಲ್ಲಿ ನಾಲ್ಕು ರೈತರು, ಒಬ್ಬ ಪತ್ರಕರ್ತ ಸೇರಿದಂತೆ ಒಟ್ಟು ಎಂಟು ಜನ ಸಾವಪ್ಪಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆಶಿಶ್ ಮಿಶ್ರ ಅವರನ್ನು ಶನಿವಾರದಂದು ಜಿಲ್ಲಾ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆಸಲಾಗಿತ್ತು. ಸುಮಾರು 12 ಗಂಟೆಗಳ ಕಾಲದ ಪ್ರಶ್ನೋತ್ತರಗಳ ನಂತರ ಹಲವು ಪ್ರಶ್ನೆಗಳಿಗೆ ಮಿಶ್ರ ಸಮಾಧಾನಕರ ಉತ್ತರ ನೀಡದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಇಂದು ಅವರನ್ನು ಲಖೀಂಪುರ ಖೇರಿಯ ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಸರ್ಕಾರಿ ವಕೀಲರು 14 ದಿನಗಳ ಪೊಲೀಸ್ ರಿಮ್ಯಾಂಡ್ನ ಮನವಿ ಮಾಡಿದರು. ಆದರೆ, ಮಿಶ್ರ ಪರ ವಕೀಲರ ವಿರೋಧದ ಹಿನ್ನೆಲೆಯಲ್ಲಿ, ನ್ಯಾಯಾಲಯವು, 3 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿ ಆದೇಶ ಹೊರಡಿಸಿತು ಎನ್ನಲಾಗಿದೆ. ಅಕ್ಟೋಬರ್ 12 ರಿಂದ 14 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಆರೋಪಿ ಮಿಶ್ರರ ವಿಚಾರಣೆ ನಡೆಸಲು ಅವಕಾಶ ನೀಡಲಾಗಿದೆ. (ಏಜೆನ್ಸೀಸ್)