ನರಹರಿ ಪರ್ವತ ಇನ್ನೂ ಎತ್ತರ! : ಭೂ ಕೈಲಾಸಕ್ಕಿಲ್ಲ ದಾರಿ ಸರ್ವೀಸ್ ರಸ್ತೆ : ನಿರ್ಮಿಸುವ ಕಾಮಗಾರಿ ಪ್ರಗತಿ : ವಾಹನ ನಿಲುಗಡೆಗೆ ಸ್ಥಳಾವಕಾಶ ಕೊರತೆ

New Project (27)
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಬಂಟ್ವಾಳ ತಾಲೂಕಿನ ನರಹರಿ ಪರ್ವತ ಬಿ.ಸಿ.ರೋಡು ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದಾಗಿ ಮತ್ತಷ್ಟು ಎತ್ತರವಾಗಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ದೂರವೂ ಆಗಿದೆ!

ಚತುಷ್ಪಥ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಕಲ್ಲಡ್ಕ, ಮೆಲ್ಕಾರ್ ನಡುವಿನ ಬೋಳಂಗಡಿ ತಿರುವು ಹಾಗೂ ಏರು ರಸ್ತೆ ಇದೀಗ ನೇರ ರಸ್ತೆಯಾಗಿ ಪರಿವರ್ತನೆ ಹೊಂದಿದ್ದು, ಏರು ರಸ್ತೆಯನ್ನು ತಗ್ಗಿಸಿ ಕಾಂಕ್ರೀಟ್ ಚತುಷ್ಪಥ ರಸ್ತೆ ಸಿದ್ಧವಾಗುತ್ತಿದೆ. ಈ ಚತುಷ್ಪಥ ಹೆದ್ದಾರಿ ಕಾಮಗಾರಿ ಕಾರಣದಿಂದ ಹೆದ್ದಾರಿಯಿಂದ ನೇರ ನರಹರಿ ಪರ್ವತ ರಸ್ತೆಗೆ ಸಂಪರ್ಕಿಸುತ್ತಿದ್ದ ರಸ್ತೆಯನ್ನು ಕಡಿದು ಹಾಕಲಾಗಿದೆ. ಪಕ್ಕದಲ್ಲಿಯೇ ಸರ್ವೀಸ್ ರಸ್ತೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾರಣದಿಂದ ಚತುಷ್ಪಥ ರಸ್ತೆಯಿಂದ ನರಹರಿ ಪರ್ವತ ಮತ್ತಷ್ಟು ಎತ್ತರ, ಸುತ್ತು ಬಳಸಿ ಹೋಗಬೇಕಾಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ದೂರ ಎನ್ನುವಂತಾಗಿದೆ.

ಆಟಿ ಅಮವಾಸ್ಯೆ ತೀರ್ಥ ಸ್ನಾನಕ್ಕೆ ಬರುವ ಬಹುತೇಕ ಮಂದಿ ಕಾಲ್ನಡಿಗೆಯಲ್ಲಿಯೇ ಸಂಚರಿಸುತ್ತಾರೆ. ವಾಹನಗಳಲ್ಲಿ ಬರುವವರು ತಮ್ಮ ವಾಹನಗಳನ್ನು ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಬೆಟ್ಟ ಏರುತ್ತಿದ್ದರು. ಈ ಬಾರಿ ಹೆದ್ದಾರಿಯಲ್ಲಿ ಕಾಮಗಾರಿ ಕಾರಣದಿಂದ ವಾಹನ ನಿಲುಗಡೆಗೆ ಸ್ಥಳಾವಕಾಶ ಕೊರತೆ ಕಾಡಲಿದೆ. ಸಂಚಾರಿ ಪೊಲೀಸರಿಗೂ ಹೆಚ್ಚು ತ್ರಾಸ ಉಂಟಾಗಲಿದೆ. ಈ ಹಿಂದೆ ಹೆದ್ದಾರಿ ಪಕ್ಕದಲ್ಲಿ ಶ್ರೀ ಸದಾಶಿವ ದೇವಸ್ಥಾನದ ದ್ವಾರ ಇದ್ದು, ಅಗೆದು ಹಾಕಿರುವ ಮಣ್ಣಿನ ನಡುವೆ ಈ ದ್ವಾರ ಕಾಣಿಸುತ್ತಿಲ್ಲ. ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ಭೂ ಕೈಲಾಸಕ್ಕೆ ದಾರಿ ಇಲ್ಲದಂತಾಗಿದೆ.

