ಭಗವತ್ ಪ್ರಜ್ಞಾಪೂರ್ವಕ ವೈಭೋಗದಿಂದ ಪುಣ್ಯಪ್ರಾಪ್ತಿ

IMG-20240823-WA0011
Published on

ಉಡುಪಿ : ಯಾವುದೇ ಸುಖವನ್ನು ಭಗವಂತನ ಭಕ್ತಿಯ ಜೊತೆ ಅನುಭವಿಸಬೇಕು. ಭಗವಂತನ ಪೂಜಾ ರೂಪದಲ್ಲಿ ಸ್ವೀಕರಿಸಬೇಕು. ವೈಭವದ ಜೀವನದಲ್ಲಿ ದೇವರನ್ನು ಮರೆಯಬಾರದು. ಹಬ್ಬಗಳನ್ನು ಭಗವತ್ ಪ್ರಜ್ಞೆ ಮೂಲಕ ಆಚರಿಸಿದಾಗ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.


ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಸಪ್ತೋತ್ಸವ ಅಂಗವಾಗಿ ನಡೆದ ಲಡ್ಡು ಉತ್ಸವ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ವೈಭೋಗಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಆದರೆ ದೇವರನ್ನು  ಮರೆತು ವೈಭವದ ಆಚರಣೆಗಳನ್ನು ಮಾಡುತ್ತೇವೆ. ಇದರಿಂದ ಪಾರಮಾರ್ಥಿಕ ಸುಖ ಲಭಿಸುವುದಿಲ್ಲ. ಸಾತ್ವಿಕ ರೀತಿಯಲ್ಲಿ ವೈಭೋಗ ತಪ್ಪಲ್ಲ ಎಂದರು.  


ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹಾಗೂ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಿದರು.


ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಹಿಂದೂ ಧರ್ಮವನ್ನು ನಾಶಮಾಡಲು ಅನೇಕ ಶಕ್ತಿಗಳು ಕೆಲಸ ಮಾಡುತ್ತಿದ್ದು, ಈ ಬಗ್ಗೆ  ಸಮಾಜ ಜಾಗೃತಗೊಳ್ಳಬೇಕು. ಅಷ್ಟಮಠಗಳು ಧರ್ಮವನ್ನು ಸದೃಢಗೊಳಿಸುವ ಕಾರ್ಯವನ್ನು ಮಾಡುತ್ತಿವೆ ಎಂದರು.


ವಖ್ಫ್ ಕಾಯ್ದೆಗೆ ವಿರೋಧವೇಕೆ?
ಕಾಂಗ್ರೆಸ್ ಸರ್ಕಾರ ಭೂ ಸುಧಾರಣೆ ಕಾಯ್ದೆ ಜಾರಿ ಮಾಡಿದ ಸಂದರ್ಭದಲ್ಲಿ ಅನೇಕ ಮಠಗಳು ಸಾವಿರಾರು ಎಕ್ರೆ ಭೂಮಿ ಕಳೆದುಕೊಂಡವು. ಸ್ವಾಮೀಜಿಗಳು ವಿರೋಧವ್ಯಕ್ತಪಡಿಸಿಲ್ಲ. ಉದಾರವಾಗಿ ಸಮಾಜಕ್ಕೆ ನೀಡಿದ್ದಾರೆ. ಆದರೆ ವಕ್ಪ ಕಾಯ್ದೆ ತಿದ್ದುಪಡಿಯನ್ನು ಕೆಲವರು ವಿರೋಧಿಸುತ್ತಿದ್ದಾರೆ ಎಂದು ಖೇದವ್ಯಕ್ತಪಡಿಸಿದರು.


ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಕರ್ಣಾಟಕ ಬ್ಯಾಂಕ್ ಜಿಎಂ ಜಯನಾಗರಾಜ್ ರಾವ್, ಲೇಖಕಿ ಪ್ರಜ್ಞಾ ಮಾರ್ಪಳ್ಳಿ, ಉದ್ಯಮಿ ರಮೇಶ್ ಆಚಾರ್ಯ, ಎನ್. ಆರ್. ಕುಲಕರ್ಣಿ, ದಶರಥ್ ಸಿಂಗ್ ಉಪಸ್ಥಿತರಿದ್ದರು. ರಮೇಶ್ ಭಟ್ ಸ್ವಾಗತಿಸಿ, ಮಹಿತೋಷ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net