

ಮೈಸೂರು: ರಂಗಭೂಮಿ ಸೇರಿದಂತೆ ಇನ್ನಿತರ ಕಲಾ ಮಾಧ್ಯಮಗಳಲ್ಲಿ ತಾಂತ್ರಿಕ ತಜ್ಞರ ಕೊರತೆ ಹೆಚ್ಚಾಗಿ ಇದೆ ಎಂದು ಹಿರಿಯ ರಂಗಕರ್ಮಿ ಡಾ.ಜೀವನ್ ರಾಂ ಸುಳ್ಯ ಬೇಸರ ವ್ಯಕ್ತಪಡಿಸಿದರು.
ನಗರದ ರಂಗಾಯಣದ ಬಿ.ವಿ ಕಾರಂತ ರಂಗಚಾವಡಿಯಲ್ಲಿ ನಾಟ್ಯಲೇಖ ರಂಗ ಸಮೂಹದಿಂದ ಆಯೋಜಿಸಿರುವ ಏಳು ದಿನಗಳ ಬೆಳಕಿನ ವಿನ್ಯಾಸ ಕಾರ್ಯಾಗಾರಕ್ಕೆ ಶನಿವಾರ ಚಾಲನೆ ನೀಡಿ ಆವರು ಮಾತನಾಡಿದರು.
ರಂಗಭೂಮಿ ಸೇರಿದಂತೆ ಇನ್ನಿತರ ಕಲಾ ಮಾಧ್ಯಮಗಳಲ್ಲಿ ತಾಂತ್ರಿಕ ತಜ್ಞರ ಕೊರತೆ ಹೆಚ್ಚಾಗಿದೆ. ನಾಟಕ ಮತ್ತು ಇತರೆ ಕಾರ್ಯಕ್ರಮಗಳು ಯಶಸ್ವಿಯಾಗಲು ಬೆಳಕು ಹಾಗೂ ಧ್ವನಿ ಬಹಳ ಮುಖ್ಯ ಎಂಬ ಸತ್ಯವನ್ನು ಮರೆಯುತ್ತಿದ್ದೇವೆ. ವಸ್ತ್ರ ವಿನ್ಯಾಸ, ಬೆಳಕಿನ ವಿನ್ಯಾಸದಲ್ಲಿ ಪ್ರಸ್ತುತ ಕಂಡು ಬರುವ ಸಮಸ್ಯೆಗಳನ್ನು ನಿಗಿಸಲು ಇಂತಹ ಕಾರ್ಯಗಾರಗಳ ಆವಶ್ಯಕತೆ ಇದೆ ಎಂದು ಹೇಳಿದರು.
ಇಂದಿನ ದಿನಮಾನದಲ್ಲಿ ರಾಜ್ಯದಲ್ಲಿ ನಾಟಕಗಳ ಪ್ರದರ್ಶನ ಮತ್ತು ಕಲಿಯುವಿಕೆಯು ಮೊದಲಿಗಿಂತ ನೂರು ಪಟ್ಟು ಹೆಚ್ಚಾಗಿದೆ. ಕಾಲೇಜುಗಳಲ್ಲಿ ನಾಟಕ ಪ್ರದರ್ಶನಗಳು ಹೆಚ್ಚುತ್ತಿವೆ. ಇದರ ಜತೆಯಲ್ಲಿ ಯುವ ಸಮೂಹದಲ್ಲಿ ಕಲಿಯುವ ಆಸಕ್ತಿಯೂ ಮೂಡುತ್ತಿದೆ ಬೆಳಕಿನ ವಿನ್ಯಾಸವನ್ನು ಎಲ್ಲರಿಗೂ ಕಲಿಯುವ ಹಸಿವು ಇರುತ್ತದೆ. ಆದರೆ ಮಾಹಿತಿಯ ಕೊರತೆ ಇದೆ ಎಂದು ಹೇಳಿದರು.
ಆದ್ದರಿಂದ ಬೆಳಕಿನ ವಿನ್ಯಾಸ ಕಾರ್ಯಾಗಾರಗಳನ್ನು ರಂಗಾಯಣದ ಮೂಲಕ ಕರ್ನಾಟಕದದ್ಯಾಂತ ವಿಸ್ತರಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ರಂಗಾಯಣದ ನಿರ್ದೇಶಕ ಸತೀಶ್ ತಿಪ್ಪಟೂರು ಮಾತನಾಡಿ, ತಂತ್ರಜ್ಞಾನ ವಿಸ್ತರಿಸಿದಂತೆ ಬೆಳಕಿನ ವಿನ್ಯಾಸ ಹಾಗೂ ರಂಭೂಮಿಯ ಎಲ್ಲ್ಲ ಚಟುವಟಿಕೆಗಳಿಗೆ ತಂತ್ರಜ್ಞಾನ ಬಳಸುವಿಕೆಯೂ ವಿಸ್ತಾರಗೊಳ್ಳುತ್ತಿದೆ. ರಂಗಭೂಮಿಯಲ್ಲಿ ಬದುಕು ಕಟ್ಟಿಕೊಳ್ಳವುದಕ್ಕೆ ಬೆಳಕಿನ ವಿನ್ಯಾಸದಲ್ಲಿ ಹೆಚ್ಚು ಆವಕಾಶವಿದೆ. ಹೆಚ್ಚಿನ ಕೌಶಲಗಳನ್ನು ಆಳವಡಿಸಿಕೊಂಡು ಆವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಆಯೋಜಕರಾದ ಕೃಷ್ಣಕುಮಾರ್ ನಾರ್ಣಕರ್ಜೆ, ಮಹೇಶ್ ಕಲ್ಲತ್ತಿ, ಮಧುಸೂದನ, ಜೀವನ್ ಕುಮಾರ್ ಹೆಗ್ಗೋಡು ಇತರರು ಇದ್ದರು.