ಸರ್ವೀಸ್ ರಸ್ತೆ ಪಯಣ

ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಆಟಿ ಅಮವಾಸ್ಯೆ ತೀರ್ಥಸ್ನಾನಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಬರುವುದು ಪ್ರತೀತಿ. ಈ ಬಾರಿ ಈ ರಸ್ತೆಗೆ ತಾಗಿಕೊಂಡೇ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ಸವಾಲು ಎದುರಿಸಬೇಕಾದ ಅನಿವಾರ್ಯತೆ ಇದೆ. ಕಾಮಗಾರಿಯ ಈಗಿನ ನೋಟದಲ್ಲಿ ಕಲ್ಲಡ್ಕ ಕಡೆಯಿಂದ ಹೋಗುವವರಿಗೆ ಮಾತ್ರ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳುತ್ತಿದ್ದು, ಬಿ.ಸಿ.ರೋಡು, ಮಂಗಳೂರಿನಿಂದ ಬರುವ ಭಕ್ತರು ಕಲ್ಲಡ್ಕ ಫ್ಲೈ ಓವರ್ ಮೇಲೆ ಸಾಗದೆ, ಕಲ್ಲಡ್ಕ ಸರ್ವೀಸ್ ರಸ್ತೆಗೆ ಸಾಗಿ ಕೆ.ಸಿ.ರೋಡು ತಿರುವಿನಲ್ಲಿ ಯೂಟರ್ನ್ ಹೊಡೆದು ನರಹರಿ ಪರ್ವತಕ್ಕೆ ಸರ್ವೀಸ್ ರಸ್ತೆಯ ಪಯಣ ಮಾಡಬೇಕಾಗಿದೆ.

ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದಾಗಿ ಈ ವರ್ಷ ಆಟಿ ತೀರ್ಥ ಸ್ನಾನಕ್ಕೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ವಲ್ಪ ತೊಂದರೆಯಾಗಲಿದೆ. ಮುಂದಿನ ವರ್ಷಕ್ಕೆ ಈ ಸಮಸ್ಯೆ ಬಗೆಹರಿದು ಉತ್ತಮ ರಸ್ತೆ ನಿರ್ಮಾಣವಾಗಲಿದೆ. ಆಟಿ ಅಮಾವಾಸ್ಯೆಗೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪಕ್ಕದಲ್ಲಿಯೇ ಪರ್ಯಾಯ ರಸ್ತೆ ಇದೆ. ಎಂ.ಎನ್.ಕುಮಾರ್, ಆಡಳಿತ ಮಂಡಳಿ ಟ್ರಸ್ಟಿ, ಶ್ರೀ ನರಹರಿ ಸದಾಶಿವ ದೇವಸ್ಥಾನ ಪ್ರತಿ ವರ್ಷ ದೇವಸ್ಥಾನಕ್ಕೆ ಆಟಿ ಅಮವಾಸ್ಯೆಗೆ ಕುಟುಂಬ ಸಮೇತರಾಗಿ ಬರುತ್ತಿದ್ದೇವು. ಹೆದ್ದಾರಿ ನಿರ್ಮಾಣ ಕೆಲಸದಿಂದಾಗಿ ಈ ವರ್ಷ ವಾಹನಗಳಲ್ಲಿ ಬರುವವರಿಗೆ ಸ್ವಲ್ಪ ತೊಂದರೆಯಾಗುವ ಸಾಧ್ಯತೆ ಇದೆ. ಜೀವನ್ ಕುಮಾರ್, ಮಾಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net