

ಅನ್ಸಾರ್ ಇನೋಳಿ, ಉಳ್ಳಾಲ
ಒಂದೇ ಕಟ್ಟಡದಲ್ಲಿ ಎರಡು ಶಾಲೆಗಳು, ಆವರಣದಲ್ಲೇ ಶಿಕ್ಷಣಾಧಿಕಾರಿ ಕಚೇರಿ. ಆದರೂ ಒಂದು ಶಾಲೆಯಲ್ಲಿದ್ದುದು ಕೇವಲ ಆರು ವಿದ್ಯಾರ್ಥಿಗಳು. ಇದಕ್ಕೆ ಅಡ್ಡಿಯಾಗಿದ್ದು, ಉರ್ದು ಎನ್ನುವ ಹೆಸರು. ಆದರೆ ಈ ಶಾಲೆಗೆ ಬಂದ ಮುಖಶಿಕ್ಷಕಿ ಸ್ಲಂ ಏರಿಯಾಕ್ಕೆ ಕಾಲಿಟ್ಟ ಫಲವಾಗಿ ನಾಲ್ಕೇ ದಿನಗಳಲ್ಲಿ ಮಕ್ಕಳು ತುಂಬುವಂತೆ ವಾಡಿದ್ದಾರೆ. ಇದೀಗ ಶಾಲೆಯಲ್ಲಿ ಮೂಲಸೌಕರ್ಯ ಕೊರತೆ ಎದುರಾಗಿದೆ. ಇಂಥದ್ದೊಂದು ಪವಾಡ ಮಂಗಳೂರಿನ ಬೋಳಾರ ಹಿರಿಯ ಪ್ರಾಥಮಿಕ ವೆಸ್ಟ್(ಉರ್ದು) ಶಾಲೆಯಲ್ಲಿ ನಡೆದಿದೆ.
1913ರಲ್ಲಿ ಆರಂಭಗೊಂಡಿದ್ದ ಶಾಲೆಗೆ ಬರೋಬ್ಬರಿ 111 ವರ್ಷಗಳ ಇತಿಹಾಸವಿದೆ. ನಂತರದ ದಿನಗಳಲ್ಲಿ ಮಕ್ಕಳ ಸಂಖ್ಯೆಗೆೆ ಅನುಗುಣವಾಗಿ ಕೊಠಡಿ ಸಾಕಾಗದ ಕಾರಣ ಶಾಲೆಯನ್ನು ವಿಸ್ತರಿಸಲಾಯಿತು. ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆ, ವೆಸ್ಟ್(ಉರ್ದು) ಎನ್ನುವ ಹೆಸರು ನೀಡಲಾಯಿತು.ಆರಂಭದಲ್ಲಿ 1ರಿಂದ 7ರವರೆಗೆ ಶಿಕ್ಷಣ ನೀಡಲಾಗುತ್ತಿದ್ದು, 300 ಮಕ್ಕಳು ಪ್ರತಿವರ್ಷ ಕಲಿಯುತ್ತಿದ್ದರು. ಕಾಲಕ್ರಮೇಣ ಆಂಗ್ಲ ಭಾಷಾ ಮೋಹಕ್ಕೆ ಸಿಲುಕಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಾ ಬಂತು. ಶಾಲೆ ಉಳಿಸುವುದು ಇಲಾಖೆಗೂ ಸವಾಲಾಯಿತು. ಯಾಕೆಂದರೆ ಉರ್ದು ಎಂದಿರುವ ಕಾರಣ ಈ ಭಾಷಿಕರ ಅಗತ್ಯವೂ ಇತ್ತು.
