ಟಿಕ್​ಟಾಕ್​ ಮಾಡಿದ್ದಕ್ಕೆ ಜೀವನವೇ ಬದಲಾಯಿತು: ಅಮಾನತು ಆದರೂ ಸ್ಟಾರ್​ ಆದ ಪೊಲೀಸ್​ ಅಧಿಕಾರಿ

tiktok
Published on

ಅಹಮದಾಬಾದ್​: ಟಿಕ್​ಟಾಕ್​ ಆ್ಯಪ್​ ಬಂದ ಮೇಲೆ ಮೂಲೆ ಮೂಲೆಯಲ್ಲಿದ್ದ ಪ್ರತಿಭೆಗಳೆಲ್ಲ ಮುಖ್ಯ ಭೂಮಿಕೆಗೆ ಬಂದಿವೆ. ಅದೇ ರೀತಿಯಲ್ಲಿ ಟಿಕ್​ಟಾಕ್​ನಲ್ಲಿ ಪ್ರತಿಭೆ ತೋರಿಸಲು ಹೋಗಿ ಅಮಾನತು ಆಗಿದ್ದ ಪೊಲೀಸ್​ ಪೇದೆಯೊಬ್ಬಳ ಸುದ್ದಿ ಕೆಲ ತಿಂಗಳ ಹಿಂದೆ ಹರಿದಾಡಿತ್ತು. ಪೊಲೀಸ್​ ಠಾಣೆಯಲ್ಲಿ ಟಿಕ್​ಟಾಕ್​ ಮಾಡಿ ಅಮಾನತು ಆಗಿದ್ದ ಮಹಿಳಾ ಪೇದೆ ಇದೀಗ ಗುಜರಾತ್​ನ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ.

ಅಲ್ಪಿತಾ ಚೌಧರಿ ಹೆಸರಿನ ಪೊಲೀಸ್​ ಅಧಿಕಾರಿ ಪೊಲೀಸ್​ ಠಾಣೆಯಲ್ಲಿ ಟಿಕ್​ಟಾಕ್​ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಅದೇ ಕಾರಣದಿಂದಾಗಿ ಲೋಕ್​ ರಕ್ಷಕ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆಕೆಯನ್ನು ಅಮಾನತು ಮಾಡಲಾಗಿತ್ತು. ಅಮಾನತು ಆದಾಗಿನಿಂದ ಸುದ್ದಿಯಲ್ಲಿದ್ದ ಆಕೆ ಗುಜರಾತ್​ನ ವಿಡಿಯೋ ಆಲ್ಬಂಗಳಲ್ಲಿ ನಟಿಸಿದ್ದಾರೆ.

ಕಳೆದ ಸೆಪ್ಟೆಂಬರ್​ ತಿಂಗಳಲ್ಲಿ ಅಲ್ಪಿತಾ ಅವರ ಮೊದಲ ವಿಡಿಯೋ ಆಲ್ಬಂ ಬಿಡುಗಡೆಗೊಂಡಿತ್ತು. ಅಮಾನತು ಆದಾಗಿನಿಂದ ನಟನೆ ಕಡೆ ಹೆಚ್ಚು ಗಮನ ಕೊಟ್ಟಿರುವ ಅವರು ಒಟ್ಟು ನಾಲ್ಕು ವಿಡಿಯೋ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ. ಎರಡರಲ್ಲಿ ತಾವೇ ಹಾಡಿದ್ದಾರೆ ಕೂಡ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಆಕೆಯ ಕುಚ್​ ಕೇರಿ, ಪಕೀ ಕೇರಿ ಹೆಸರಿನ ವಿಡಿಯೋ ಆಲ್ಬಂ ಬಿಡುಗಡೆಗೊಂಡಿದೆ. ಗುಜರಾತ್​ನ ನಟ ನಟಲ್​ ಬರೋಟ್​ನೊಂದಿಗೆ ಅಲ್ಪಿತಾ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಅಲ್ಪಿತಾಗೆ ಬಾಲ್ಯದಿಂದಲೂ ನಟಿ, ಮಾಡೆಲ್​ ಅಥವಾ ಗಾಯಕಿ ಆಗಬೇಕು ಎನ್ನುವ ಕನಸಿತ್ತು. ಆದರೆ ಆಕೆಯ ತಂದೆ ಪೊಲೀಸ್​ ಇಲಾಖೆಯಲ್ಲಿದ್ದ ಕಾರಣ ಆಕೆಯೂ ಅದರಲ್ಲೇ ಸೇವೆ ಸಲ್ಲಿಸಬೇಕು ಎಂದು ಆಸೆ ಪಟ್ಟಿದ್ದರಂತೆ. ಒಂದು ಕನಸಿಗಾಗಿ ಇನ್ನೊಂದು ಕನಸನ್ನು ಬಲಿ ಕೊಡುಲಾಗುವುದಿಲ್ಲ ಎಂದು ಆಕೆ ತಿಳಿಸಿದ್ದಾರೆ.

ಸದ್ಯ ಅಲ್ಪಿತಾ ಮೆಹ್ಸಾನಾದ ಕಾಡಿ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಕಷ್ಟು ಸಿನಿಮಾ ಆಫರ್​ಗಳು ಬಂದಿದ್ದು, ಇಲಾಖೆ ಅನುಮತಿ ನೀಡಿದರೆ ಸಿನಿಮಾಗಳಲ್ಲಿ ನಟಿಸುವುದಾಗಿ ಆಕೆ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net