ಪ್ರಸಕ್ತ ಶೈಕ್ಷಣಿಕ ಸಾಲಿನ ಆಗಸ್ಟ್31ರ ವರೆಗೆ ದಾಖಲಾಗಿದ್ದ ಮಕ್ಕಳ ಸಂಖ್ಯೆ 9. ಹಾಜರಾಗುತ್ತಿದ್ದವರು ಐದು ಅಥವಾ ಆರು ವಾತ್ರ! 2023ರಲ್ಲಿ ಇಲ್ಲಿಗೆ ಬಂದ ಶಿಕ್ಷಕಿ ಸುಧಾ ಕುಂಬಾರ್ ಮೂರು ವಲಸೆ ಕಾರ್ಮಿಕರ ಮಕ್ಕಳನ್ನು ಸೇರಿಸಿದ್ದರು. ಕ್ಲಸ್ಟರ್ ಸಿ.ಆರ್.ಪಿ. ಆಗಿದ್ದ ಗೀತಾ ಜುಡಿತ್ ಸಲ್ದಾನಾ ಅವರು ಕೌನ್ಸೆಲಿಂಗ್ ಸಂದರ್ಭ ಈ ಶಾಲೆಯನ್ನು ಆಯ್ಕೆ ವಾಡಿಕೊಂಡರು. ಸೆ.1ರಂದು ಪ್ರಭಾರ ಮುಖ್ಯಶಿಕ್ಷಕಿಯಾಗಿ ಶಾಲೆಗೆ ಬಂದಾಗ ಇಲ್ಲಿದ್ದ ಮಕ್ಕಳ ಸಂಖ್ಯೆ ನೋಡಿ ಮರುಗಿದರು. ತಕ್ಷಣವೇ ಕಾರ್ಯಪ್ರವತ್ತರಾಗಿ ಪರಿಸರದ ಸ್ಲಂ ಪ್ರದೇಶಗಳಲ್ಲಿ ಸರ್ವೇಗೆ ಇಳಿದರು. ಈ ಸಂದರ್ಭ ಮೀನಿನ ಕಾರ್ಖಾನೆಯ ಕಾರ್ಮಿಕರ 80ಕ್ಕೂ ಅಧಿಕ ಮಕ್ಕಳು ಅಲ್ಲಲ್ಲಿ ಅಲೆದಾಡುತ್ತಿರುವುದು ಕಂಡು ಬಂದಿದೆ. ಪಾಲಕರ ಮನವೊಲಿಸಿ ದಾಖಲೆಗಳಿದ್ದ 52 ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ. ಇನ್ನೂ 30 ಮಕ್ಕಳ ಸೇರ್ಪಡೆಗೆ ದಾಖಲೆಗಳಿಲ್ಲದೆ ಸಮಸ್ಯೆಯಾಗಿದೆ
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಾ ಬಂದಾಗ ಶಿಕ್ಷಕರ ವರ್ಗಾವಣೆಯಾಗಿದೆ. ಪ್ರಸಕ್ತ ಮಕ್ಕಳ ಸಂಖ್ಯೆ 58ಕ್ಕೆ ತಲುಪಿದೆ. ದರೆ ಮಕ್ಕಳ ಸಂಖ್ಯೆಗನುಗುಣವಾಗಿ ಶಿಕ್ಷಕರ ಕೊರತೆ ಕಾಣಿಸಿದೆ. ಮೂವರು ಶಿಕ್ಷಕರ ಪೈಕಿ ಇಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಚು, ಡೆಸ್ಕ್‌ಗಳಿಲ್ಲದೆ ನೆಲದಲ್ಲೇ ಮಕ್ಕಳು ಕುಳಿತುಕೊಳ್ಳುವಂತಾಗಿದೆ. ಅಕ್ಷರ ದಾಸೋಹದಡಿ ಮಧ್ಯಾಹ್ನದ ಊಟ ಮತ್ತು ಕ್ಷೀರಭಾಗ್ಯ ಯೋಜನೆಯಡಿ ಹಾಲು ನೀಡಲಾಗುತ್ತಿದೆ. ಮೀನು ಕಾರ್ಖಾನೆಯ ವಾಲೀಕರೇ ಬಟ್ಟಲು ಮತ್ತು ಲೋಟಗಳನ್ನು ನೀಡಿದ್ದಾರೆ. ಕಲಿಕೆಗೆ ಬೇಕಾದ ಪುಸ್ತಕಗಳನ್ನು ನೀಡಲಾಗಿದೆ. ಇರುವುದು ಎರಡು ತರಗತಿ ಕೋಣೆಗಳು ವಾತ್ರ. ಮಕ್ಕಳಿಗೆ ಸಮವಸ, ಡೆಸ್ಕ್, ಬೆಂಚುಗಳ ಅಗತ್ಯವಿದ್ದು, ಶಿಕ್ಷಣ ಪ್ರೇಮಿಗಳು, ದಾನಿಗಳ ಕೃಪಾಕಟಾಕ್ಷ ಬೇಕಿದೆ.
ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭ ಶುಚಿತ್ವದಿಂದಲೂ ದೂರವುಳಿದಿದ್ದರು. ಶಿಕ್ಷಕರು ಪಾಲಕರಿಗೆ ನೀಡಿದ ವಾರ್ಗದರ್ಶನದ ಫಲವಾಗಿ ಒಂದಿಷ್ಟು ಸ್ವಚ್ಛತೆ ಕಂಡು ಬಂದಿದೆ. ಆದರೂ ಕೆಲವು ಮಕ್ಕಳು ಕೊಳಕು ಬಟ್ಟೆಯಲ್ಲೇ ಶಾಲೆಗೆ ಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ತುರ್ತಾಗಿ ಸಮವಸದ ಅವಶ್ಯಕತೆ ಇದೆ.
ಗೀತಾ ಜುಡಿತ್ ಅವರು ಶಾಲೆಗೆ ಬಂದು ಸ್ಲಂ ಪ್ರದೇಶದಿಂದ ವಲಸೆ ಕಾರ್ಮಿಕರ ಮಕ್ಕಳನ್ನು ಸೇರಿಸುವ ಪ್ರಯತ್ನ ನಡೆಸಿದ್ದಾರೆ. 52 ಮಕ್ಕಳ ಪೈಕಿ 40 ಹೆಸರು ಸ್ಯಾಟ್ಸ್‌ನಲ್ಲಿ ದಾಖಲಾಗಿದೆ. ಮೂಲ ಸೌಕರ್ಯ ಕೊರತೆ ಇದ್ದು, ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಸುಶ್ಮಾ, ಬಿಇಒ, ಮಂಗಳೂರು ದಕ್ಷಿಣ ವಲಯ. ಸ್ಲಂ ಪ್ರದೇಶದಲ್ಲಿದ್ದ ಶಾಲೆಯ ಮುಖವನ್ನೇ ಕಾಣದ ಮಕ್ಕಳನ್ನು ಗುರುತಿಸಿ ಪಾಲಕರು, ಮೀನಿನ ಕಾರ್ಖಾನೆ ಮಾಲೀಕರ ಮನವೊಲಿಸಿ ಶಾಲೆಗೆ ಸೇರಿಸಲಾಗಿದೆ. ಶಾಲೆಯಲ್ಲೀಗ ಮೂಲ ಸೌಕರ್ಯ ಸಮಸ್ಯೆಯಾಗಿದ್ದು, ದಾನಿಗಳ ಸಹಕಾರ ಬೇಕಿದೆ. ಕನ್ನಡ ಗೊತ್ತಿಲ್ಲದ ಮಕ್ಕಳಿಗೆ ಎಲ್ಲವನ್ನೂ ಮೊದಲಿನಿಂದಲೇ ಕಲಿಸಬೇಕಿದೆ. ಗೀತಾ ಜುಡಿತ್ ಸಲ್ದಾನ, ಮುಖ್ಯಶಿಕ್ಷಕಿ, ಬೋಳಾರ ಹಿಪ್ರಾ ಶಾಲೆ, ವೆಸ್ಟ್ (ಉರ್ದು) ಮೂರು ವರ್ಷ ಆಗಿದೆ. ಎರಡನೇ ತರಗತಿಗೆ ಮನಸ್ಸು ಬಂದಾಗ ಹೋಗುತ್ತಿದ್ದ, ಈಗ ಶಿಕ್ಷಕಿ ಬಂದ ಬಳಿಕ ಶಾಲೆಗೆ ಹೋಗಲು ತುಂಬಾ ಉತ್ಸಾಹ ತೋರುತ್ತಿದ್ದಾನೆ. ನಾವಿಲ್ಲಿ ಕೆಲಸ ವಾಡುವವರೆಗೆ ಶಾಲೆಗೆ ಕಳಿಸುತ್ತೇವೆ. ಆಶಾ ದೇವಿ, ಪೋಷಕಿ